ವಿಶ್ವದ 67 ದೇಶಕ್ಕೆ ಕರ್ನಾಟಕ ಪ್ರವಾಸೋದ್ಯಮ ಪರಿಚಯಿಸಿದ ಸಿನಾನ್‌ಗೆ ಅವಮಾನಿಸಿದ ದಾವಣಗೆರೆ ಕನ್ನಡಿಗರು!
ವಿಶ್ವದ 67 ದೇಶಗಳಲ್ಲಿ ಕರ್ನಾಟಕದ ಪ್ರವಾಸೋದ್ಯಮ ಪ್ರಸಾರ ಮಾಡಿದ ಪುತ್ತೂರಿನ ಮೊಹಮ್ಮದ್ ಸಿನಾನ್ ಅವರಿಗೆ ದಾವಣಗೆರೆಯಲ್ಲಿ ಕನ್ನಡಪರ ಸಂಘಟನೆಗಳಿಂದ ಅವಮಾನ. ಕಾರಿನಲ್ಲಿ ಕನ್ನಡ ಬರಹ ಇಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿ ಅವಮಾನಿಸಿದ ಘಟನೆ ನಡೆದಿದೆ.
ಬೆಂಗಳೂರು/ದಾವಣಗೆರೆ (ನ.28): ಜಗತ್ತಿನಲ್ಲಿ 210ಕ್ಕೂ ಅಧಿಕ ದೇಶಗಳಿದ್ದು, ಅವುಗಳಲ್ಲಿ ಕಳೆದೆರಡು ವರ್ಷಗಳಿಂದ ಕರ್ನಾಟಕ ರಿಜಿಸ್ಟರ್‌ನ ಸ್ಕಾರ್ಪಿಯೋ ಕಾರಿನಲ್ಲಿ 67 ದೇಶಗಳನ್ನು ಸುತ್ತಾಡುತ್ತಾ ಕನ್ನಡ ನಾಡು, ನುಡಿಯ ಐತಿಹ್ಯ ಪ್ರಸಾರ ಹಾಗೂ ಕರ್ನಾಟಕದ ಪ್ರವಾಸೋದ್ಯಮ ಪ್ರಸಾರ ಮಾಡುತ್ತಿದ್ದ ಪುತ್ತೂರಿನ ಮೊಹಮ್ಮದ್ ಸಿನಾನ್ (30) ಅವರನ್ನು ದಾವಣೆಗೆರೆಯ ಕನ್ನಡ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಕನ್ನಡಪರ ವೇದಿಕೆಯ ನಾಯಕರು ನಿಮ್ಮ ಕಾರಿನಲ್ಲಿ ಕನ್ನಡವೇ ಅಗ್ರಗಣ್ಯ ಭಾಷೆಯಾಗಿ ಬರೆದುಕೊಳ್ಳಬೇಕು ಎಂದು ಕ್ಯಾತೆ ತೆಗೆದು ಅವಮಾನಿಸಿ ಕಳಿಸಿದ್ದಾರೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆ ಮೂಲದ ಮಹಮ್ಮದ್ ಸಿನಾನ್ ಎನ್ನುವ ಯುವಕ ಮೂಲತಃ ಕರ್ನಾಟಕದವನಾದರೂ, ತಾಯಿ ಮನೆ ಕೇರಳದಲ್ಲಿ ಹುಟ್ಟಿ, ಬಾಲ್ಯವನ್ನು ಕಳೆದಿದ್ದಾನೆ. ನಂತರ, ಇಂಗ್ಲೀಷ್ ಮೀಡಿಯಂನಲ್ಲಿ ಓದಿದ್ದಾನೆ. ಆದ್ದರಿಂದ ಸ್ಪಷ್ಟವಾಗಿ ಕನ್ನಡ ಮಾತನಾಡಲೂ ಎಡವುತ್ತಿದ್ದ ಸಿನಾನ್‌ಗೆ ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯ ಒಂದು ರಾಜ್ಯ ಹಲವು ಪ್ರಪಂಚ ಪರಿಕಲ್ಪನೆಯ ಹಲವು ಪ್ರವಾಸಿ ತಾಣಗಳು ಮಂತ್ರಮುಗ್ದಗೊಳಿಸಿದ್ದವು. ಹೀಗಾಗಿ, ನಮ್ಮ ಕರ್ನಾಟಕದ ಪ್ರವಾಸಿ ತಾಣಗಳನ್ನು ವಿಶ್ವದ 75 ದೇಶಗಳಿಗೆ ತಿಳಿಸಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ಆದರೆ, ಆತನಿಗೆ ಸ್ಪಷ್ಟವಾಗಿ ಕನ್ನಡವೂ ಬರುತ್ತಿರಲಿಲ್ಲ. ಆಗ ಸ್ಥಳೀಯವಾಗಿ ಪುತ್ತೂರಿನಲ್ಲಿ ನೆಲೆಸಿ ಕನ್ನಡವನ್ನು ಕಲಿತು, ಕನ್ನಡಿಗರೊಂದಿಗೆ ಬೆರೆಯುತ್ತಾರೆ. ನಂತರ ವಿಶ್ವ ಪರ್ಯಟನೆ ಹೊರಡುತ್ತಾರೆ. ಇದೀಗ ಎರಡು ವರ್ಷಗಳಲ್ಲಿ 67 ದೇಶಗಳಲ್ಲಿ ಕರ್ನಾಟಕದ ಪ್ರವಾಸೋದ್ಯಮ ಮಾತ್ರವಲ್ಲದೇ ಕನ್ನಡ ನಾಡು, ನುಡಿಯ ಇತಿಹಾಸ ಹಾಗೂ ಕನ್ನಡ ಚಿತ್ರರಂಗದ ನಾಯಕರ ಬಗ್ಗೆಯೂ ಪ್ರಚಾರ ಮಾಡಿ ಬಂದಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕದ ರಿಜಿಸ್ಟೇಷನ್ ಹೊಂದಿದ ಸ್ಕಾರ್ಪಿಯೋ ಕಾರಿನಲ್ಲಿ ವಿಶ್ವ ಪರ್ಯಟನೆ ಮಾಡಲು ಹೋಗಿದ್ದಾರೆ. ಎರಡು ವರ್ಷಗಳಲ್ಲಿ ಸುಮಾರು 67 ದೇಶಗಳನ್ನು ಸುತ್ತಾಡಿ ಕರ್ನಾಟಕ ಪ್ರವಾಸೋದ್ಯಮ ಮತ್ತು ಕನ್ನಡ ಇತಿಹಾಸವನ್ನು ಪ್ರಸಾರ ಮಾಡುತ್ತಾ 2024ರ ನವೆಂಬರ್ ಅಂತ್ಯದೊಳಗೆ ಮಾತೃ ಭೂಮಿಗೆ ವಾಪಸಾಗಬೇಕು ಎಂದು ಬಂದಿದ್ದಾರೆ. ಸಿನಾನ್ ಕರ್ನಾಟಕಕ್ಕೆ ಬರುತ್ತಿದ್ದಂತೆ ಅವರನ್ನು ಹಲವು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಇದೇ ರೀತಿ ದಾವಣಗೆರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುವಂತೆ ಆಹ್ವಾನ ನೀಡಿದ್ದಾರೆ. ಆದರೆ, ಸಿನಾನ್ ವಿಶ್ವದ 67 ದೇಶಗಳನ್ನು ಸುತ್ತಾಡುತ್ತಾ ಇನ್ನೂ ತಾಯಿಯನ್ನು ನೋಡಲು ಕೇರಳದ ಮನೆಗೂ ಹೋಗಿರಲಿಲ್ಲ. ಜೊತೆಗೆ, ಅನಾರೋಗ್ಯವೂ ಕಾಡುತ್ತಿತ್ತು. ಇದರ ನಡುವೆಯೂ ಕನ್ನಡದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆಂದು ದಾವಣಗೆರೆಗೆ ಬಂದಿದ್ದಾರೆ.
ಇದನ್ನೂ ಓದಿ: ಸ್ಕಾರ್ಪಿಯೋ ಕಾರಿನಲ್ಲೇ 41 ದೇಶ ಸುತ್ತಿದ ಪುತ್ತೂರು ಯುವಕ; ಸಾಹಸಿ ಸಿನಾನ್‍ಗೊಂದು ಸಲಾಂ
ಸಿನಾನ್ ತಾನು ವಿಶ್ವ ಪರ್ಯಟನೆ ಮಾಡಿದ ಕಾರಿನಲ್ಲಿಯೇ ದಾವಣಗೆರೆಗೆ ಹೋಗಿದ್ದಾರೆ. ಅಲ್ಲಿನ ಕನ್ನಡಪರ ಸಂಘಟನೆ ಸದಸ್ಯರು, ನೀವು ಕಾರಿನ ಮೇಲೆ ಕನ್ನಡ ಅಗ್ರಗಣ್ಯ ಭಾಷೆಯಾಗಿ ಕಾಣಿಸುವಂತೆ ಬರಹಗಳನ್ನು ಬರೆಸಿಕೊಂಡಿಲ್ಲ. ಕೇವಲ ಕನ್ನಡಿಗ ಎಂದು ಮಾತ್ರ ಕನ್ನಡದಲ್ಲಿ ಬರೆದುಕೊಂಡಿದ್ದೀರಿ. ಜೊತೆಗೆ ನಿಮ್ಮ ಯೂಟ್ಯೂಬ್ ಚಾನೆಲ್ ಹೆಸರನ್ನೂ ಇಂಗ್ಲೀಷನ್‌ನಲ್ಲಿ ಹಾಕಿದ್ದೀರಿ. ಕನ್ನಡದ ಧ್ವಜ ಇದ್ದರಷ್ಟೇ ಸಾಲದು, ಕನ್ನಡದಲ್ಲಿ ದೊಡ್ಡದಾಗಿ ಬರೆಸಿಕೊಳ್ಳಬೇಕು. ನಿಮ್ಮ ಕಾರಿನ ಮೇಲಿರುವ ಇಂಗ್ಲೀಷ್ ಸ್ಟಿಕ್ಕರ್ ಕಿತ್ತುಹಾಕುವಂತೆ ಗಲಾಟೆ ಮಾಡಿದ್ದಾರೆ. ಆಗ ಸಿನಾನ್ ಇದು ವಿಶ್ವ ಪರ್ಯಟನೆ ಮಾಡಿ ಕಾರು. ವಿಶ್ವದ ಎಲ್ಲ ದೇಶದ ಜನತೆಗೆ, ಅಧಿಕಾರಿಗಳಿಗೆ ತಿಳಿಯುವಂತೆ ಇಂಗ್ಲೀಷನ್‌ನಲ್ಲಿಯೇ ಬರೆದುಕೊಳ್ಳಬೇಕು. ಜೊತೆಗೆ, ನನ್ನ ಯೂಟೂಬ್ ಚಾನೆಲ್ ಅನ್ನು ಅದು ಹೇಗಿದೆಯೋ ಹಾಗೆ ಇಂಗ್ಲೀಷ್‌ನಲ್ಲಿ ಹಾಕದಿದ್ದರೆ ಅರ್ಥವೇ ಇರುವುದಿಲ್ಲ ಎಂದು ಮನವರಿಕೆ ಮಾಡಲು ಮುಂದಾಗಿದ್ದಾರೆ. ಆದರೆ, ಇದ್ಯಾವುದಕ್ಕೂ ಕ್ಯಾರೇ ಎನ್ನದೇ ಸಿನಾನ್‌ಗೆ ಗುಂಪು ಕಟ್ಟಿಕೊಂಡು ಸ್ಟಿಕ್ಕರ್ ಕೀಳುವಂತೆ, ಕನ್ನಡ ಬರೆಸಿಕೊಳ್ಳುವಂತೆ ಕಿರುಕುಳ ನೀಡಿದ್ದಾರೆ.
ನಾನು ಕೂಡ ಕನ್ನಡಿಗನೇ.. ಕನ್ನಡದ ಬಗ್ಗೆ ಅಭಿಮಾನ, ಸ್ವಾಭಿಮಾನ ನನಗೂ ಇದೆ. ಕನ್ನಡ ನಾಡು, ನುಡಿಯ ಇತಿಹಾಸ ಸೇರಿ ಕರ್ನಾಟಕದ ಪ್ರವಾಸೋದ್ಯಮದ ಬಗ್ಗೆ ವಿಶ್ವಕ್ಕೆ ಸಾರಲು ಕನ್ನಡದ ಪ್ರತಿನಿಧಿಯಾಗಿಯೇ ಹೋಗಿದ್ದೇನೆ. ಕನ್ನಡದ ಬಗ್ಗೆ ಅಭಿಮಾನ ಇರುವುದರಿಂದಲೇ ಕಾರಿನ ಹಿಂಭಾಗ ದೊಡ್ಡದಾಗಿ ಬರೆಸಿಕೊಂಡಿದ್ದೇನೆ. ಆದರೆ, ಕೆಲವು ದೇಶಗಳಲ್ಲಿ ಕಾರಿನ ಮೇಲೆ ದೊಡ್ಡದಾಗಿ ಕನ್ನಡ ಬರೆಸಿಕೊಂಡು ಹೋದರೆ ಪ್ರವೇಶವನ್ನೇ ನೀಡುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಸಿನಾನ್ ಹೇಳುವುದನ್ನು ಕೇಳದೇ ತಮ್ಮದೇ ಹಠ ಹಿಡಿದ ಕನ್ನಡಪರ ಸಂಘಟನೆಯ ಸದಸ್ಯರಿಗೆ ಹೇಗೆ ತಿಳಿಸಬೇಕು ಎಂದು ಗೊತ್ತಾಗದೇ ಕನ್ನಡ ರಾಜ್ಯೋತ್ಸವ ಮೆರವಣಿಗೆ ಹೊರಟಿದ್ದ ಸ್ಥಳದಿಂದ ಬೇರೆಡೆ ಹೋಗುತ್ತಾರೆ.
ಇದನ್ನೂ ಓದಿ: ಪ್ರದೀಪ್ ಈಶ್ವರ್ ಅವರೇ ತುಂಬಾ ದೊಡ್ಡ ವ್ಯಕ್ತಿಯಾದ್ರಿ; ಬಿಗ್‌ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ
ಪರಿಸ್ಥಿತಿ ತಿಳಿಗೊಳಿಸಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ:
ದಾವಣಗೆರೆ ನಗರದ ಕನ್ನಡಪರ ಸಂಘಟನೆಗಳಿಂದ ಆಯೋಜನೆ ಮಾಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅತಿಥಿಯಾಗಿ ಬಂದ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗುತ್ತಾರೆ. ವಿಶ್ವದಲ್ಲಿ ಸುತ್ತಾಡುವ ಕಾರಿನ ಮೇಲೆ ದೊಡ್ಡದಾಗಿ ಕನ್ನಡ ಅಕ್ಷರ ಬರೆಸಿಕೊಂಡರೆ ಅಲ್ಲಿ ಪ್ರವೇಶವೇ ಇರುವುದಿಲ್ಲ. ನಮ್ಮ ಕನ್ನಡ ನಾಡಿನ ಪ್ರತಿನಿಧಿಯ ಬಗ್ಗೆ ಸರಿಯಾಗಿ ಅರ್ಥೈಸಿಕೊಳ್ಳದೇ ಮಾತನಾಡಬೇಡಿ ಎಂದು ಕನ್ನಡಪರ ಸಂಘಟನೆ ಸದಸ್ಯರಿಗೆ ಬುದ್ಧಿ ಹೇಳಿದ್ದಾರೆ. ನಂತರ, ಸಿನಾನ್‌ಗೆ ದಾವಣಗೆರೆಯಲ್ಲಿ ನಡೆದ ಪರಿಸ್ಥಿತಿ ಬಗ್ಗೆ ಎಲ್ಲಿಯೂ ಹೇಳದಂತೆ ಮನವಿ ಮಾಡಿ, ಗೌರವ ಸಲ್ಲಿಕೆ ಮಾಡಿದ್ದಾರೆ.