ಗುಮ್ಮಟನಗರಿ ವಿಜಯಪುರದಲ್ಲಿ ಚಿರತೆ ಪ್ರತ್ಯಕ್ಷ; ನಾಗರದಿನ್ನಿ ಗ್ರಾಮಸ್ಥರಲ್ಲಿ ಆತಂಕ!
ಬರದ ನಾಡು ವಿಜಯಪುರ ಜಿಲ್ಲೆಯಲ್ಲಿ ಚಿರತೆ ಪ್ರತ್ಯಕ್ಷ ಸುದ್ದಿಯೊಂದು ಜನರನ್ನ ಬೆಚ್ಚಿಬೀಳುವ ಹಾಗೇ ಮಾಡಿದೆ. ಚಿರತೆ ಹೆಜ್ಜೆ ರೀತಿಯ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿದ್ದಾರೆ. ಕೃಷ್ಣಾನದಿ ಹರಿಯುವ ಕೋಲ್ಹಾರ ತಾಲೂಕಿನ ನಾಗರದಿನ್ನಿ ಗ್ರಾಮದ ಜಮೀನೊಂದರಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಎನ್ನುವ ಆತಂಕಕಾರಿ ಮಾತುಗಳು ಕೇಳಿ ಬಂದಿದ್ದು ಜನರು ಬೆಚ್ಚಿಬಿದ್ದಿದ್ದಾರೆ..
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಆ.19) : ಬರದ ನಾಡು ವಿಜಯಪುರ ಜಿಲ್ಲೆಯಲ್ಲಿ ಚಿರತೆ ಪ್ರತ್ಯಕ್ಷ ಸುದ್ದಿಯೊಂದು ಜನರನ್ನ ಬೆಚ್ಚಿಬೀಳುವ ಹಾಗೇ ಮಾಡಿದೆ. ಚಿರತೆ ಹೆಜ್ಜೆ ರೀತಿಯ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿದ್ದಾರೆ. ಕೃಷ್ಣಾನದಿ ಹರಿಯುವ ಕೋಲ್ಹಾರ ತಾಲೂಕಿನ ನಾಗರದಿನ್ನಿ ಗ್ರಾಮದ ಜಮೀನೊಂದರಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಎನ್ನುವ ಆತಂಕಕಾರಿ ಮಾತುಗಳು ಕೇಳಿ ಬಂದಿದ್ದು ಜನರು ಬೆಚ್ಚಿಬಿದ್ದಿದ್ದಾರೆ..
ಚಿರತೆ ಪ್ರತ್ಯಕ್ಷ ಸುದ್ದಿ ಕೇಳಿ ಜನರು ಥಂಡಾ..!
ಬರದ ನಾಡು ಅಂತಾ ಕರೆಯಿಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಚಿರತೆ, ಹುಲಿ ಪ್ರತ್ಯಕ್ಷ ಎನ್ನುವ ವದಂತಿಗಳು ಸಹ ಕಡಿಮೆ. ಆವಾಗಾವಾಗ ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಕತ್ತೆ ಕಿರುಬ ಕಾಣಿಸಿಕೊಂಡ ಉದಾಹರಣೆಗಳಿವೆ. ಆದ್ರೆ ಕೋಲ್ಹಾರ ತಾಲೂಕಿನ ನಾಗರದಿನ್ನಿ ಗ್ರಾಮದಲ್ಲಿ ಈಗ ಚಿರತೆ ಕಾಣಿಸಿಕೊಂಡಿದೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಸ್ವತಃ ಚಿರತೆಯನ್ನ ಕಣ್ಣಾರೆ ಕಂಡಿದ್ದಾಗಿ ಗ್ರಾಮಸ್ಥರೊಬ್ಬರು ಹೇಳಿದ್ದು ಜನರು ಭಯಬಿದ್ದಿದ್ದಾರೆ. ಇದೆ ಗ್ರಾಮದ ಮಹಾದೇವ ಕೋಲಕಾರ ಎನ್ನುವ ರೈತರ ಜಮೀನು ಮೂಲಕ ಕಾಲುವೆ ಮಾರ್ಗದ ಕಡೆಗೆ ಚಿರತೆ ಹೋಗುವುದನ್ನ ಗಮನಿಸಿದ್ದೆನೆ ಎಂದು ಪ್ರತ್ಯಕ್ಷದರ್ಶಿ ಸುರೇಶ ಕುಬಕಡ್ಡಿ ಹೇಳಿದ್ದು ಇದು ಜನರಲ್ಲಿ ಗಾಭರಿ ಹುಟ್ಟಿಸಿದೆ..
ಸಿಎಂ ಸಿದ್ದರಾಮಯ್ಯರ ಮೇಲೆ ಕೇಸ್ ಮಾಡಿದ್ರೆ ರಾಜ್ಯದ ಏಳು ಕೋಟಿ ಜನ ಸಹಿಸೊಲ್ಲ: ಎಂಬಿ ಪಾಟೀಲ್
ಅರಣ್ಯಾಧಿಕಾರಿಗಳ ಭೇಟಿ, ಪರಿಶೀಲನೆ..!
ಚಿರತೆ ಕಣ್ಣಾರೆ ಕಂಡಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದರಿಂದ ವಿಚಾರ ಗಂಭೀರತೆ ಪಡೆದುಕೊಂಡಿದೆ. ಬೆನ್ನಲ್ಲೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಅಲ್ಲದೆ ಚಿರತೆ ಓಡಾಡಿದೆ ಎನ್ನಲಾದ ಜಾಗೆಗಳಲ್ಲಿ ಹೆಜ್ಜೆ ಗುರುತು ಪತ್ತೆಗಾಗಿ ಶೋಧ ನಡೆಸಿದ್ದಾರೆ.
ಅಸ್ಪಷ್ಟ ಹೆಜ್ಜೆ ಗುರುತು ಪತ್ತೆ ; ಹೆಚ್ಚಾದ ಆತಂಕ..!
ಗ್ರಾಮಸ್ಥರು ಅರಣ್ಯಾ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ರವಿವಾರ ರಾತ್ರಿ ಸ್ಥಾನೀಕ ಪರಿಶೀಲನೆ ನಡೆಸಿದ್ದಾರೆ. ಹೆಜ್ಜೆ ಗುರುತಿಗಾಗಿ ಹುಡುಕಾಡಿದ್ದು, ಈ ವೇಳೆ ಹೆಜ್ಜೆ ಗುರುತು ಒತ್ತೆಯಾಗಿವೆ. ಆದ್ರೆ ಮಳೆ ಬಿದ್ದ ಕಾರಣ ಹೆಜ್ಜೆಯ ಗುರುತು ಅಸ್ಪಷ್ಟವಾಗಿ ಗೋಚರಿಸುತ್ತಿದ್ದು ಕಾಡು ಪ್ರಾಣಿಯ ಹೆಜ್ಜೆ ಗುರುತಿನಂತೆ ಕಂಡುಬರುತ್ತಿವೆ. ಚಿರತೆಯ ಹೆಜ್ಜೆಯ ಗುರುತು ಎನ್ನುವುದು ಸ್ಪಷ್ಟವಾಗಿ ತಿಳಿದುಬರುತ್ತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಡುಪ್ರಾಣಿ ಸೆರೆಗೆ ಸನ್ನದ್ಧ ; ಅರಣ್ಯಾಧಿಕಾರಿ..!
ಇನ್ನು ಅಸ್ಪಷ್ಟವಾಗಿರುವ ಹೆಜ್ಜೆ ಗುರುತುಗಳು ಸಧ್ಯ ಗೊಂದಲ ಸೃಷ್ಟಿಸಿವೆ. ಪತ್ತೆಯಾದ ಹೆಜ್ಜೆಗಳು ಚಿರತೆಯದ್ದಾ? ಅಥವಾ ಬೇರೆ ಕಾಡುಪ್ರಾಣಿಯದ್ದಾ? ಕತ್ತೆ ಕಿರುಬದ್ದಾ ಎನ್ನುವ ಬಗ್ಗೆ ಮಾಹಿತಿ ಕಲೆಹಾಕಲಾಗ್ತಿದೆ. ಇತ್ತ ಇದು ಚಿರತೆ ಹೆಜ್ಜೆಯೆ ಎಂದು ದಿಟವಾದಲ್ಲಿ ಸೆರೆಹಿಡಿಯಲು ಅರಣ್ಯ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಬಸವರಾಜ ಕೊಣ್ಣೂರ ಮಾಹಿತಿ ನೀಡಿದ್ದಾರೆ. ಇನ್ನು ಗ್ರಾಮಸ್ಥರು ಆತಂಕಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ್ ಎಸ್.ಎಸ್ ನಾಯಕಲಮಠ, ಪಿಎಸ್ಐ ಎಂ.ಬಿ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯತ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಪಕ್ಕದ ಗ್ರಾಮಗಳಲ್ಲು ಆವರಿಸಿದ ಆತಂಕ..!
ರವಿವಾರ ಸಾಯಂಕಾಲ ನಾಗರದಿನ್ನಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡ ಸುದ್ದಿ ಹರಡುತ್ತಿದ್ದಂತೆ ಅಕ್ಕಪಕ್ಕದ ಗ್ರಾಮದ ಜನರು ಭಯಭೀತರಾಗಿದ್ದಾರೆ. ಇತ್ತೆ ಅಧಿಕಾರಿಗಳು ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡ್ತಿದ್ದಾರೆ. ಸಾರ್ವಜನಿಕರು, ರೈತಾಪಿ ವರ್ಗದ ಜನರು ಜಾಗೃತೆಯಿಂದ ಇರುವಂತೆ ಅಧಿಕಾರಿಗಳು ಈಗಾಗಲೇ ತಿಳಿ ಹೇಳಿದ್ದಾರೆ.