ಆ ಹೆಣ್ಣುಮಗಳಿಗೂ ಏನಾದರೂ ಮಾನ, ಮರ್ಯಾದೆ ಇರಬೇಕು. ಮೈಸೂರಿನಲ್ಲಿ ನಡೆಯುವುದು ಎಲ್ಲಾ ಸನಾತನ‌ ಧರ್ಮದ ಸಂಸ್ಕಾರ. ಅಲ್ಲಿ ಬಾನು ಮುಷ್ತಾಕ್ ಅವರಿಗೆ ಏನು ಕೆಲಸ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಬೆಂಗಳೂರು (ಸೆ.04): ಕೇಂದ್ರ ಸರ್ಕಾರವು ಅಮೆರಿಕಾದ ನಿರ್ಧಾರವನ್ನು ಸವಾಲಾಗಿ ತೆಗೆದುಕೊಂಡು ಜಿಎಸ್‌ಟಿ ಸರಳೀಕರಣ ಮಾಡಿದ್ದಾರೆ. ಇದು ರಾಷ್ಟ್ರದ ಜನರಿಗೆ ಬೋನಸ್ ಕೊಟ್ಟಿದ್ದಾರೆ ಎಂದು ವಿಧಾನಸೌಧದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಂತರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಾಳೆ ಮಿಲಾದುನ್ನಬಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಇರಾನ್, ತುರ್ಕಿಸ್ತಾನದವರು ಏನು ನಮಗೆ ಶಾಂತಿ ಹೇಳುತ್ತಾರೆ? ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಸರ್ಕಾರ ಇಂತಹ ಧರ್ಮ ಪ್ರಚಾರಕ್ಕೆ ಅನುಮತಿ ಕೊಟ್ಟಿದ್ದಾರೆ. ಯಾವುದೇ ಅವಕಾಶ ಇಲ್ಲ ಅಂತಾ ಗೃಹ ಸಚಿವರು ಹೇಳಿದ್ದಾರೆ. ಕರ್ನಾಟಕವನ್ನು ಟಾರ್ಗೆಟ್ ಮಾಡಿ ಈ ರೀತಿ ಮಾಡುವುದು ಸಿದ್ದರಾಮಯ್ಯ ಸರ್ಕಾರಕ್ಕೆ ಒಳ್ಳೆಯದಲ್ಲ ಎಂದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ ವಿಚಾರವಾಗಿ, ಆ ಹೆಣ್ಣುಮಗಳಿಗೂ ಏನಾದರೂ ಮಾನ, ಮರ್ಯಾದೆ ಇರಬೇಕು. ಮೈಸೂರಿನಲ್ಲಿ ನಡೆಯುವುದು ಎಲ್ಲಾ ಸನಾತನ‌ ಧರ್ಮದ ಸಂಸ್ಕಾರ. ಅಲ್ಲಿ ಬಾನು ಮುಷ್ತಾಕ್ ಅವರಿಗೆ ಏನು ಕೆಲಸ? ಅವರೇನು ಹಿಂದೂನಾ? ಅವರೇನು ಮಾಜಿ ಮುಸ್ಲಿಮರಾ? ಚಾಮುಂಡೇಶ್ವರಿ ಶಾಪ ತಗುಲಬಾರದು ಅಂದರೆ ಅವರೇ ಬಿಟ್ಟು ಬಿಡಬೇಕು ಎಂದು ಶಾಸಕ ಯತ್ನಾಳ್ ತಿಳಿಸಿದರು.

ಯತ್ನಾಳ ಕೋಮುಪ್ರಚೋದಿತ ಹೇಳಿಕೆ ವಿರುದ್ಧ ದೂರು: ಮುಸ್ಲಿಂ ಯುವತಿ ಮದುವೆಯಾದರೆ ₹ 5 ಲಕ್ಷ ನೀಡುವುದಾಗಿ ಘೋಷಿಸುವ ಮೂಲಕ ಕೋಮು ಪ್ರಚೋದಿತ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪೊಲೀಸರೇಕೆ ದೂರು ದಾಖಲಿಸಿಲ್ಲ ಎಂದು ಪ್ರಶ್ನಿಸಿರುವ ಮುಸ್ಲಿಂ ಮುಖಂಡ ಅಬ್ದುಲ್‌ ರಜಾಕ್‌, ಕೊಪ್ಪಳ ನಗರ ಠಾಣೆಯಲ್ಲಿ ಯತ್ನಾಳ ವಿರುದ್ಧ ದೂರು ದಾಖಲಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾದ ಗವಿಸಿದ್ದಪ್ಪ ನಾಯಕ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ಯತ್ನಾಳ, ಹಿಂದೂ ಯುವಕರು ಮುಸ್ಲಿಂ ಯುವತಿಯನ್ನು ಮದುವರೆಯಾದರೆ ₹ 5 ಲಕ್ಷ ನೀಡುವುದಾಗಿ ಘೋಷಿಸುವ ಮೂಲಕ ಕೋಮು ಪ್ರಚೋದಿತ ಹೇಳಿಕೆ ನೀಡಿದ್ದಾರೆ.

ಆದರೆ, ಪೊಲೀಸರು ಈ ವರೆಗೂ ಅವರ ವಿರುದ್ಧ ಸ್ವಯಂಪ್ರೇರಿಯ ದೂರು ದಾಖಲಿಸಿಕೊಂಡಿಲ್ಲ ಎಂದು ಕಿಡಿಕಾರಿದರು. ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದರಿಂದ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ. ಇದು ಹೇಗೆ ಲವ್‌ ಜಿಹಾದ್‌ ಆಗುತ್ತದೆ ಎಂದು ಪ್ರಶ್ನಿಸಿದ ಅಬ್ದುಲ್‌ ರಜಾಕ್‌, ಬಿಜೆಪಿಯಿಂದ ಯತ್ನಾಳ ಅವರನ್ನು ಉಚ್ಛಾಟಿಸಿದ್ದು, ಏನಾದರೂ ಮಾಡಿ ಸುದ್ದಿಯಲ್ಲಿ ಇರಬೇಕೆನ್ನುವ ಉದ್ದೇಶದಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದರು. ಪ್ರವಾದಿ ವಿರುದ್ಧ ಹೇಳಿಕೆ ನೀಡಿರುವ ಯತ್ನಾಳ, ಇದೀಗ ₹ 5 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ. ಇಷ್ಟಾದರೂ ಪೊಲೀಸರೇಕೆ ಅವರ ವಿರುದ್ಧ ಕ್ರಮವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.