Asianet Suvarna News Asianet Suvarna News

ಹಿಪ್ಪಲಿ ಗಿಡದ ಕಸಿ ವಿಧಾನದ ಮೂಲಕ ಕೃಷಿಯಲ್ಲಿ ವಿಶೇಷ ಸಾಧನೆಗೈದ ಅನ್ನದಾತ

ಎತ್ತರಕ್ಕೆ ಬೆಳೆಯುವ ಬಳ್ಳಿಯ ತುದಿಯಲ್ಲಿ ಗ್ರಾಫ್‌ಡೆಡ್ ಬುಷ್ ಪೇಪರ್ ಪದ್ಧತಿಯ ಕಸಿ ಮಾಡಿ ಇದನ್ನು ಅಭಿವೃದ್ಧಿಪಡಿಸಿದ ನಾರಾಯಣ ದತ್ತಾತ್ರೇಯ ಹೆಗಡೆ| ನೆಲದ ಮೇಲೆಯೇ ನಿಂತು ಕೈಗೆಟುಕುವ ಎತ್ತರಕ್ಕೆ ಮಾತ್ರ ಬಳ್ಳಿ ಬೆಳೆಯುವಂತೆ ಅಭಿವೃದ್ಧಿ ಪಡಿಸುವಲ್ಲಿಯೂ ರೈತ  ಯಶಸ್ವಿ| 

Narayana Dattatreya Hegde from Uttara Kannada Honored With Suvarna Kannadaprabha Raita Ratna Award grg
Author
Bengaluru, First Published Feb 12, 2021, 2:03 PM IST

ರೈತ ರತ್ನ ನಾರಾಯಣ ದತ್ತಾತ್ರೇಯ ಹೆಗಡೆ
ವಿಭಾಗ: ಬೆಳೆ ವಿಜ್ಞಾನಿ ರೈತ
ಊರು: ಕುಮಟಾ, ಉತ್ತರಕನ್ನಡ ಜಿಲ್ಲೆ

ಉತ್ತರಕನ್ನಡ(ಫೆ.12): ನಾರಾಯಣ ದತ್ತಾತ್ರೇಯ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಅಂತ್ರವಳ್ಳಿ ಗ್ರಾಮದ ಪ್ರಗತಿಪರ ರೈತ. ಕೃಷಿ ಕುಟುಂಬದಲ್ಲೇ ಬೆಳೆದ ನಾರಾಯಣ ಹೆಗಡೆ ಅವರು ತಂದೆ ದತ್ತಾತ್ರೇಯ ಹೆಗಡೆ ಹಾಕಿಕೊಟ್ಟ ಹಾದಿಯಲ್ಲೇ ವ್ಯವಸಾಯ ಮುಂದುವರಿಸಿಕೊಂಡು ಬಂದಿದ್ದಾರೆ. 

ಮೂರೂರು ಕಲ್ಲಬ್ಬೆ ಮೂಲದವರಾದ ನಾರಾಯಣ ಹೆಗಡೆ ಅವರು ಬಡತನದ ನಡುವೆಯೇ ಅಂತ್ರವಳ್ಳಿ ಎಂಬಲ್ಲಿ ಕೃಷಿ ಭೂಮಿ ಖರೀದಿಸಿ ಪ್ರಗತಿಪರ ಕೃಷಿಯಲ್ಲಿ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ. ಬಡತನದಲ್ಲೂ ಪಿಯುಸಿ ಶಿಕ್ಷಣ ಮುಗಿಸಿಕೊಂಡು ಅನಿವಾರ್ಯವಾಗಿ ಕೃಷಿಯಲ್ಲಿ ತೊಡಗಿಕೊಂಡಿರುವ ನಾರಾಯಣ ಹೆಗಡೆ ಅವರು ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ. ಅನೇಕ ಏಳು ಬೀಳುಗಳ ನಡುವೆ ಹಿಪ್ಪಲಿ ಗಿಡದ ಕಸಿ ವಿಧಾನವನ್ನು ರೂಢಿಸಿಕೊಂಡು ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಪ್ರತಿ ವರ್ಷ 30 ಕ್ಕೂ ಹೆಚ್ಚು ಕ್ವಿಂಟಲ್ ಕಾಳು ಮೆಣಸು ಬೆಳೆ ತೆಗೆದು ರಾಜ್ಯವಲ್ಲದೇ, ಅನ್ಯ ರಾಜ್ಯಗಳಿಗೂ ರಪ್ತು ಮಾಡಿದ್ದಾರೆ. 

ಸಾಧನೆಯ ವಿವರ: 

ನಾರಾಯಣ ಹೆಗಡೆ ಅವರೇ ಹೇಳುವಂತೆ, ಅವರು 22 ನೇ ವಯಸ್ಸಿನಲ್ಲಿದ್ದಾಗ ತಂದೆ ದತ್ತಾತ್ರೇಯ ಹೆಗಡೆ ಅವರು ನಿಧನರಾದರು. ಇದು ಒಂದು ಹಂತದಲ್ಲಿ ನಾರಾಯಣ ಹೆಗಡೆ ಅವರನ್ನು ಆಘಾತಕ್ಕೆ ತಳ್ಳಿತು, ಮುಂದೇನು ಎಂಬ ಸವಾಲು ಎದುರಾಯಿತು. ಆದರೆ ಹೆಗಡೆ ಧೃತಿಗೆಡಲಿಲ್ಲ. ನಂಬಿಕೆ ಇಟ್ಟು ಛಲ, ನಿಷ್ಠೆಯಿಂದ ವ್ಯವಸಾಯ ಮುಂದುವರಿಸಿದ್ದರ ಫಲ ಕೃಷಿ ಅನುಭವ ಅವರನ್ನು ಕೈಬಿಡಲಿಲ್ಲ.

1000 ರೈತರು ಒಗ್ಗೂಡಿದ ಪಿಂಗಾರ ರೈತ ಉತ್ಪನ್ನಗಳ ತಯಾರಿಕ ಸಂಸ್ಥೆ ಯಶಸ್ಸಿನ ಕಥೆ

ಆರಂಭದಲ್ಲಿ ಅಡಕೆ ಬೆಳೆಯನ್ನೇ ನಂಬಿ ಕೃಷಿ ಮುಂದುವರಿಸಿದ್ದ ನಾರಾಯಣ ಹೆಗಡೆ, ಹೆಚ್ಚಿನ ರೈತರು ಎದುರಿಸುವಂತೆ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಯಿತು. ಆಗ ಅಡಕೆ ಜೊತೆಗೆ ಬೇರೆ ಬೇರೆ ಬೆಳೆಯ ಕಡೆಗೂ ಕಣ್ಣು ಹಾಯಿಸಿದರು. ಪತ್ರಿಕೆಯೊಂದರಲ್ಲಿ ಬಂದ ಜಾಹೀರಾತೊಂದನ್ನು ನೋಡಿ ಅಣಬೆ ಬೆಳೆದರು. ಶುಂಠಿಯನ್ನೂ ಬೆಳೆದರು. ಆದರೆ ನಿರೀಕ್ಷೆಯ ಆದಾಯ ಬರಲಿಲ್ಲ. ಹಾಗಂತ ಹೆಗಡೆ ಬೇಸರ ಪಡಲಿಲ್ಲ. ಮತ್ತೆ ಹುಡುಕಾಟ ನಡೆಸುವ ಸಂದರ್ಭದಲ್ಲಿ ವೆನಿಲ್ಲಾ ಬೆಳೆ ಮಾಡುವಂತೆ ಸಲಹೆಗಳೂ ಬಂದವು. ಆದರೆ, ವೆನಿಲ್ಲಾ ಮೇಲೆ ಅಷ್ಟೊಂದು ವಿಶ್ವಾಸ ಮೂಡದ್ದಕ್ಕೆ ಅನಾದಿಕಾಲದಿಂದ ಅಳವಡಿಸಿಕೊಂಡು ಬಂದ ಕಾಳು ಮೆಣಸು ಬೆಳೆಯೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಕಾಳುಮೆಣಸು ಬೆಳೆದರು. ಅದೂ ಕೂಡ ನಿರೀಕ್ಷೆಯ ಆದಾಯ ನೀಡಲಿಲ್ಲ. ಹಾಗಾಗಿ ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರ ಸಲಹೆಯಂತೆ ಗೌರಿ ಹೂವಿನ ಕೃಷಿಗೂ ಮುಂದಾದರು. ಇಂತಹ ಅಲ್ಪಾವಧಿ ಕೃಷಿಯಲ್ಲಿ ಸ್ವಲ್ಪ ಮಟ್ಟಿಗೆ ನಷ್ಟವನ್ನೇ ಅನುಭವಿಸಿದರು. ಆದರೆ ಛಲ ಬಿಡಲಿಲ್ಲ.

1986ರಲ್ಲಿ ವಿಜ್ಞಾನಿ ಪಿ.ಎ.ಮ್ಯಾಥ್ಯೂ ಎಂಬವರು ಬ್ರೆಜಿಲ್ ದೇಶದ ಕಳೆಯ ಗಿಡವಾದ ಹಿಪ್ಪಲಿಯನ್ನು ತಂದು ಕಾಳು ಮೆಣಸಿನ ಬಳ್ಳಿಗೆ ಕಸಿ ಮಾಡುವ ಪದ್ಧತಿಯನ್ನು ಪರಿಚಯಿಸಿದರು. ಆ ಮಾಹಿತಿ ಪಡೆದು ಅದಾದರೂ ನನ್ನ ಕೈ ಹಿಡಿದೀತು ಎಂಬ ಕನಸು ಕಂಡರು. 

ಪುತ್ತೂರಿನ ಕೃಷಿಕರೊಬ್ಬರನ್ನು ಸಂಪರ್ಕಿಸಿ ಈ ಬಗ್ಗೆ ಒಂದಿಷ್ಟು ಮಾಹಿತಿ ಸಂಗ್ರಹಿಸಿದರು. ಆದರೆ ಬಂಡವಾಳ ಹಾಕಿ ಆರಂಭಿಸುವ ಧೈರ್ಯ ಬರಲಿಲ್ಲ. ಕಡೆಗೂ 2010, ಜನವರಿಯಲ್ಲಿ ಧೈರ್ಯ ಮಾಡಿ ಒಂದಿಷ್ಟು ಕಸಿ ಮಾಡಿದ ಬಳ್ಳಿಗಳನ್ನು ತರಿಸಿಕೊಂಡು ಬೆಳೆ ಆರಂಭಿಸಿದರು. ಕಸಿ ಕಾಳುಮೆಣಸಿನ ಬಳ್ಳಿಗಳು ಬೆಳೆದ ರೀತಿಯೇ ಅನೇಕ ಕೃಷಿ ಆಸಕ್ತರನ್ನು ಸೆಳೆಯುವಂತೆ ಮಾಡಿತು. ಗಿಡಗಳ ಅಭಿವೃದ್ಧಿಯ ನರ್ಸರಿ ಮಾಡುವಂತೆ ಬೇಡಿಕೆ ಹೆಚ್ಚಿದ್ದಕ್ಕೆ ನಾರಾಯಣ ಹೆಗಡೆ ನರ್ಸರಿ ಆರಂಭಿಸಿದರು. ಕಾಳು ಮೆಣಸಿನ ಬಳ್ಳಿಯ ಕಸಿ ಪದ್ಧತಿಗೆ 2013 ರವರೆಗೂ ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಯಲ್ಲಿ ಯಾವುದೇ ದೃಢೀಕರಣ ಸಿಕ್ಕಿರಲಿಲ್ಲ. ಆದರೆ ನಾರಾಯಣ ಹೆಗಡೆ ಕಂಡುಕೊಂಡ ಕೃಷಿ ವಿಧಾನ ನೋಡಿದ ಹಿರಿಯ ಅಧಿಕಾರಿ ಎಚ್. ಆರ್. ನಾಯಕ್ ಅವರು ಕಸಿ ಕಾಳು ಮೆಣಸಿನ ಬಳ್ಳಿಗೆ ಧನ ಸಹಾಯ ನೀಡುವುದಾಗಿ ಪ್ರಪ್ರಥಮ ಬಾರಿಗೆ ಉತ್ತರಕನ್ನಡದಲ್ಲಿ ಪ್ರಕಟಣೆ ನೀಡಿದರು. ಇದರ ಪರಿಣಾಮ ನಾರಾಯಣ ಹೆಗಡೆ ಅವರ ನರ್ಸರಿಯ ಕಸಿ ಬಳ್ಳಿಗಳಿಗೂ ಬೇಡಿಕೆ ಹೆಚ್ಚಿದವು. ಹೆಗಡೆ ಅವರ ಈ ಶ್ರಮಕ್ಕೆ ಸರ್ಕಾರದಿಂದ ಸಬ್ಸಿಡಿಯೂ ಸಿಕ್ಕಿತು. ಇದೆಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದ ಅನೇಕ ಜಿಲ್ಲೆಗಳಿಂದ ಕಸಿ ಕಾಳಮೆಣಸಿನ ಬಳ್ಳಿಗೆ ಬೇಡಿಕೆ ಬರಲಾರಂಭಿಸಿದವು.
ಇಂದು ಹಗಡೆ ಅವರ ತಾಲೂಕು ಕುಮಟಾದಲ್ಲಿಯೇ ಕೋಟ್ಯಂತರ ರು. ಬೆಲೆಯ ಕಾಳಮೆಣಸು ಉತ್ಪಾದನೆಯಾಗುತ್ತಿದೆ. ಇದರ ಬಹುಪಾಲು ಕ್ರೆಡಿಟ್ ನಾರಾಯಣ ಹೆಗಡೆ ಅವರಿಗೆ ಸಲ್ಲುತ್ತದೆ.
 
ಗಮನಾರ್ಹ ಅಂಶ

- ಮೂರು ಎಕರೆಯಷ್ಟು ಕೃಷಿ ಭೂಮಿಯಲ್ಲಿ ಅಡಕೆಯ ಜತೆ ಜೊತೆಯಲ್ಲೇ ಒಂದಿಷ್ಟು ಅಲ್ಪಾವಧಿ ಬೆಳೆಯಿಂದ ನಷ್ಟವನ್ನೂ ಅನುಭವಿಸಿ ಕಡೆಗೂ ಕಾಳು ಮೆಣಸು ಕೃಷಿ ಲಾಭದಾಯಕ ಎಂಬುದನ್ನು ಸಾಬೀತುಪಡಿಸಿದ ಹೆಗ್ಗಳಿಕೆ ನಾರಾಯಣ ಹೆಗಡೆ ಅವರದ್ದು. ಬ್ರೆಜಿಲ್ ಮೂಲದ ಹಿಪ್ಪಲಿ ಎಂಬ ಗಿಡವೊಂದನ್ನು ತಂದು ಸ್ಥಳೀಯ ಕಾಳು ಮೆಣಸಿನ ಬಳ್ಳಿಗೆ ಕಸಿ ಮಾಡಿ ಉತ್ತಮ ಇಳುವರಿ ನೀಡಬಲ್ಲ ಕಾಳು ಮೆಣಸಿನ ಬಳ್ಳಿ ಅಭಿವೃದ್ಧಿ ಪಡಿಸಿದ್ದು ಹಾಗೂ ಆ ಬಗ್ಗೆ ಜಾಗೃತಿ ಮೂಡಿಸಿ ಯಶಸ್ಸು ಸಾಧಿಸಿರುವುದು ನಾರಾಯಣ ಹೆಗಡೆ ಅವರ ಸಾಧನೆಯ ವಿಶೇಷವಾಗಿದೆ.

- ಕಾಳು ಮೆಣಸಿನ ಬಳ್ಳಿ ಬೆಳೆಯುವುದೊಂದು ಸವಾಲಾದರೆ, ಬೆಳೆ ಕೀಳುವುದೂ ಇನ್ನೊಂದು ಸವಾಲು. ಅಡಕೆ ಮರ ಅಥವಾ ಇನ್ನಾವುದೋ ಮರವನ್ನು ಆಧರಿಸಿ ಬೆಳೆಯಲಾಗುವ ಈ ಬಳ್ಳಿಯಿಂದ ಬೆಳೆ ಕೀಳಲು ಎತ್ತರಕ್ಕೆ ಏರುವುದು ಅಪಾಯಕಾರಿ ಕಾಯಕವಾದ ಕಾರಣ ಈಗ ನೆಲದ ಮೇಲೆಯೇ ನಿಂತು ಕೈಗೆಟುಕುವ ಎತ್ತರಕ್ಕೆ ಮಾತ್ರ ಬಳ್ಳಿ ಬೆಳೆಯುವಂತೆ ಅಭಿವೃದ್ಧಿ ಪಡಿಸುವಲ್ಲಿಯೂ ನಾರಾಯಣ ಹೆಗಡೆ ಯಶಸ್ವಿಯಾಗಿದ್ದಾರೆ. ಎತ್ತರಕ್ಕೆ ಬೆಳೆಯುವ ಬಳ್ಳಿಯ ತುದಿಯಲ್ಲಿ ಗ್ರಾಫ್‌ಡೆಡ್ ಬುಷ್ ಪೇಪರ್ ಪದ್ಧತಿಯ ಕಸಿ ಮಾಡಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಇದೀಗ ಈ ಪ್ರಕಾರದ ಕಾಳುಮೆಣಸು ಬಳ್ಳಿಗಳಿಗೆ ಬೇಡಿಕೆಯೂ ಹೆಚ್ಚಿದೆ.
 

Follow Us:
Download App:
  • android
  • ios