ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದ ಪಶ್ಚಿಮ ಬಂಗಾಳ ಮೂಲದ ಗಾಯಕ ರಜತೇಶ್ ಬೇರಾ ಅವರಿಗೆ ಬೋರ್ಡಿಂಗ್ ನಿರಾಕರಿಸಲಾಯಿತು. ಇದರಿಂದ ಸಿಟ್ಟಿಗೆದ್ದ ಅವರು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದು 'ಬಾಂಬ್' ಎಂಬ ಪದ ಬಳಸಿದ್ದರಿಂದ, ಪೊಲೀಸರು ಅವರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

ಬೆಂಗಳೂರು (ಮಾ. 15): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ ನಡೆದಿದೆ. ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದ ಪಶ್ಚಿಮ ಬಂಗಾಳ ಮೂಲದ ಗಾಯಕ ರಜತೇಶ್ ಬೇರಾ, ಸಿಬ್ಬಂದಿ ಎದುರು 'ಬಾಂಬ್' ಪದ ಬಳಸಿ ಈಗ ಜೈಲು ಪಾಲಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಡವಾಗಿ ಬಂದ ಗಾಯಕನಿಗೆ ಬೋರ್ಡಿಂಗ್ ನಿರಾಕರಣೆ

ಪಶ್ಚಿಮ ಬಂಗಾಳದ ಗಾಯಕ ರಜತೇಶ್ ಬೇರಾ ಬೆಂಗಳೂರಿನಿಂದ ರಾಯಪುರಕ್ಕೆ ತೆರಳಲು ಇಂಡಿಗೋ ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಅವರು ನಿಗದಿತ ಸಮಯಕ್ಕಿಂತ ತಡವಾಗಿ ವಿಮಾನ ನಿಲ್ದಾಣಕ್ಕೆ ಬಂದಿದ್ದರಿಂದ, ಅಷ್ಟರಲ್ಲಾಗಲೇ ಬೋರ್ಡಿಂಗ್ ಗೇಟ್ ಕ್ಲೋಸ್ ಆಗಿತ್ತು. ಸಮಯ ಮೀರಿದ ಕಾರಣ ಸಿಬ್ಬಂದಿ ಅವರಿಗೆ ಒಳಗೆ ಹೋಗಲು ಅವಕಾಶ ನೀಡಲಿಲ್ಲ.

ಸಿಬ್ಬಂದಿ ಜೊತೆ ಕಿರಿಕ್: 'ಬಾಂಬ್' ಪದ ಬಳಸಿ ಯಡವಟ್ಟು

ವಿಮಾನದೊಳಗೆ ಬಿಡದಿದ್ದಕ್ಕೆ ಸಿಬ್ಬಂದಿ ಜೊತೆ ಗಾಯಕ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಆಕ್ರೋಶದ ಭರದಲ್ಲಿ, 'ವಿಮಾನದಲ್ಲಿ ಬಾಂಬ್ ಇದ್ದರೆ ನೀವು ಫ್ಲೈಟ್ ನಿಲ್ಲಿಸುವುದಿಲ್ಲವೇ?' ಎಂದು ಪ್ರಶ್ನಿಸಿದ್ದಾರೆ. ಗಾಯಕನ ಬಾಯಲ್ಲಿ 'ಬಾಂಬ್' ಎಂಬ ಶಬ್ದ ಕೇಳುತ್ತಿದ್ದಂತೆಯೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಇಂಡಿಗೋ ಅಧಿಕಾರಿಗಳು ತಕ್ಷಣವೇ ಅಲರ್ಟ್ ಆಗಿದ್ದಾರೆ.

ಅನುಮಾನಗೊಂಡ ಸಿಬ್ಬಂದಿ ಪೊಲೀಸ್‌ಗೆ ದೂರು

ವಿಮಾನ ನಿಲ್ದಾಣದಂತಹ ಸೂಕ್ಷ್ಮ ಪ್ರದೇಶದಲ್ಲಿ 'ಬಾಂಬ್' ಪದ ಬಳಸಿದ್ದು ಗಂಭೀರ ಭದ್ರತಾ ಆತಂಕಕ್ಕೆ ಕಾರಣವಾಯಿತು. ಗಾಯಕನ ವರ್ತನೆಯಿಂದ ಅನುಮಾನಗೊಂಡ ಏರ್‌ಪೋರ್ಟ್ ಸಿಬ್ಬಂದಿ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ.

ಎಫ್ಐಆರ್ ದಾಖಲು; ಗಾಯಕನಿಗೆ ಮುಳುವಾಯ್ತು ಬಾಂಬ್ ಮಾತು

ಇಂಡಿಗೋ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಏರ್‌ಪೋರ್ಟ್ ಠಾಣೆ ಪೊಲೀಸರು ಗಾಯಕ ರಜತೇಶ್ ಬೇರಾ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಸಾರ್ವಜನಿಕ ಶಾಂತಿ ಭಂಗ ಮತ್ತು ಭದ್ರತಾ ನಿಯಮಗಳ ಉಲ್ಲಂಘನೆ ಅಡಿಯಲ್ಲಿ ಗಾಯಕನನ್ನು ಪೊಲೀಸರು ಬಂಧಿಸಿದ್ದು, ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಯಾಣಿಕರೇ ಗಮನಿಸಿ: ವಿಮಾನ ನಿಲ್ದಾಣಗಳಲ್ಲಿ ತಮಾಷೆಗಾಗಲಿ, ಆಕ್ರೋಶದಲ್ಲಾಗಲಿ 'ಬಾಂಬ್', 'ಗನ್' ನಂತಹ ಪದಗಳನ್ನು ಬಳಸುವುದು ಗಂಭೀರ ಅಪರಾಧವಾಗಿದ್ದು, ಇದು ಜಾಮೀನು ರಹಿತ ಶಿಕ್ಷೆಗೆ ಗುರಿಯಾಗುವಂತೆ ಮಾಡಬಹುದು.