ಸುವರ್ಣನ್ಯೂಸ್ ಚರ್ಚೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಎದುರು ಮುಸ್ಲಿಂ ಯುವಕ ಖಾಜಾ ಹುಸೇನ್ ಹಿಂದೂ ಶ್ಲೋಕ ಪಠಿಸಿ ಗಣೇಶ ಮೆರವಣಿಗೆ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರತಾಪ್ ಸಿಂಹ, ತಾವು ಮಸೀದಿ ಮುಂದೆ ಡ್ಯಾನ್ಸ್ ಮಾಡಲು ಹೇಳಿಲ್ಲ ಎಂದಿದ್ದಾರೆ.
ಬೆಂಗಳೂರು: ಏಷ್ಯಾನೆಟ್ ಸುವರ್ಣನ್ಯೂಸ್ ವಾಹಿನಿಯ 'ನ್ಯೂಸ್ ಅವರ್' ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಮಾಜಿ ಸಂಸದ, ಬಿಜೆಪಿ ನಾಯಕ, ಪ್ರತಾಪ್ ಸಿಂಹ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಕಾನೂನು ವಿದ್ಯಾರ್ಥಿ ಖಾಜಾ ಹುಸೇನ್ ಎಂಬವರು, ಪ್ರತಾಪ್ ಸಿಂಹ ಮುಂದೆ ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಜಪಿಸಿ ಟಿ.ನರಸೀಪುರದಲ್ಲಿ ಘಟನೆ ಬಗ್ಗೆ ಪ್ರಶ್ನೆಯೊಂದನ್ನು ಮಾಡಿದ್ದಾರೆ. ಮುಸ್ಲಿಂ ಯುವಕ, ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಹೇಳಿದ್ದಕ್ಕೆ ಪ್ರತಾಪ್ ಸಿಂಹ ಹೇಳಿದ್ದೇನು ಗೊತ್ತಾ?
ಖಾಜಾ ಹುಸೇನ್ ಪ್ರಶ್ನೆ ಏನು?
ಸಾಂವಿಧಾನಿಕ ಹುದ್ದೆಯಲ್ಲಿದ್ದವರು ನೀವು? ನೀಟ್ ಪರೀಕ್ಷೆ ವಿಚಾರದಲ್ಲಿ ನೀವು ಧ್ವನಿ ಎತ್ತಲಿಲ್ಲ. ಗಣೇಶ ಮೆರವಣಿಗೆ ಒಂದು ರಸ್ತೆಯಲ್ಲಿ ಹೋಗಬಾರದು ಎಂಬ ಒಂದೇ ಒಂದು ವಿಚಾರಕ್ಕೆ ಸ್ಟೇಶನ್‌ಗೆ ನುಗ್ಗಬೇಕು ಎಂಬ ಹೇಳಿಕೆಯನ್ನು ನೀಡುತ್ತೀರಿ. ತಾವು ಈ ಹಿಂದೆ ಸಾಂವಿಧಾನಿಕ ಹುದ್ದೆಯಲ್ಲಿದ್ದವರು. ನಿಮ್ಮಿಂದ ಯುವಕರು ಏನು ನಿರೀಕ್ಷೆ ಮಾಡಬಹುದು? ಕಾನೂನು ಕೈಗೆತ್ತಿಕೊಂಡು ಠಾಣೆಯೊಳಗೆ ಹೋಗುವಂತೆವ ಯುವಕರನ್ನು ಪ್ರಚೋದಿಸುತ್ತಿರೋದು ತಪ್ಪು ಅಲ್ಲವಾ?
ನಾನೋರ್ವ ಅಲ್ಪಸಂಖ್ಯಾತನಾಗಿ ಗಣೇಶನನ್ನು ಪ್ರೀತಿಸುತ್ತೇನೆ. ಬೆಳಗ್ಗೆ ಎದ್ದ ಕೂಡಲೇ ಗಣೇಶನ ಮಂತ್ರವನ್ನು ಜಪಿಸುತ್ತೇನೆ ಎಂದು ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಎಂದು ಹೇಳುತ್ತಾರೆ. ಇದನ್ನು ಹೇಳಿ ನಾನು ಯಾವುದೇ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಇದು ನನ್ನ ವೈಯಕ್ತಿಕವಾದ ನಂಬಿಕೆ. ಸಂವಿಧಾನ ನನಗೆ ನನ್ನದೇ ಆಚಾರ ವಿಚಾರ ಪಾಲನೆ ಮಾಡುವ ಅವಕಾಶವನ್ನು ನೀಡಿದೆ. ಆದ್ರೆ ಮಸೀದಿ ಮುಂದೆ ಹೋದರೆ ಮಾತ್ರ ಗಣೇಶ ವಿಸರ್ಜನೆ ಯಶಸ್ವಿ ಆಗುತ್ತೆ ಅನ್ನೋ ವರ್ತನೆ ನಿಮ್ಮದಾಗಿತ್ತು ಎಂದು ಪ್ರತಾಪ್ ಸಿಂಹ ಅವರಿಗೆ ಹೇಳುತ್ತಾರೆ.
ಪ್ರತಾಪ್ ಸಿಂಹ ನೀಡಿದ ಉತ್ತರ ಏನು?
ಕಳೆದ ವರ್ಷವೂ ಟೀ.ನರಸೀಪುರದ ಗಣೇಶೋತ್ಸವಕ್ಕೆ ಹೋಗಿದ್ದೆ. ಹೋಗಿ ಪೂಜೆ ಸಲ್ಲಿಸಿ ಬಂದೆ. ಮಸೀದಿ ಮುಂದೆ ಡ್ಯಾನ್ಸ್ ಮಾಡುತ್ತೇನೆ ಎಂದು ನಾನು ಹೇಳಿದ್ದನಾ? ಸಂವಿಧಾನ ಹೇಳಿದಂತೆ, ನಮ್ಮ ಹಕ್ಕುಗಳಿಗೆ ಚ್ಯುತಿಯುಂಟಾದ ಸಂದರ್ಭದಲ್ಲಿ ಜನರಿಗೆ ತಿಳಿಹೇಳಿ ಎಜುಕೇಟ್ ಮಾಡಿದ್ದೇವೆ ಎಂದು ಪ್ರತಾಪ್ಮ ಸಿಂಹ ಹೇಳುತ್ತಾರೆ.
ಮುಂದುವರಿದ ಮಾತನಾಡಿದ ಪ್ರತಾಪ್ ಸಿಂಹ, ನಾವು ಮುಸ್ಲಿಮರನ್ನು ದೋಷಣೆ ಮಾಡಲ್ಲ. ಮುಸ್ಲಿಮರನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮುಸ್ಲಿಮರು ಮತ್ತು ದಲಿತರಲ್ಲಿ ಶೇ.99ರಷ್ಟು ಜನರು ಒಳ್ಳೆಯವರಿದ್ದಾರೆ. ಆದ್ರೆ ಇನ್ನುಳಿದ ಈ ನಾಲ್ಕೈದು ಜನರು ಗಲಾಟೆ ಮಾಡುವ ಮೂಲಕ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ತೆಗೆದುಕೊಂಡು ಬರುವ ಕೆಲಸ ಮಾಡುತ್ತಾರೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.



