ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ದೇಶಾದ್ಯಂತ ಕೈಗೊಂಡ ಜಲ ಪುನರುಜ್ಜೀವನ, ನದಿಗಳ ಪುನಃಶ್ಚೇತನ ಮತ್ತು ಅಂತರ್ಜಲ ಮರುಪೂರಣ ಕಾರ್ಯಗಳಿಗಾಗಿ 2024ನೇ ಸಾಲಿನ 6ನೇ ರಾಷ್ಟ್ರೀಯ ಜಲ ಪುರಸ್ಕಾರ ಪ್ರಶಸ್ತಿಗೆ ಭಾಜನವಾಗಿದೆ. ಕೇಂದ್ರ ಜಲಶಕ್ತಿ ಸಚಿವಾಲಯವು '3ನೇ ಸ್ಥಾನ ನೀಡಿ ಗೌರವಿಸಿದೆ.

ಬೆಂಗಳೂರು (ನ.20): ಆರ್ಟ್ ಆಫ್ ಲಿವಿಂಗ್ ಸಂಸ್ಥೆ ದೇಶಾದ್ಯಂತ ಕೈಗೊಂಡ ಜಲ ಪುನರುಜ್ಜೀವನ ಕಾರ್ಯಕ್ಕಾಗಿ 2024ನೇ ಸಾಲಿನ 6ನೇ ರಾಷ್ಟ್ರೀಯ ಜಲ ಪುರಸ್ಕಾರ ಪ್ರಶಸ್ತಿಗೆ ಭಾಜನವಾಗಿದೆ.

ನದಿಗಳ ಪುನಃಶ್ಚೇತನ, ಅಂತರ್ಜಲ ಮರುಪೂರಣ, ಎಲ್ಲಾ ಹವಾಮಾನಗಳಿಗೂ ಒಗ್ಗಿಕೊಳ್ಳುವಂಥ ಕೃಷಿಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಲ್ಲಿಸಿದ ಕಾರ್ಯ ಪರಿಗಣಿಸಿ ಕೇಂದ್ರ ಜಲಶಕ್ತಿ ಸಚಿವಾಲಯ, ‘ಉತ್ತಮ ಸರ್ಕಾರೇತರ ಸಂಸ್ಥೆ ಮತ್ತು ಬೆಸ್ಟ್ ಸಿವಿಲ್ ಸೊಸೈಟಿ’ ವರ್ಗದಲ್ಲಿ 3ನೇ ಸ್ಥಾನ ನೀಡಿ ಗೌರವಿಸಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗೆ ದೇಶಾದ್ಯಂತ 751 ಅರ್ಜಿ ಸಲ್ಲಿಕೆಯಾಗಿದ್ದವು. ಕೇಂದ್ರ ಜಲ ಆಯೋಗ ಮತ್ತು ಕೇಂದ್ರೀಯ ಅಂತರ್ಜಲ ಮಂಡಳಿಯಿಂದ ಸ್ಥಳ ಪರೀಕ್ಷೆ ನಡೆಸಿ 10 ವಿಭಾಗಗಳಲ್ಲಿ 46 ವಿಜೇತರನ್ನು ಆಯ್ಕೆ ಮಾಡಲಾಯಿತು.

ಲಕ್ಷಕ್ಕೂ ಅಧಿಕ ಅಂತರ್ಜಲ ಮರುಪೂರಣ:

ಆಧ್ಯಾತ್ಮಿಕ ಗುರು ರವಿ ಶಂಕರ್‌ ಗುರೂಜಿ ಅವರ ಮಾರ್ಗದರ್ಶನದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಜಲ ಸಂರಕ್ಷಣಾ ಯೋಜನೆ ದೇಶದಲ್ಲೇ ಅತೀ ದೊಡ್ಡ ಸಮುದಾಯದ ಸಹಯೋಗದೊಂದಿಗೆ ನಡೆಸಲಾಗುತ್ತಿರುವ ಪರಿಸರ ಚಳವಳಿಯಾಗಿ ಬೆಳೆದಿದೆ. ಸಂಸ್ಥೆ 1 ಲಕ್ಷಕ್ಕೂ ಅಧಿಕ ಅಂತರ್ಜಲ ಮರುಪೂರಣ ಕಾರ್ಯ ಕೈಗೊಂಡಿದೆ. 75 ನದಿಗಳ ಹೂಳೆತ್ತಿ ಉಪನದಿಗಳನ್ನು ಪುನರುಜ್ಜೀವನಗೊಳಿಸಲು ಸಹಾಯ, ಜಗತ್ತಿನಾದ್ಯಂತ 100 ದಶಲಕ್ಷಕ್ಕೂ ಅಧಿಕ ಸಸಿ ನೆಟ್ಟಿದೆ. 3 ದಶಲಕ್ಷ ರೈತರಿಗೆ ನೈಸರ್ಗಿಕ ಕೃಷಿ ಪದ್ಧತಿ ತರಬೇತಿ, ಕಲುಷಿತಗೊಂಡಿದ್ದ 152 ಜಲಮೂಲಗಳನ್ನು ಪುನಃಸ್ಥಾಪನೆ, ನಮಾಮಿ ಗಂಗೆ ಯೋಜನೆಡಿ 4500ಕ್ಕೂ ಅಧಿಕ ರೈತರಿಗೆ ತರಬೇತಿ ನೀಡಿ 3,500 ಹೆಕ್ಟೇರ್ ಭೂಮಿಯನ್ನು ನೈಸರ್ಗಿಕ ಕೃಷಿಗೆ ಮಾರ್ಪಡಿಸಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.