ಭಾರತದಾದ್ಯಂತ ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸರ್ವರ್ ಸಮಸ್ಯೆಯಿಂದಾಗಿ ಅಪಾಯಿಂಟ್‌ಮೆಂಟ್‌ಗಳನ್ನು ಕಾಯ್ದಿರಿಸಲು ಅಥವಾ ಮರುಹೊಂದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮಂಗಳೂರು ಸೇರಿದಂತೆ ಹಲವು ಕೇಂದ್ರಗಳಲ್ಲಿ ದೂರದೂರುಗಳಿಂದ ಬಂದಿದ್ದ ಸಾವಿರಾರು ಅರ್ಜಿದಾರರು ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ.

ಭಾರತದಾದ್ಯಂತ ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸಾವಿರಾರು ಅರ್ಜಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ವರ್ ಸಮಸ್ಯೆಯಿಂದಾಗಿ ಹೊಸ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು, ಹಾಲಿ ಅಪಾಯಿಂಟ್‌ಮೆಂಟ್‌ಗಳನ್ನು ಮರು ನಿಗದಿಪಡಿಸಲು (Reschedule) ಅಥವಾ ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಅಡಚಣೆಯು ಪ್ರಮುಖ ನಗರಗಳ ಪಾಸ್‌ಪೋರ್ಟ್ ಸೇವಾ ಕೇಂದ್ರ (PSK) ಹಾಗೂ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ (POPSK) ಕಾರ್ಯಾಚರಣೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಸರ್ವರ್ ಸ್ಥಗಿತಗೊಂಡ ಕಾರಣ ಹಲವರ ಅಪಾಯಿಂಟ್‌ಮೆಂಟ್‌ಗಳು ಸ್ವಯಂಚಾಲಿತವಾಗಿ ರದ್ದಾಗುತ್ತಿದ್ದು, ನೊಂದ ಬಳಕೆದಾರರು 'X' (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಸಮಸ್ಯೆ ಮೊದಲೇ ತಿಳಿಸದ ಅಧಿಕಾರಿಗಳು

ಆಗಸ್ಟ್ 10 ರಿಂದಲೇ ಈ ಸಮಸ್ಯೆ ಎದುರಾಗಿದ್ದರೂ, ಪಾಸ್‌ಪೋರ್ಟ್ ಸೇವಾ ಕೇಂದ್ರವು ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಅಲ್ಲದೆ, ಅರ್ಜಿದಾರರಿಗೆ ಸಮಸ್ಯೆಯ ಕುರಿತು ಯಾವುದೇ ಮುಂಜಾಗ್ರತಾ ಸಂದೇಶವನ್ನೂ ಕಳುಹಿಸಿಲ್ಲ. ಇದರಿಂದಾಗಿ ದೇಶದಾದ್ಯಂತ ಮಾತ್ರವಲ್ಲದೆ ಬೆಂಗಳೂರು, ಮಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಜನರು ಪರದಾಡುವಂತಾಗಿದೆ.

ದೂರದೂರಿಂದ ಬಂದ ಅರ್ಜಿದಾರರ ಪರದಾಟ

ವಿಶೇಷವಾಗಿ ಮಂಗಳೂರಿನ ನವಭಾರತ್ ಸರ್ಕಲ್ ನಲ್ಲಿರುವ ಆಫೀಸ್‌ ನಲ್ಲಿ ತೀವ್ರ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಚಿಕ್ಕಮಗಳೂರು, ಮಡಿಕೇರಿ, ಕುಶಾಲನಗರ, ತೀರ್ಥಹಳ್ಳಿ, ಶಿವಮೊಗ್ಗ ಮುಂತಾದ 250 ಕಿ ಮೀ ಗೂ ಹೆಚ್ಚು ದೂರದ ಊರುಗಳಿಂದ ಆಗಮಿಸಿದ್ದ 600ಕ್ಕೂ ಹೆಚ್ಚು ಅರ್ಜಿದಾರರು ದಿನವಿಡೀ ಕಾಯುವಂತಾಗಿದೆ. ದಾಖಲೆಗಳ ಪರಿಶೀಲನೆಗೆ ಬಂದ ಜನರಿಗೆ ಕುಳಿತುಕೊಳ್ಳಲು ಆಸನ, ಕುಡಿಯುವ ನೀರು, ಫ್ಯಾನ್ ಅಥವಾ ಎಸಿ ಸೌಲಭ್ಯಗಳಿರಲಿಲ್ಲ. ಹೀಗಾಗಿ ಗಂಟೆ ಗಟ್ಟಲೆ ಅರ್ಜಿದಾರರು ನಿಂತೇ ಇದ್ದರು. ಹೇಳಿ ಕೇಳಿ ಮಂಗಳೂರಿನಲ್ಲಿ ಮಳೆಗಾಲದಲ್ಲೂ ಸೆಕೆ ಇರುವುದು ಸಾಮಾನ್ಯವಾಗಿದೆ. ಮೂಲಭೂತ ಸೌಕರ್ಯಗಳಿಲ್ಲದೆ ಕಂಗಾಲಾದ ಜನರು ಅಧಿಕಾರಿಗಳ ಬೇಜವಾಬ್ದಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಿಗದಿಯಾಗಿರುವ ಕೊಠಡಿಯಲ್ಲಿ ಇರಲು ಸಾಧ್ಯವಾಗದೆ ಅರ್ಜಿದಾರರು ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯ್ತು.

"ಅಧಿಕಾರಿಗಳು ಒಳಗೆ ಎಸಿ ರೂಮ್‌ನಲ್ಲಿ ಕುಳಿತಿದ್ದಾರೆ. ಹೊರಗೆ ಬಂದು ಸರ್ವರ್ ಸಮಸ್ಯೆಯ ಬಗ್ಗೆ ಕನಿಷ್ಠ ಮಾಹಿತಿಯನ್ನೂ ನೀಡುತ್ತಿಲ್ಲ. ಬದಲಿಗೆ ಭದ್ರತಾ ಸಿಬ್ಬಂದಿಯ ಮೂಲಕ 'ಸರ್ವರ್ ದೋಷವಿದೆ, ನೀವೇ ಮತ್ತೆ ಶೆಡ್ಯೂಲ್ ಮಾಡಿಕೊಳ್ಳಿ' ಎಂದು ಹೇಳಿ ಕಳುಹಿಸುತ್ತಿದ್ದಾರೆ. ನಿಯಮದಂತೆ 3 ಬಾರಿ ಮಾತ್ರ ಶೆಡ್ಯೂಲ್ ಮಾಡಲು ಅವಕಾಶವಿದ್ದು, ಅದು ತಪ್ಪಿದರೆ ಮತ್ತೆ ₹2,500 ಶುಲ್ಕ ಪಾವತಿಸಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ" ಎಂದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದರು. ಅರ್ಜಿದಾರರ ಆಕ್ರೋಶ ಮುಗಿಲುಮುಟ್ಟುತ್ತಿದ್ದಂತೆ, ಪರಿಸ್ಥಿತಿಯನ್ನು ಹತೋಟಿಗೆ ತರಲು ಮಂಗಳೂರಿನ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಸರ್ವರ್ ಸಮಸ್ಯೆ ಸರಿ ಹೋಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಪಾಸ್‌ಪೋರ್ಟ್ ಸಂಸ್ಥೆ ಇನ್ನೂ ನೀಡಿಲ್ಲ. ತಾಂತ್ರಿಕ ಸಮಸ್ಯೆಗೆ ಕಾರಣವನ್ನು ಕೂಡ ಈವರೆಗೆ ತಿಳಿಸಿಲ್ಲ.