ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಇಂತಹ ಕೃತ್ಯಗಳು ನಡೆಯುತ್ತವೆ ಎಂದು ಅವರು ಆರೋಪಿಸಿದರು. ಸಮಗ್ರ ತನಿಖೆಗೆ ಒತ್ತಾಯಿಸಿದರು.

ಮೈಸೂರು (ಫೆ.16): ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರವಾಗಿ ಖಂಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಇಂತಹ ಕೃತ್ಯಗಳು ನಡೆಯುತ್ತವೆ. ಕಿಡಿಗೇಡಿಗಳು ನಮಗೆ ರಕ್ಷಣೆ ನೀಡುವ ಪೊಲೀಸರ ಮೇಲೇ ದಾಳಿ ಮಾಡಿದ್ದು ಸರಿಯಲ್ಲ. ಪೊಲೀಸರ ಮೇಲೆ ಗೌರವ, ಮರ್ಯಾದೆ ಇರಬೇಕು ಎಂದರು.

ಈ ಹಿಂದೆ ಸಹ ನಾಗಮಂಗಲ, ಮಂಡ್ಯ, ಬೆಂಗಳೂರಿನಲ್ಲಿ ಇಂತಹ ಕೃತ್ಯಗಳು ನಡೆದಿವೆ. ಈ ಬಗ್ಗೆ ಸಮಗ್ರವಾದ ತನಿಖೆಯಾಗಿ ವರದಿ ನೀಡಬೇಕು. ಯಾವ ಕಾರಣಕ್ಕೆ, ಯಾರಿಂದ ಆಗಿದೆ ಎಂಬುದು ಗೊತ್ತಾಗಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ: ಉದಯಗಿರಿ ಗಲಭೆ ಕೇಸ್ ಗೆ ಮತ್ತೊಂದು ಬಿಗ್ ಟ್ವಿಸ್ಟ್ | Udayagiri Police Station Incident | Suvarna News

ಘಟನೆಯಲ್ಲಿ ಆರ್ ಎಸ್ಎಸ್ ಕೈವಾಡ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ಸಾಕ್ಷ್ಯಗಳನ್ನು ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದರು.

ಇದನ್ನೂ ಓದಿ:

ಸೈಬರ್ ಕ್ರೈಂ ಕರೆ ಬರುತ್ತಿವೆ:

ಸೈಬರ್ ತಂತ್ರಜ್ಞಾನದಿಂದ ಉಪಯೋಗಕ್ಕಿಂತ ದುರುಪಯೋಗವೇ ಆಗುತ್ತಿದೆ. ನಮಗೂ ಸಾಕಷ್ಟು ಸ್ಕ್ಯಾಮ್ ಕರೆಗಳು, ಒಟಿಪಿ ‌ಕೊಡಿ ಅಂತ ಕರೆಗಳು ಬರುತ್ತಲೇ ಇರುತ್ತವೆ. ನಾನು ಈವರೆಗೆ ಸೈಬರ್ ಕ್ರೈಂ ಜಾಲಕ್ಕೆ ಬಲಿಯಾಗಿಲ್ಲ. ನನಗೆ ಅದರ ಬಗ್ಗೆ ಜಾಗೃತಿ ಇರುವುದರಿಂದ ಅದರ ಬಲೆಗೆ ಬಿದ್ದಿಲ್ಲ. ಎಷ್ಟೇ ಹೇಳಿದರೂ ಸೈಬರ್ ಕ್ರಿಮಿನಲ್‌ ಗಳು ತಂತ್ರಜ್ಞಾನದ ಮೂಲಕ ಅಪರಾಧ ಮಾಡುತ್ತಿದ್ದಾರೆ. ಸೈಬರ್ ವಂಚನೆ ತಪ್ಪಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿ ಜೊತೆ ಸೇರಿ ನಾವು ಸರ್ಕಾರ ಜಾಗೃತಿ ಮಾಡುತ್ತಿದ್ದೇವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. 

ಇದನ್ನೂ ಓದಿ: ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು ಅರಮನೆ ಭೂವಿವಾದ ಸಂಬಂಧ ರಾಜವಂಶಸ್ಥರಿಗೆ ಟಿಡಿಆರ್ ನೀಡಲು ಸುಪ್ರಿಂ‌ಕೋರ್ಟ್ 2 ವಾರ ಗಡುವು ನೀಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ಮುಂದಾಗಿತ್ತು. ಇದೀಗ ಸುಪ್ರೀಂ‌ಕೊರ್ಟ್ ರಾಜ್ಯ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳುವಂತೆ ಸಲಹೆ ನೀಡಿದೆ. ರಾಜ್ಯ ಸರ್ಕಾರ ಏನು ತೀರ್ಮಾನ ಮಾಡಲಿದೆ ಎಂದು ಕಾದು ನೋಡುತ್ತೇವೆ.
- ಯದುವೀರ್ ಕೃ಼ಷ್ಣದತ್ತ ಚಾಮರಾಜ ಒಡೆಯರ್, ಸಂಸದರು