ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸರವಾಡ ಅರಣ್ಯದಲ್ಲಿ, ನೆಫಿಲಾ ಜಾತಿಗೆ ಸೇರಿದ 'ಜೈಂಟ್ ವುಡ್ ಸ್ಪೈಡರ್' ಎಂಬ ದೈತ್ಯ ಜೇಡ ಪತ್ತೆಯಾಗಿದೆ. ಈ ಜೇಡಗಳು ತಮ್ಮ ಬೃಹತ್ ಗಾತ್ರ ಮತ್ತು ಹಳದಿ ಬಣ್ಣದ ಬಲವಾದ ಬಲೆಗಳಿಗೆ ಹೆಸರುವಾಸಿಯಾಗಿದ್ದು, ಜೀವವaiವಿಧ್ಯ ಸಂಶೋಧಕರು ಇದನ್ನು ಪತ್ತೆಹಚ್ಚಿದ್ದಾರೆ.
ಗದಗ (ನ.24): ಅರೆನಿಡೇ ವರ್ಗದ ನೆಫಿಲಾ ಜಾತಿಗೆ ಸೇರಿದ ದೈತ್ಯ ಜೇಡ ಶಿರಹಟ್ಟಿ ತಾಲೂಕಿನ ಸಾಸರವಾಡ ವ್ಯಾಪ್ತಿಯ ಅರಣ್ಯದಲ್ಲಿ ಪತ್ತೆಯಾಗಿದ್ದು, ಪರಿಸರಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಇದು ಜೈಂಟ್ ವುಡ್ ಸ್ಪೈಡರ್ (Giant Wood Spider) ಅಥವಾ ಗೋಲ್ಡನ್ ಆರ್ಬ್- ವೀವಿಂಗ್ ಸ್ಪೈಡರ್(Golden Orb-Weaving Spider) ಎಂಬುದು ನೆಫಿಲಾ (Nephila) ಕುಲಕ್ಕೆ ಸೇರಿದ ದೊಡ್ಡ ಗಾತ್ರದ ಜೇಡ. ಈ ಜೇಡಗಳು ತಮ್ಮ ಬೃಹತ್ ಗಾತ್ರ, ಬಲವಾದ, ಹಳದಿ ಬಣ್ಣದ ಹೊಳೆಯುವ ಬಲೆಗಳಿಗೆ (ವೆಬ್) ಹೆಸರುವಾಸಿಯಾಗಿವೆ.
ನೆಫಿಲಾ ಪ್ರಮುಖ ಲಕ್ಷಣಗಳು:
ಸಾಮಾನ್ಯ ಜಾತಿಯ ಜೇಡಗಳು 3ರಿಂದ 5 ಮಿ.ಮೀ. ಇರುತ್ತವೆ. ಆದರೆ ನೆಫಿಲಾ ಜಾತಿಗೆ ಸೇರಿದ ಹೆಣ್ಣು ಜೇಡಗಳು ಸುಮಾರು 3 ಇಂಚು ಗಾತ್ರ ಹೊಂದಿರುತ್ತವೆ. ಆದರೆ ಗಂಡು ಜೇಡಗಳು ತೀರ ಚಿಕ್ಕದಾಗಿರುತ್ತವೆ. ಅಂದರೆ ಸುಮಾರು 5 ಮಿ.ಮೀ.ದಿಂದ 1 ಸೆಂಮೀ ವರೆಗೆ ಗಾತ್ರ ಹೊಂದಿರುತ್ತವೆ. ಇವು ಹೆಚ್ಚಾಗಿ ಹೆಣ್ಣು ಜೇಡದ ಬಲೆಯ ಮೇಲೆ ವಾಸಿಸುತ್ತವೆ.
ಈ ವಿಶಿಷ್ಟ ಜೇಡವನ್ನು ಜೀವವೈವಿಧ್ಯ ಸಂಶೋಧಕರಾದ ಮಂಜುನಾಥ ಎಸ್.ನಾಯಕ, ಸಂಗಮೇಶ್ ಕಡಗದ, ಶರಣು ಗೌಡರ ಅವರು ಪತ್ತೆ ಮಾಡಿದ್ದಾರೆ.


