ನಾಡಿನಾದ್ಯಂತ ಬುಧವಾರ ರಾತ್ರಿ 12 ಗಂಟೆಗೆ ಭರ್ಜರಿಯಾಗಿ ಹೊಸ ವರ್ಷ ಸ್ವಾಗತಿಸಿ ಸಂಭ್ರಮಿಸಿದ ಜನತೆ ಹೊಸ ವರ್ಷದ ಮೊದಲ ದಿನ ಗುರುವಾರ ಬೆಳಗ್ಗೆ ದೇವಾಲಯಗಳಿಗೆ ಭೇಟಿ ನೀಡಿ ವರ್ಷಾದ್ಯಂತ ಸುಖ-ಶಾಂತಿ ಕೋರಿ ಪೂಜೆ ಸಲ್ಲಿಸಿದ್ದಾರೆ

ಬೆಂಗಳೂರು : ನಾಡಿನಾದ್ಯಂತ ಬುಧವಾರ ರಾತ್ರಿ 12 ಗಂಟೆಗೆ ಭರ್ಜರಿಯಾಗಿ ಹೊಸ ವರ್ಷ ಸ್ವಾಗತಿಸಿ ಸಂಭ್ರಮಿಸಿದ ಜನತೆ ಹೊಸ ವರ್ಷದ ಮೊದಲ ದಿನ ಗುರುವಾರ ಬೆಳಗ್ಗೆ ದೇವಾಲಯಗಳಿಗೆ ಭೇಟಿ ನೀಡಿ ವರ್ಷಾದ್ಯಂತ ಸುಖ-ಶಾಂತಿ ಕೋರಿ ಪೂಜೆ ಸಲ್ಲಿಸಿದ್ದಾರೆ. ಹೀಗಾಗಿ ಮೈಸೂರು ಚಾಮುಂಡಿ ಬೆಟ್ಟ, ಮಂಗಳೂರಿನ ಕದ್ರಿ ಮಂಜುನಾಥ ದೇವಾಲಯ, ಹಂಪಿ ವಿರೂಪಾಕ್ಷೇಶ್ವರ ದೇವಾಲಯ ಹಾಗೂ ಪ್ರಸಿದ್ಧ ಮಂತ್ರಾಲಯದಲ್ಲಿ ಜನ ಸಾಗರವೇ ಕಂಡು ಬಂತು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ

ಬೆಂಗಳೂರಿನ ಇಸ್ಕಾನ್ ದೇವಾಲಯ, ಕಾಡುಮಲ್ಲೇಶ್ವರ ದೇವಾಲಯ, ಕೋಟೆ ವೆಂಕಟರಮಣ ದೇವಸ್ಥಾನ, ಸೋಮೇಶ್ವರ ದೇವಸ್ಥಾನಕ್ಕೆ ಹೊಸ ವರ್ಷದ ಮೊದಲ ದಿನ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ನಟ ಸುದೀಪ್ ಅವರು ಬುಧವಾರ ರಾತ್ರಿಯೇ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದರು. ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಗುರುವಾರ ಬೆಳಗ್ಗೆ ನಟರಾದ ಧನ್ವೀರ್, ಚಿಕ್ಕಣ್ಣ ಅವರೊಂದಿಗೆ ಬೆಟ್ಟಕ್ಕೆ ಭೇಟಿ ನೀಡಿದ್ದರು.

ತುಂಗಭದ್ರೆಯಲ್ಲಿ ಪುಣ್ಯಸ್ನಾನ

ನೂತನ ಹೊಸಪೇಟೆ ಜಿಲ್ಲೆಯ ದಕ್ಷಿಣ ಕಾಶಿ ಪ್ರಸಿದ್ಧಿಯ ಹಂಪಿಯಲ್ಲಿ ಜನರು ವರ್ಷದ ಮೊದಲ ದಿನ ತುಂಗಭದ್ರೆಯಲ್ಲಿ ಪುಣ್ಯಸ್ನಾನ ಮಾಡಿದರು. ನಂತರ ಪಂಪಾವಿರೂಪಾಕ್ಷೇಶ್ವರ, ಆಂಜನೇಯ, ಕೋದಂಡ ರಾಮಸ್ವಾಮಿ, ಮಾತಂಗ ಪರ್ವತ, ಸಾಸಿವೆಕಾಳು ಗಣಪತಿ ದೇವಾಲಯ ಸೇರಿದಂತೆ ನಾನಾ ದೇಗುಲಗಳಲ್ಲಿ ದೇವರ ದರ್ಶನ ಮಾಡಿ ಧನ್ಯತಾ ಭಾವ ಮೆರೆದರು. ಇನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ನಿಮಿಷಾಂಬಾ ದೇಗುಲದಲ್ಲಿ ಜನತೆ ಕಿಕ್ಕಿರಿದು ಸೇರಿದ್ದರು.

ಮಂಗಳೂರಿನ ಕದ್ರಿ ಮಂಜುನಾಥ ದೇಗುಲದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಭಾರೀ ಜನ ಸಂದಣಿ ಕಂಡು ಬಂತು. ದೇವಳದ ಕೆರೆಯಲ್ಲಿ ಜನರು ಪುಣ್ಯ ಸ್ನಾನ ಮಾಡಿದರು. ಕೆಲವರು ದೇವಳದ ಮುಂದೆ ಕಳಶ ಸ್ನಾನ ಮಾಡಿದರು. ನಂತರ ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ಹಾಗೆಯೇ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಶ್ರೀ ಗುರುರಾಯರ ವಾರವಾದ ಗುರುವಾರ ಹಾಗೂ ಹೊಸ ವರ್ಷದ ಮೊದಲ ದಿನ ಒಂದೇ ದಿನವಾದ ಕಾರಣ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ದೇಶದ ವಿವಿಧ ಪ್ರದೇಶಗಳಿಂದ ಸುಕ್ಷೇತ್ರಕ್ಕೆ ಬಂದ ಭಕ್ತರು ರಾಯರ ದರ್ಶನ ಪಡೆದು ಪುನೀತರಾದರು.

ಹಾಗೆಯೇ ವಿಜಯಪುರ ಜಿಲ್ಲೆ ಜ್ಞಾನ ಯೋಗಾಶ್ರಮಕ್ಕೆ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.