ವಿಭಾಗ: ರೈತ ಉತ್ಪಾದನಾ ಸಂಸ್ಥೆ
ಊರು: ವಿಟ್ಲ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

ದಕ್ಷಿಣ ಕನ್ನಡ (ಫೆ.12): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಗತಿಪರ ಕೃಷಿಕರ ತಂಡ ತೋಟಗಾರಿಕಾ ಇಲಾಖೆಯ ಸಹಕಾರದೊಂದಿಗೆ 2016ರಲ್ಲಿ ಪಿಂಗಾರ ಹೆಸರಿನ ರೈತ ಉತ್ಪನ್ನಗಳ ತಯಾರಿಕ ಸಂಸ್ಥೆ ಸ್ಥಾಪಿಸಿ ಯಶಸ್ಸು ಕಂಡಿದೆ. ಪ್ರಾರಂಭಿಕ ಹಂತದಲ್ಲಿ ಹಲಸಿನ ಹಣ್ಣಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಬಂದ ಲಾಭವನ್ನು ಸಂಸ್ಥೆಯ ಸದಸ್ಯರು ಹಂಚಿಕೊಳ್ಳುವ ಕೆಲಸ ಮಾಡುತ್ತಿತ್ತು. ಸದ್ಯ ಹಲಸಿನ ಜೊತೆಗೆ ಬಾಳೆ ಹಣ್ಣಿನ ಉತ್ಪನ್ನಗಳನ್ನೂ ತಯಾರಿಸಿ ಮಾರಾಟ ಮಾಡುತ್ತಿದೆ.

ರೈತ ರತ್ನ ಪ್ರಶಸ್ತಿ ಬಗೆಗಿನ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
 
ಸಾಧನೆಯ ವಿವರ

 2012ರಲ್ಲಿಯೇ ಸಂಸ್ಥೆ ಸ್ಥಾಪನೆಗೆ ಪ್ರಕ್ರಿಯೆ ಆರಂಭವಾಗಿದ್ದು, ತೋಟಗಾರಿಕಾ ಇಲಾಖೆಯು ರೈತರನ್ನು ಗುರುತಿಸಿ ಸಹಕಾರ ಸಂಸ್ಥೆಯ ಸ್ಥಾಪನೆಯ ಬಗ್ಗೆ ಎನ್ಜಿಒವೊಂದಕ್ಕೆ ಗುತ್ತಿಗೆ ನೀಡಿತ್ತು. ಸದ್ಯ 1000 ರೈತರು ಒಗ್ಗೂಡಿ ಪಿಂಗಾರ ರೈತ ಉತ್ಪನ್ನಗಳ ತಯಾರಿ ಮಾಡುವ ಬೃಹತ್ ಸಹಕಾರಿ ಸಂಸ್ಥೆಯಾಗಿ ಆರಂಭಿಸಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಹಲಸಿನ ಹಣ್ಣಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಬಂದ ಲಾಭವನ್ನು ಸಂಸ್ಥೆಯ ಸದಸ್ಯರು ಹಂಚಿಕೊಳ್ಳುವ ಕೆಲಸ ಮಾಡುತ್ತಿತ್ತು. ಕಂಪನಿಯ ಮುಖ್ಯ ಉದ್ದೇಶ ಮಧ್ಯವರ್ತಿಗಳ ಕಾಟ ಇಲ್ಲದೆ ರೈತರು ಬೆಳೆದ ಉತ್ಪನ್ನಗಳ ನೇರ ಖರೀದಿ. ರೈತರಿಂದ ರೈತರಿಗೋಸ್ಕರ, ರೈತರಿಂದಲೇ ನಡೆಯುವ ಸಹಕಾರಿ ಸಂಸ್ಥೆ ಇದು. ಹಲಸಿನ ಉತ್ಪನ್ನಗಳಾದ ಹಪ್ಪಳ, ಚಿಪ್ಸ್, ಹಲ್ವಾ, ಮಾಂಬಳ, ಹಲಸಿನ ಬೆರಟ್ಟಿಯ ಪಾಯಸ ತಯಾರಿ ಇಲ್ಲಿ ಆಗುತ್ತಿದೆ. ಇವುಗಳನ್ನು ಬೆಂಗಳೂರು, ಮಂಗಳೂರು ಮತ್ತಿತರ ಕಡೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹಲಸಿನ ಸೀಸನ್ನಲ್ಲಿ ಪ್ರತಿ ದಿನ 1500 ಹಪ್ಪಳ, ವಾರಕ್ಕೆ 25 ಕೆ.ಜಿ ಹಲ್ವಾ, 8-10 ಕೆ.ಜಿ ಚಿಪ್ಸ್, 5 ಕೆ.ಜಿ ಮಾಂಬಳ ಉತ್ಪಾದನೆ ಮಾಡಲಾಗುತ್ತಿದೆ. ಹಲಸು ಸೀಸನ್ ಹೊರತುಪಡಿಸಿ ಇತರ ಸಮಯದಲ್ಲಿ ಬಾಳೆಕಾಯಿ ಚಿಪ್ಸ್ ಹಾಗೂ ಬಾಳೆಹಣ್ಣಿನ ಹಲ್ವಾ ತಯಾರಿಸಲಾಗುತ್ತಿದೆ. ಜೊತೆಗೆ ಹಲಸಿನ ಬೀಜ, ಬೀಜದ ಪುಡಿ, ಹಲಸಿನ ಸೊಳೆ, ಪಲ್ಪ್ಗಳನ್ನೂ ಮಾರಾಟ ಮಾಡಲಾಗುತ್ತದೆ.

ಸರ್ಕಾರಿ ನೌಕರಿ ಅವಕಾಶ ಬಿಟ್ಟು ಕೃಷಿಯಲ್ಲೀಗ ಲಕ್ಷಾಧಿಪತಿ ...

ಗಮನಾರ್ಹ ಅಂಶ

- ಕೃಷಿ ಫಸಲಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಲ್ಪಿಸಿ ಬೇಡಿಕೆ ವೃದ್ಧಿಸುವುದು ಸಂಸ್ಥೆಯ ಮೂಲ ಉದ್ದೇಶ.
-ಹಲಸಿನ ಮೌಲ್ಯವರ್ಧನೆ ಬಗ್ಗೆ ಅಡಕೆ ಪತ್ರಿಕೆಯಲ್ಲಿ ಹಲಸು ಬೆಳೆಗಾರರ ಯಶೋಗಾಥೆ ಪ್ರಕಟಗೊಂಡಾಗ ತೋಟದಲ್ಲಿ ಬಿದ್ದು ಕೊಳೆಯುವ ಹಲಸಿನ ಮೌಲ್ಯವರ್ಧನೆಗೆ ಈ ಬೆಳೆಗಾರರ ತಂಡ ಕಂಪನಿ ಆರಂಭಿಸಿತು. 
-1000 ರು. ಬಂಡವಾಳದೊಂದಿಗೆ ರೈತರು ಸಹಕಾರ ಸಂಸ್ಥೆಯ ಸದಸ್ಯರಾಗಿದ್ದಾರೆ. ಇಷ್ಟು ದೊಡ್ಡಮಟ್ಟದಲ್ಲಿ ರೈತರೇ ಕಂಪನಿ ಪ್ರಾರಂಭಿಸಿದ್ದು ರಾಜ್ಯದಲ್ಲೇ ಮೊದಲು ಎಂದಿದ್ದಾರೆ.
-ಹಲಸು, ಬಾಳೆ ಇತ್ಯಾದಿ ಉತ್ಪನ್ನಗಳನ್ನು ಸದಸ್ಯ ರೈತರಿಂದಲೇ ಖರೀದಿ ಮಾಡಲಾಗುತ್ತಿದೆ. ಅಗತ್ಯ ಬಿದ್ದಾಗ ಇತರೆ ರೈತರಿಂದಲೂ ಖರೀದಿ ಮಾಡಲಾಗುತ್ತಿದೆ.

-ತಿನಿಸುಗಳ ತಯಾರಿಕೆ ವೇಳೆ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರೈತರಿಂದ ಖರೀದಿಸಿದ ನಂತರ ಸಂಸ್ಕರಿಸಲಾಗುತ್ತದೆ. 
- ಬೆಂಗಳೂರಿನಲ್ಲಿರುವ ‘ಮಂಗಳೂರು ಸ್ಟೋರ್ಸ್’ಗಳಲ್ಲಿ ಈ ತಿನಿಸುಗಳು ಲಭ್ಯ.

-ಅಷ್ಟೇ ಅಲ್ಲದೆ ಕೃಷಿ ಉಪಕರಣಗಳಾದ ಹಾರೆ, ಗುದ್ದಲಿ, ಪಿಕ್ಕಾಸು ಮಾರಾಟ ಮತ್ತು ಬಾಡಿಗೆಗೆ ನೀಡಲಾಗುತ್ತಿದೆ. ಪ್ಲಾಸ್ಟಿಕ್ ಶೀಟ್ ಇತ್ಯಾದಿ ಕೃಷಿ ಬಳಕೆಯ ವಸ್ತುಗಳನ್ನು ನೇರವಾಗಿ ಕಂಪನಿಯಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ.
-ಕಳೆದ ವರ್ಷ ಸಂಸ್ಥೆಯು 2.5 ಕೋಟಿ ರು. ವಹಿವಾಟು ನಡೆಸಿದೆ.