ನಾಡಹಬ್ಬ ಮೈಸೂರು ದಸರಾ-2025ರ ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳನ್ನು ಸಾರ್ವಜನಿಕ ಬಳಕೆಗೆ ಜಿಲ್ಲಾಡಳಿತವು ದಸರಾ ಅಧಿಕೃತ ವೆಬ್ ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ.
ಮೈಸೂರು (ಸೆ.07): ನಾಡಹಬ್ಬ ಮೈಸೂರು ದಸರಾ-2025ರ ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳನ್ನು ಸಾರ್ವಜನಿಕ ಬಳಕೆಗೆ ಜಿಲ್ಲಾಡಳಿತವು ದಸರಾ ಅಧಿಕೃತ ವೆಬ್ ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ. ದಸರಾ ಗೋಲ್ಡ್ ಕಾರ್ಡ್ ₹6500, ಜಂಬೂಸವಾರಿ ಟಿಕೆಟ್ ₹3500 ಹಾಗೂ ಪಂಜಿನ ಕವಾಯತು ಟಿಕೆಟ್‌ಗೆ ₹1500 ನಿಗದಿ ಮಾಡಲಾಗಿದೆ. 2025ನೇ ಸಾಲಿನ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಸೆ.22 ರಿಂದ ಅ.2 ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ, ಪಂಜಿನ ಕವಾಯತು ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳ ಮಾರಾಟ ಆರಂಭವಾಗಿದೆ. ಸಾರ್ವಜನಿಕರಿಗೆ ದಸರಾ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳನ್ನು ಮೈಸೂರು ದಸರಾ ಅಧಿಕೃತ ಜಾಲತಾಣ https://mysoredasara.gov.in/ ಮೂಲಕ ಖರೀದಿಸಬಹುದಾಗಿದೆ.
ಸಿಎಂ, ಡಿಸಿಎಂಗೆ ಆಹ್ವಾನ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಜಿಲ್ಲಾಡಳಿತದ ವತಿಯಿಂದ ಆಹ್ವಾನ ನೀಡಲಾಯಿತು. ಬೆಂಗಳೂರಿನ ಸಿಎಂ ಗೃಹ ಕಚೇರಿಯಲ್ಲಿ ಗುರುವಾರ ಸಿದ್ದರಾಮಯ್ಯ ಅವರಿಗೆ ರೇಷ್ಮೆ ಶಾಲು-ಹಾರ ಹಾಕಿ ಆಹ್ವಾನ ಪತ್ರಿಕೆ ನೀಡಿ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಆಮಂತ್ರಿಸಿದರು. ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿಗೆ ತೆರಳಿದ ಅಧಿಕಾರಿಗಳು, ಫಲತಾಂಬೂಲ ನೀಡಿ, ಶಾಲು ಹೊದಿಸಿ, ಆಹ್ವಾನ ಪತ್ರಿಕೆ ನೀಡಿ ದಸರಾ ಮಹೋತ್ಸವಕ್ಕೆ ಆಹ್ವಾನಿಸಿದರು. ಇದೇ ವೇಳೆ ಸಚಿವ ಮಹದೇವಪ್ಪ ಅವರು ದಸರಾ ಯುವ ಸಂಭ್ರಮದ ಪೋಸ್ಟರ್ ಬಿಡುಗಡೆಗೊಳಿಸಿದರು.
ಇನ್ನು, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ಚಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಾಸಕ ಎ.ಆರ್.ಕೃಷ್ಣಮೂರ್ತಿ ಸೇರಿದಂತೆ ಅನೇಕರನ್ನು ಜಿಲ್ಲಾಡಳಿತ ವತಿಯಿಂದ ಸ್ವಾಗತಿಸಲಾಯಿತು.ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿ ಹಲವು ಅಧಿಕಾರಿಗಳು, ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಎಸ್ಪಿ ವಿಷ್ಣುವರ್ಧನ್, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಹಾಗೂ ಸ್ವಾಗತ ಸಮಿತಿ ಅಧಿಕಾರಿಗಳು ಇದ್ದರು.
