ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಸಂಭವ: ಸಿದ್ದರಾಮಯ್ಯ ಭವಿಷ್ಯ
ತನ್ನ ಸಿದ್ಧಾಂತ, ಮೌಲ್ಯಗಳನ್ನು ಗಾಳಿಗೆ ತೂರಿರುವ ಜೆಡಿಎಸ್ ಪಕ್ಷದಿಂದ ‘ಎಸ್’(ಜಾತ್ಯತೀತ) ತೆಗೆದು ಹಾಕಬೇಕಾಗಿದೆ. ಜೆಡಿಎಸ್ ತನ್ನ ಸ್ವರೂಪದಲ್ಲಿ ರಾಜಕೀಯ ಪಕ್ಷವಾಗಿ ಉಳಿದಿಲ್ಲ, ಕೇವಲ ಕುಟುಂಬದ ಪಕ್ಷ ಅಷ್ಟೆ. ಸದ್ಯದಲ್ಲೇ ಬಿಜೆಪಿ ಜತೆಗೆ ಜೆಡಿಎಸ್ ಪಕ್ಷ ಸಂಪೂರ್ಣ ವಿಲೀನ ಆದರೂ ಆಶ್ಚರ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು (ನ.16): ತನ್ನ ಸಿದ್ಧಾಂತ, ಮೌಲ್ಯಗಳನ್ನು ಗಾಳಿಗೆ ತೂರಿರುವ ಜೆಡಿಎಸ್ ಪಕ್ಷದಿಂದ ‘ಎಸ್’(ಜಾತ್ಯತೀತ) ತೆಗೆದು ಹಾಕಬೇಕಾಗಿದೆ. ಜೆಡಿಎಸ್ ತನ್ನ ಸ್ವರೂಪದಲ್ಲಿ ರಾಜಕೀಯ ಪಕ್ಷವಾಗಿ ಉಳಿದಿಲ್ಲ, ಕೇವಲ ಕುಟುಂಬದ ಪಕ್ಷ ಅಷ್ಟೆ. ಸದ್ಯದಲ್ಲೇ ಬಿಜೆಪಿ ಜತೆಗೆ ಜೆಡಿಎಸ್ ಪಕ್ಷ ಸಂಪೂರ್ಣ ವಿಲೀನ ಆದರೂ ಆಶ್ಚರ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಬುಧವಾರ ಪಕ್ಷದ ‘ಭಾರತ್ ಜೋಡೋ ಭವನ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಮಾಜಿ ಶಾಸಕರಾದ ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಹಾಗೂ ದಾಸರಹಳ್ಳಿ ಕ್ಷೇತ್ರದ ಮಂಜುನಾಥ್ ಸೇರಿದಂತೆ ಹಲವು ನಾಯಕರನ್ನು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವಿದ್ದಾಗ ಜನತಾದಳ ಜಾತ್ಯತೀತ ತತ್ವ ಹೊಂದಿತ್ತು. ಈಗ ‘ಎಸ್’ ಕಿತ್ತು ಹೋಗಿ ಕೇವಲ ಜನತಾದಳ ಆಗಿ ಉಳಿದಿದೆ. ಹಿಂದೆಯೂ ಬಿಜೆಪಿ ಜತೆ ಕೈ ಜೋಡಿಸಿದ್ದ ಕಾರಣಕ್ಕೆ ಜನತಾ ಪರಿವಾರದಲ್ಲಿ ಜಾತ್ಯತೀತ ಸಿದ್ದಾಂತದವರೆಲ್ಲರೂ ಪ್ರತ್ಯೇಕವಾಗಿ ಉಳಿದೆವು. ಈಗ ಜೆಡಿಎಸ್ ಮತ್ತೆ ಬಿಜೆಪಿ ಜತೆ ಬೆರೆಯುತ್ತಿದೆ. ನಾನು ಈ ಜೆಡಿಎಸ್ ಅನ್ನು ಬಿಜೆಪಿಯ ‘ಬಿ’ ಟೀಮ್ ಅಂದಿದ್ದಕ್ಕೆ ಸಿಟ್ಟಾಗಿದ್ದರು. ಅಂದು ನಾನು ಹೇಳಿದ್ದನ್ನು ಇಂದು ಅವರೇ ಸಾಬೀತುಪಡಿಸಿದ್ದಾರೆ ಎಂದು ತಿರುಗೇಟು ನೀಡಿದರು.
ವಿಷ ಕುಡಿವ ಬದಲು ಕಾಂಗ್ರೆಸ್ ಸೇರಿದೆ: ಮಾಜಿ ಶಾಸಕ ಗೌರಿಶಂಕರ್
ಜೆಡಿಎಸ್ ಈಗ ತನ್ನ ಸ್ವರೂಪದಲ್ಲಿ ಜನಸಮುದಾಯದ ರಾಜಕೀಯ ಪಕ್ಷ ಆಗಿ ಉಳಿದಿಲ್ಲ. ಕೇವಲ ಕುಟುಂಬದ ಪಕ್ಷವಾಗಿ ಸೀಮಿತವಾಗಿದೆ. ಜೆಡಿಎಸ್ ಪಕ್ಷದ ಡಬ್ಬಲ್ ಗೇಮ್ ಅನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಗೌರಿಶಂಕರ್ ಮತ್ತು ಮಂಜುನಾಥ್ ಜತೆಗೆ ಇನ್ನೂ ಬಹಳ ಮಂದಿ ಕಾಂಗ್ರೆಸ್ ಸೇರುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ನಿಮಗೆ ನಾಚಿಕೆ ಆಗತ್ತೋ ಇಲ್ವೋ ಮೋದಿಯವರೇ?: ನಾವು ಗ್ಯಾರಂಟಿ ಕಾರ್ಯಕ್ರಮಗಳನ್ನು ಕೊಟ್ಟಾಗ ಅವನ್ನು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ‘ಮೋದಿ ಗ್ಯಾರಂಟಿ’ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮೋದಿಯವರೇ, ಈ ರೀತಿ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಕನ್ನಡ ನಾಡಿನ ಜನತೆಯ ಹಣ ಇರುವ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿ ತಮ್ಮ ಕಾರ್ಯಕ್ರಮ ಎಂದು ಬಿಂಬಿಸಿ ಪ್ರಚಾರ ಪಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ರಾಜ್ಯದ ಜನತೆಯ ಮತ್ತು ನಮ್ಮಗಳ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಶಾಸಕರಿಗೆ ಕರೆ ಮಾಡುತ್ತಿರುವ ಎಚ್‌ಡಿಕೆ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಕುಮಾರಸ್ವಾಮಿ ಅವರಿಗೆ ನಮ್ಮ ಆಡಳಿತ ನೋಡಿಕೊಂಡು ಸಹಿಸಲು ಆಗುತ್ತಿಲ್ಲ. ಹೀಗಾಗಿ ದಿನನಿತ್ಯ ಗ್ಯಾರಂಟಿಗಳ ಬಗ್ಗೆ ಕುಹಕ ಆಡುತ್ತಿದ್ದಾರೆ. ನಮ್ಮ ಶಾಸಕರಿಗೆ ಕರೆ ಮಾಡುವ ಕೆಲಸ ಮಾಡುತ್ತಿದ್ದಾರೆ. ನಮಗೆ ಎಲ್ಲಾ ವಿಚಾರ ಗೊತ್ತಿದೆ. ವಿರೋಧ ಪಕ್ಷಕ್ಕೆ ಅಷ್ಟೊಂದು ಶಕ್ತಿ ಇರುವಾಗ ನಮಗೆ ಇನ್ನೆಷ್ಟು ಶಕ್ತಿ ಇರಬೇಕು ಎಂದು ತಿರುಗೇಟು ನೀಡಿದರು.
ವಿದ್ಯುತ್ ಕಳ್ಳತನ ಪ್ರಕರಣ: ಕುಮಾರಸ್ವಾಮಿ-ಶಿವಕುಮಾರ್ ವಾಕ್ಸಮರ
ಕಾಂಗ್ರೆಸ್‌ಗೆ ಕೆಲಸ ಮಾಡಲು ಹೇಳಿರುವ ಎಚ್‌ಡಿಕೆ: ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಅಂದವರಿಗೆ ಕುಮಾರಸ್ವಾಮಿ, ‘ನೀನು ದಳದಲ್ಲೇ ಇರು, ಆದರೆ ಬಿಜೆಪಿಗೆ ಕೆಲಸ ಮಾಡುವ ಬದಲು ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡು’ ಎಂದು ಹೇಳಿದ್ದಾರಂತೆ. ಇದು ಹೇಗೆ ಸಾಧ್ಯ? ಮೋಸ ಮಾಡಿದಂತೆ ಅಲ್ಲವೇ? ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಗೌರಿಶಂಕರ್ ಮತ್ತು ಮಂಜುನಾಥ್ ಅವರನ್ನೇ ಕೇಳಬೇಕು. ಈ ಕಾರಣಕ್ಕೆ ಇವರಿಬ್ಬರು ಕಾರ್ಯಕರ್ತರ ಅಭಿಪ್ರಾಯ ಪಡೆದುಕೊಂಡು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ವ್ಯಂಗ್ಯವಾಗಿ ನುಡಿದರು. ಕೆಪಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ಸೇರಿ ಹಲವು ಮುಖಂಡರು ಹಾಜರಿದ್ದರು.