ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಲಸೆ ಕಾರ್ಮಿಕರಿಂದ ಸ್ಥಳೀಯ ಕನ್ನಡಿಗರ ಉದ್ಯೋಗಾವಕಾಶಗಳು ಕಸಿಯಲ್ಪಡುತ್ತಿವೆ. ಈ ಸಮಸ್ಯೆಗೆ ಕಡಿवाण ಹಾಕಲು ಸರೋಜಿನಿ ಮಹಿಷಿ ವರದಿಯ ಕಟ್ಟುನಿಟ್ಟಿನ ಅನುಷ್ಠಾನವೇ ಪರಿಹಾರ ಎಂದು ಟ್ರೇഡ് ಯೂನಿಯನ್ ಮುಖಂಡ ಜಿ.ಆರ್. ಶಿವಶಂಕರ್ ಅಭಿಪ್ರಾಯಪಟ್ಟಿದ್ದಾರೆ. 

ಮಖಾಮುಖಿ- ಜಿ.ಆರ್. ಶಿವಶಂಕರ್, ಪ್ರಧಾನ ಕಾರ್ಯದರ್ಶಿ, 

ಟ್ರೇಡ್ ಯೂನಿಯನ್ ಕೋ-ಆರ್ಡಿನೇಷನ್ ಸೆಂಟರ್.

- ಸಂಪತ್ ತರೀಕೆರೆ

ಬೆಂಗಳೂರು ವಲಸಿಗರ ಸ್ವರ್ಗವಾಗುತ್ತಿದೆ. ನಗರದ ಅರ್ಧದಷ್ಟು ಭಾಗ ವಲಸಿಗರಿಂದಲೇ ತುಂಬಿ ಹೋಗಿದೆ. ಹೊರ ರಾಜ್ಯಗಳಿಂದ ಜೀವನ ಕಟ್ಟಿಕೊಳ್ಳಲು ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಾ ನಿಯಂತ್ರಣಕ್ಕೆ ಸಿಗದಂತಾಗಿದೆ. ಇದು ಭಾಷೆ, ಸಂಸ್ಕೃತಿ ನಡುವೆ ವೈಷಮ್ಯ ಮೂಡುವಂತಾಗುತ್ತಿದೆ. ಅಷ್ಟೇ ಅಲ್ಲ, ಅಪರಾಧಿಕ ಕೃತ್ಯಗಳ ಹೆಚ್ಚಳಕ್ಕೂ ಕಾರಣವಾಗಿದೆ. ಮುಖ್ಯವಾಗಿ ಕನ್ನಡಿಗರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದ್ದು, ಹೋಟೆಲ್‌, ಮಾರುಕಟ್ಟೆ, ಸಾರಿಗೆ, ನಿರ್ಮಾಣ ಕ್ಷೇತ್ರ ಸೇರಿದಂತೆ ಎಲ್ಲೆಡೆಯೂ ಅಸ್ಸಾಂ, ಬಿಹಾರ, ಒಡಿಶಾ, ಉತ್ತರ ಪ್ರದೇಶ ಒಳಗೊಂಡು ಉತ್ತರ ಭಾರತದ ರಾಜ್ಯಗಳ ವಲಸೆ ಕಾರ್ಮಿಕರೇ ತುಂಬಿಕೊಳ್ಳತೊಡಗಿದ್ದಾರೆ. ವಲಸೆ ಕಾರ್ಮಿಕರ ಹೆಚ್ಚಳ ಸ್ಥಳೀಯರ ಉದ್ಯೋಗ ಕಸಿಯುತ್ತಿದೆ ಎಂಬ ಕೂಗುಗಳು ಗಟ್ಟಿಯಾಗುತ್ತಿದೆ. ವಲಸೆ ಕಾರ್ಮಿಕ ಹಾವಳಿ, ಅದನ್ನು ತಡೆಯುವ ಬಗೆ, ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡುವುದು, ವಲಸೆ ಸಮಸ್ಯೆ ನಿವಾರಣೆಗೆ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಮಾತನಾಡಲು ಟ್ರೇಡ್‌ ಯೂನಿಯನ್‌ ಕೋ-ಆರ್ಡಿನೇಷನ್‌ ಸೆಂಟರ್‌- ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ಕಾರ್ಮಿಕ ಮುಖಂಡ ಜಿ.ಆರ್‌.ಶಿವಶಂಕರ್‌ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.

ಸ್ಥಳೀಯ ಕಾರ್ಮಿಕರ ಉದ್ಯೋಗ ಕಸಿದುಕೊಳ್ಳುತ್ತಿರುವ ವಲಸೆ ಕಾರ್ಮಿಕರ ನಿಯಂತ್ರಣ ಹೇಗೆ?

ಸರೋಜಿನಿ ಮಹಿಷಿ ವರದಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿ ಹೊಂದಿದೆ. ಆದರೆ, ಸರ್ಕಾರ ಈ ವರದಿ ಅನುಷ್ಠಾನವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿ ಬಂಡವಾಳಶಾಹಿಗಳ ಪರ ನಿಂತಿದೆ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಿ ಕಡ್ಡಾಯಗೊಳಿಸಿದರೆ ವಲಸೆ ಕಾರ್ಮಿಕರ ಹಾವಳಿಗೆ ನಿಯಂತ್ರಣ ಹೇರಲು ಸಾಧ್ಯ.

ವಲಸೆ ತಡೆಯುವಲ್ಲಿ ಕಾರ್ಮಿಕ ಇಲಾಖೆ ವಿಫಲವಾಗಿದೆಯೆ?

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಾರ್ಮಿಕ ಇಲಾಖೆಗಳು ಏನೂ ಮಾಡದೆ ಕುಳಿತಾಗ ತೊಂದರೆ ಆಗುತ್ತದೆ. ಸ್ಥಳೀಯರಿಗೆ ಸಮಸ್ಯೆ ಆಗುತ್ತದೆ. ಈ ಇಲಾಖೆಗಳು ಕೆಳಹಂತದಿಂದಲೇ ಕಾರ್ಮಿಕರನ್ನು ಆಯ್ಕೆ ಮಾಡಬೇಕು. ಈ ಇಲಾಖೆಗಳು ಸಕ್ರಿಯವಾದರೆ ಸ್ಥಳೀಯರಿಗೆ ಕೆಲಸ ಸಿಗುತ್ತದೆ. ವಲಸಿಗರ ಅಂಕಿ-ಸಂಖ್ಯೆ ಕ್ರೋಢೀಕರಣದಿಂದ ಸ್ಥಳೀಯರಿಗೆ ಅಗುವ ಸಮಸ್ಯೆ ಹಂತಹಂತವಾಗಿ ನಿವಾರಿಸಲು ಯೋಜನೆಗಳನ್ನು ರೂಪಿಸಬಹುದು. ಆದರೆ ಈ ಇಲಾಖೆಗಳು ನಿಷ್ಕ್ರಿಯವಾಗಿರುವುದರಿಂದ ಏನೂ ಆಗುತ್ತಿಲ್ಲ.

ಇತ್ತೀಚೆಗೆ ಆಂತರಿಕ ವಲಸಿಗರಿಗಿಂತ ಶಾಶ್ವತ ವಲಸಿಗರ ಸಂಖ್ಯೆ ಹೆಚ್ಚುತ್ತಿರುವುದೇಕೆ?

ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗುವ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಚ್ಚು ಆದಾಯ ಸಿಗುವ ಕಡೆಗೆ ಹೋಗುತ್ತಿರುತ್ತಾರೆ. ಆದರೆ, ಶಾಶ್ವತ ವಲಸಿಗರು ಒಮ್ಮೆ ಬಂದ ನಂತರ ಮತ್ತೆ ವಾಪಸ್‌ ಹೋಗುತ್ತಿಲ್ಲ. ಇಲ್ಲಿಯೇ ನೆಲೆಯೂರುತ್ತಿದ್ದಾರೆ. ಇದರಿಂದ ಪ್ರಾದೇಶಿಕ ಭಾಷೆ, ಸಂಸ್ಕೃತಿ, ರಾಜಕೀಯದಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಜೊತೆಗೆ ಸ್ಥಳೀಯರ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ.

ಸ್ಥಳೀಯರಿಗಿಂತ ವಲಸಿಗ ಕಾರ್ಮಿಕರಿಗೆ ಹೆಚ್ಚಿನ ಅವಕಾಶ ಸಿಗುತ್ತಿರುವುದಕ್ಕೆ ಕಾರಣವೇನು?

ವಲಸೆ ಕಾರ್ಮಿಕರಲ್ಲಿ ಬಹುತೇಕರು ಕಡಿಮೆ ಸಂಬಳಕ್ಕೆ ಬಂದವರು. ಅವರು ಹೆಚ್ಚಿನ ವೇತನ ನಿರೀಕ್ಷಿಸುವುದಿಲ್ಲ. ಎಂಟತ್ತು ಸಾವಿರ ಕೊಟ್ಟು, ಉಳಿದುಕೊಳ್ಳಲು ಒಂದು ರೂಮ್‌ ಕೊಟ್ಟರೆ ಸಾಕು. ಆದರೆ, ಸ್ಥಳೀಯರಿಗೆ ವೇತನ ಜಾಸ್ತಿ ಕೊಡಬೇಕು. ಜೊತೆಗೆ ರಜೆಗಳನ್ನು ಕೊಡಬೇಕಾಗುತ್ತದೆ. ಮಾಲೀಕರ ತಾಳಕ್ಕೆ ತಕ್ಕಂತೆ ಇಲ್ಲಿನವರು ಕುಣಿಯುವುದಿಲ್ಲ. ಆದ್ದರಿಂದ ಅವರನ್ನು ನಿರ್ಲಕ್ಷ್ಯಿಸಲಾಗುತ್ತಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಹೊರ ರಾಜ್ಯಗಳಿಂದ ಬರುವ ಕಾರ್ಮಿಕರನ್ನು ತಡೆಯಲು ಸಾಧ್ಯವಿದೆಯೇ?

ನೇರವಾಗಿ ಯಾರನ್ನೂ ತಡೆಯಲು ಸಾಧ್ಯವಿಲ್ಲ. ಅದಕ್ಕೆ ಒಕ್ಕೂಟ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಆದರೆ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕನ್ನಡಿಗರಿಗೆ ಎಲ್ಲ ಕ್ಷೇತ್ರಗಳಲ್ಲೂ ನೌಕರಿಯಲ್ಲಿ ಮೀಸಲಾತಿ ಕೊಡುವುದನ್ನು ಕಡ್ಡಾಯಗೊಳಿಸಬೇಕು. ಸರೋಜಿನಿ ಮಹಿಷಿ ವರದಿಯಂತೆ ಖಾಸಗಿ ಮತ್ತು ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆಗಳಲ್ಲಿ ಶೇ.100ರಷ್ಟು ಕನ್ನಡಿಗರಿಗೆ ಮೀಸಲಾತಿ ಹಾಗೂ ಗ್ರೂಪ್ ‘''ಬಿ’ ಮತ್ತು ‘ಎ’ ಹುದ್ದೆಗಳಲ್ಲಿ ಕ್ರಮವಾಗಿ ಶೇ.80 ಮತ್ತು 65ರಷ್ಟು ಕನ್ನಡಿಗರಿಗೆ ಮೀಸಲಾತಿ ಕಡ್ಡಾಯಗೊಳಿಸಬೇಕು. ಆಗ ಮಾತ್ರ ವಲಸೆ ಕಾರ್ಮಿಕರನ್ನು ತಡೆಯಲು ಸಾಧ್ಯವಿದೆ.

ವಲಸೆ ಕಾರ್ಮಿಕರ ಸಮಸ್ಯೆಗೆ ಸರೋಜಿನಿ ಮಹಿಷಿ ವರದಿ ಅನುಷ್ಠಾನವೇ ರಾಮಬಾಣವೇ?

ಹೌದು, ಸರೋಜಿನಿ ಮಹಿಷಿ ವರದಿ ಸಲ್ಲಿಕೆಯಾಗಿ ಬಹಳ ವರ್ಷಗಳೇ ಕಳೆದಿವೆ. ಅದನ್ನು ಅನುಷ್ಠಾನಕ್ಕೆ ತರಬೇಕಾದವರು ಯಾರು? ಯಾವುದೇ ಉದ್ಯಮಕ್ಕೆ ಪರವಾನಗಿ ಕೊಟ್ಟಾಗ ಉದ್ಯಮದ ಮಾಲೀಕರಿಗೆ ಸರೋಜಿನಿ ಮಹಿಷಿ ವರದಿ ಪ್ರಕಾರ ಎಷ್ಟು ಜನರನ್ನು ಆಯ್ಕೆ ಮಾಡುತ್ತೀರಿ ಎಂಬ ನಿಯಮ ಹಾಕಬೇಕು. ಅದು ಕಡ್ಡಾಯ ಕೂಡ ಆಗಬೇಕು. ಆಗ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಸಿಗುತ್ತದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸದ ಉದ್ಯಮಗಳ ಪರವಾನಗಿ ರದ್ದು ಮಾಡಬೇಕು.

ವಲಸಿಗರು ಹೆಚ್ಚುತ್ತಿರುವುದರಿಂದ ಪ್ರಾದೇಶಿಕ ಭಾಷಾ ಮತ್ತು ಸಂಸ್ಕೃತಿ ನಡುವೆ ವೈಷಮ್ಯಕ್ಕೆ ಕಾರಣವಾಗುತ್ತಿದೆಯೇ?

ವಲಸೆ ಬರುತ್ತಿರುವಂತ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಎಸ್‌ಎಂವಿ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣ, ಮೆಜೆಸ್ಟಿಕ್‌, ಕಂಟೋನ್ಮೆಂಟ್‌ ರೈಲ್ವೆ ನಿಲ್ಧಾಣಗಳಲ್ಲಿ ಕೆಲಹೊತ್ತು ನಿಂತರೆ ಸಾಕು. ಅದು ನಿಮ್ಮ ಗಮನಕ್ಕೆ ಬರುತ್ತದೆ. ದಿನೇ ದಿನೆ ವಲಸಿಗ ಕಾರ್ಮಿಕರ ಸಂಖ್ಯೆ ಮತ್ತು ಪ್ರಾಬಲ್ಯವೂ ಜಾಸ್ತಿಯಾಗುತ್ತಿದೆ. ಇಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆ. ಸಾಮಾಜಿಕ ನ್ಯಾಯ ಕೊಡಬೇಕಾದ ಸರ್ಕಾರ ಸುಮ್ಮನೆ ಕುಳಿತಾಗ ಇಂತಹ ಪರಿಸ್ಥಿತಿಯನ್ನು ಸ್ಥಳೀಯರು ಎದುರಿಸಬೇಕಾಗುತ್ತದೆ. ಭಾಷೆ, ಸಂಸ್ಕೃತಿ ಗಲಾಟೆ ನಡೆಯುತ್ತಲೇ ಇರುತ್ತದೆ.

ಕನ್ನಡಿಗರಿಗೆ ಮೀಸಲಾತಿ ಕೊಡಬೇಕೆನ್ನುವ ಆದೇಶಕ್ಕೆ ಬಂಡವಾಳ ಹೂಡಿಕೆದಾರರೆಲ್ಲ ವಿರೋಧವಿದೆಯಲ್ಲ?

ಯಾವುದೇ ಉದ್ಯಮದಲ್ಲಿ ಅಯಾ ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯ ಹೊಂದಿರುವವರಿಗೆ ಬೇಡಿಕೆ ಇದ್ದೇ ಇದೆ. ಸರೋಜಿನಿ ಮಹಿಷಿ ಅನುಷ್ಠಾನದ ಜೊತೆಗೆ ಇಲ್ಲಿನ ಯುವಜನರಿಗೆ ಅವರು ಹೋಗಲು ಇಚ್ಛಿಸುವ ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯ ನೀಡುವ ಅಗತ್ಯ ಇದೆ. ತರಬೇತಿ ಕೊಟ್ಟು ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಬಾರದು. ತಜ್ಞರಿಗೆ ಯಾವಾಗಲೂ ಬೇಡಿಕೆ ಇದ್ದೇ ಇದೆ. ಕೌಶಲ್ಯತೆ ಇದ್ದೂ ಉದ್ಯೋಗ ಕೊಡದಿದ್ದರೆ ಅಂತಹ ಕೈಗಾರಿಕೆಗಳು ನಮಗ್ಯಾಕೆ?

ವಲಸೆ ಕಾರ್ಮಿಕ ಸಮಸ್ಯೆಗೆ ಕಡಿವಾಣ ಇಲ್ಲವೇ?

ಎಲ್ಲ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಸರೋಜಿನಿ ಮಹಿಷಿ ವರದಿ ಜೊತೆಗೆ ಕನಿಷ್ಠ ವೇತನ ಪದ್ಧತಿಯೂ ಜಾರಿಯಾಗಬೇಕು. ಆಗ ಕಡಿಮೆ ವೇತನಕ್ಕೆ ವಲಸಿಗರನ್ನು ಸೇರಿಸಿಕೊಳ್ಳುವ ಮಾಲೀಕರ ಕುತಂತ್ರಕ್ಕೆ ಕಡಿವಾಣ ಬೀಳುತ್ತದೆ. ಇದರೊಟ್ಟಿಗೆ ನಮ್ಮಲ್ಲಿ ಕಟ್ಟುನಿಟ್ಟಾಗಿ ತ್ರಿಪಕ್ಷೀಯ ವ್ಯವಸ್ಥೆ ಬರಬೇಕು. ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ, ಆಡಳಿತ ಶಾಹಿ, ಕಾರ್ಮಿಕ ವರ್ಗದ ಪ್ರತಿನಿಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವ ಅಗತ್ಯ ಇದೆ. ಇಲ್ಲಿ ರಾಜಕೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು, ಆಯಾ ಕ್ಷೇತ್ರದ ತಜ್ಞರನ್ನು ಮಂಡಳಿ ಅಥವಾ ಸಮಿತಿಗೆ ನೇಮಕ ಮಾಡಿಕೊಳ್ಳಬೇಕು. ಸಾರ್ವಜನಿಕರ ಅಭಿಪ್ರಾಯ ತೆಗೆದುಕೊಳ್ಳಬೇಕು. ಆಗ ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತವೆ.

ವಲಸೆ ಕಾರ್ಮಿಕರ ಕುರಿತು ತಮಿಳುನಾಡು ಮಾದರಿಯಲ್ಲಿ ನಮ್ಮಲ್ಲೂ ಸರ್ವೇ ಮಾಡಬಹುದಲ್ಲವೆ?

ಕೋವಿಡ್‌ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ವಲಸಿಗರ ಮಾಹಿತಿ ಪಡೆಯಬೇಕೆಂಬ ನಿಯಮ ಪಾಲಿಸಲಾಗಿತ್ತು. ಆದರೆ, ಅದನ್ನು ನಿರಂತರವಾಗಿ ಅನುಸರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ವೆ ಮಾಡುವುದರಿಂದ ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದಿರುವ ಕಾರ್ಮಿಕರೆಷ್ಟು, ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ? ಆ ಕ್ಷೇತ್ರದಲ್ಲಿ ಸ್ಥಳೀಯ ಕನ್ನಡಿಗರೇ ಇದ್ದರೂ ಸಂಸ್ಥೆಗಳು, ಕಂಪನಿಗಳು ಏಕೆ ಕೆಲಸ ಕೊಡುತ್ತಿಲ್ಲ ಎಂಬಿತ್ಯಾದಿ ದತ್ತಾಂಶವನ್ನು ಸುಲಭವಾಗಿ ಪಡೆಯಬಹುದಿತ್ತು. ಆದರೆ, ಕಾರ್ಮಿಕ ಇಲಾಖೆ ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ.

ಕೇರಳದಲ್ಲಿ ಕಾರ್ಮಿಕರ ಇಲಾಖೆಯಡಿ ಕಾರ್ಮಿಕರಿಗಾಗಿಯೇ 16 ವಿವಿಧ ಮಂಡಳಿಗಳು ಇವೆ. ನಮ್ಮಲ್ಲಿ ಆ ಮಾದರಿ ಅನುಷ್ಠಾನ ಮಾಡಬಹುದೇ?

ನಿರ್ಮಾಣ ಕ್ಷೇತ್ರದ ಕಾರ್ಮಿಕರಿಗಾಗಿ ಒಂದು ಮಂಡಳಿ ನಮ್ಮಲ್ಲಿದೆ. ಅದನ್ನು ಹೊರತುಪಡಿಸಿ ಯಾವುದೇ ಕಾರ್ಮಿಕರಿಗೆ ಮಂಡಳಿಗಳು ಇಲ್ಲ. ಕೇರಳದಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಪ್ರತ್ಯೇಕ ಮಂಡಳಿಗಳನ್ನು ಮಾಡಿದ್ದಾರೆ. ಸಾರಿಗೆ ಕ್ಷೇತ್ರ, ಹಾಸ್ಪಿಟಲಿಟಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರ ಹೀಗೆ ಪ್ರತಿಯೊಂದು ಕ್ಷೇತ್ರಕ್ಕೂ ಪ್ರತ್ಯೇಕ ಮಂಡಳಿ ಇದ್ದರೆ ಅತ್ಯಂತ ಸುಲಭವಾಗಿ ಅಲ್ಲಿರುವ ಕಾರ್ಮಿಕರು ಎಲ್ಲಿಂದ ಬಂದವರು, ಸಿಗುತ್ತಿರುವ ಸೌಲಭ್ಯವೇನು? ಅವರ ಸಮಸ್ಯೆ ಏನು? ಪರಿಹಾರವೇನು ಎಂಬಿತ್ಯಾದಿಗಳನ್ನು ತಿಳಿದು ಪರಿಹರಿಸಬಹುದಾಗಿದೆ. ಅದಕ್ಕೆ ಕಾರ್ಮಿಕ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇಚ್ಛಾಶಕ್ತಿ ಪ್ರದರ್ಶಿಸಬೇಕು.