ಉತ್ತರ ಪ್ರದೇಶದ ಅಮ್ರೋಹಾದಲ್ಲಿ, ನಿದ್ರಿಸುತ್ತಿದ್ದ ಪೋಷಕರ ಮಧ್ಯೆ ಸಿಲುಕಿ ಒಂದು ತಿಂಗಳ ನವಜಾತ ಶಿಶು ಉಸಿರುಕಟ್ಟಿ ಸಾವನ್ನಪ್ಪಿದೆ. ಡಿಟೇಲ್ ಸ್ಟೋರಿ ಇಲ್ಲಿದೆ.

ಅಮ್ರೋಹಾ: ನಿದ್ರಿಸುತ್ತಿದ್ದ ಪೋಷಕರ ಮಧ್ಯೆ ಸಿಲುಕಿ ನವಜಾತ ಶಿಶು ಸಾವನ್ನಪ್ಪಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಪೋಷಕರ ಮಧ್ಯೆಯೇ ಮಕ್ಕಳು ನಿದ್ರಿಸುವುದು ಸಾಮಾನ್ಯ. ಆದರೆ ಶಿಶುವೊಂದು ಜನಿಸಿದಾಗ ಆರಂಭದ ದಿನಗಳಲ್ಲಿ ಯಾರೂ ಕೂಡ ಪುಟ್ಟ ಮಗುವನ್ನು ತಂದೆ ತಾಯಿ ಮಧ್ಯದಲ್ಲೇ ಮಲಗಿಸಿಕೊಳ್ಳುವುದಿಲ್ಲ, ಮಗು ಪುಟ್ಟದಾಗಿರುವುದು. ಏನಾದರೂ ಕೈ ಕಾಲು ಮಗುವಿಗೆ ತಾಗಿದರೆ ನವಜಾತ ಶಿಶುವಿಗೆ ಹಾನಿಯಾಗುವುದು ಎಂದು ಜಾಗರೂಕರಾಗಿರುತ್ತಾರೆ. ಆದರೆ ಇಲ್ಲೊಂದು ಕಡೆ ಪೋಷಕರ ಎಡವಟ್ಟಿನಿಂದ ಪುಟ್ಟ ಮಗುವೊಂದರ ಜೀವ ಹೋಗಿದೆ. ಈ ಮಗು ನವಂಬರ್ 10ರಂದು ಜನಿಸಿತು. ಅಮ್ರೋಹಾದ ಗಜ್ರೌಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

25 ವರ್ಷದ ಸದ್ದಂ ಅಬ್ಬಾಸಿ ಹಾಗೂ ಆತನ ಪತ್ನಿ ಅಸ್ಮಾಗೆ ನವೆಂಬರ್ 10ರಂದು ಸೂಫಿಯಾನ್ ಎಂಬ ಮಗು ಜನಿಸಿತ್ತು. ಶನಿವಾರ ರಾತ್ರಿ ಈ ದಂಪತಿ ತಮ್ಮ ತಿಂಗಳಷ್ಟೇ ತುಂಬಿದ್ದ ಮಗು ಸೂಫಿಯಾನ್‌ನನ್ನು ತಮ್ಮ ನಡುವೆ ಮಲಗಿಸಿಕೊಂಡಿದ್ದಾರೆ. ಆದರೆ ರಾತ್ರಿ ನಿದ್ರೆಯ ವೇಳೆ ಇಬ್ಬರಿಗೂ ತಿಳಿಯದೇ ಹೊರಳಾಡುವಾಗ ಮಗು ಇವರ ಮಧ್ಯೆ ಸಿಲುಕಿ ಉಸಿರುಕಟ್ಟಿ ಸಾವನ್ನಪ್ಪಿದೆ. ಭಾನುವಾರ ಮುಂಜಾನೆಯಷ್ಟೇ ಪೋಷಕರಿಗೆ ಮಗು ಸಾವನ್ನಪ್ಪಿರುವ ವಿಚಾರ ತಿಳಿದಿದೆ. ಭಾನುವಾರ ಮುಂಜಾನೆ ಮಗುವಿಗೆ ಹಾಲು ಕುಡಿಸುವುದಕ್ಕಾಗಿ ಅಸ್ಮಾ ಎದ್ದು ಮಗುವನ್ನು ಎತ್ತಿಕೊಂಡಾಗ ಮಗುವಿನಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಹೋದಾಗ ಮಗು ಸಾವನ್ನಪಿರುವ ವಿಚಾರ ತಿಳಿದಿದೆ. ಕೂಡಲೇ ಕುಟುಂಬದವರು ಮಗುವನ್ನು ಗಜ್ರೌಲ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಸಿಡ್ನಿಯ ಬೋಂಡಿ ಬೀಚ್‌ನಲ್ಲಿ 15 ಜನರ ಬಲಿ ಪಡೆದ ಯಹೂದಿ ಹಬ್ಬದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಅಪ್ಪ ಮಗ

ಕುಟುಂಬದವರ ಪ್ರಕಾರ, ಮಗು ಹುಟ್ಟಿನಿಂದಲೂ ಬಹಳ ದುರ್ಬಲವಾಗಿತ್ತು. ಮಗುವಿಗೆ ಉಸಿರಾಟದ ಸಮಸ್ಯೆಯೂ ಸೇರಿದಂತೆ ಜಾಂಡಿಸ್ ಸಮಸ್ಯೆಯೂ ಇತ್ತು. ಆದರೆ ಆರೋಗ್ಯ ಕೇಂದ್ರದಲ್ಲಿ ಮಗುವನ್ನು ತಪಾಸಣೆ ಮಾಡಿದ ವೈದ್ಯರ ಪ್ರಕಾರ, ಮಗು ಉಸಿರುಕಟ್ಟಿ ಸಾವನ್ನಪ್ಪಿದೆ. ಘಟನೆಯ ಹಿನ್ನೆಲೆಯಲ್ಲಿ ಮಕ್ಕಳ ತಜ್ಞ ಅಮಿತ್ ವರ್ಮಾ ಅವರು, ಪೋಷಕರಿಗೆ ನವಜಾತ ಶಿಶುಗಳನ್ನು ಜೊತೆಗೆ ಮಲಗಿಸಿಕೊಳ್ಳದೇ ಪ್ರತ್ಯೇಕವಾಗಿ ಮಲಗಿಸಬೇಕು. ಜೊತೆಗೆ ಮಲಗಿಸಿಕೊಳ್ಳುವುದರಿಂದ ಈ ರೀತಿ ಉಸಿರುಕಟ್ಟಿಸಿ ಸಾವನ್ನಪ್ಪುವಂತಹ ಅಚಾನಕ್ ಅಘಾತಗಳು ಹೆಚ್ಚು ಎಂದು ಅವವರು ಹೇಳಿದ್ದಾರೆ. ಘಟನೆಯ ಬಳಿಕ ದಂಪತಿ ಆಘಾತಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಪರಸ್ಪರ ಜಗಳವಾಡಿದ್ದಾರೆ. ನಂತರ ಅವರನ್ನು ಮನೆಯ ಕುಟುಂಬದವರು ಸಮಾಧಾನ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಇವು ಕೆರೆಯಲ್ಲಿ ಅರಳಿ ನಿಂತ ತಾವರೆಗಳಲ್ಲ: ಸಂಭಾರ್ ಸರೋವರದಲ್ಲಿ ಗುಲಾಬಿ ಚಿತ್ತಾರ ಬಿಡಿಸಿದ ಸಾವಿರಾರು ಫ್ಲೇಮಿಂಗೋಗಳು