ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ, ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.  

ಮೈಸೂರು (ಫೆ.15): ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ, ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು. ನಗರದ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣ ಹಿನ್ನೆಲೆಯಲ್ಲಿ ಉದಯಗಿರಿ ಠಾಣೆಗೆ ಭೇಟಿ ನೀಡಿ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ಯಾಕೆ ಆಯ್ತು? ಯಾರಿಂದ ಆಯ್ತು ಎಂಬ ಮಾಹಿತಿ ಪಡೆದಿದ್ದೇನೆ. ಘಟನೆ ಸಂಬಂಧ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಬಂಧಿಸಲಾಗುತ್ತಿದೆ ಎಂದರು.

ವ್ಯಕ್ತಿ ತಪ್ಪು ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಇದ್ದಾರೆ. ಬೇರೆ ಯಾರಿಗೂ ಅದಕ್ಕೆ ಅವಕಾಶ ಕೊಡಲ್ಲ. ಪೊಲೀಸ್ ಇಲಾಖೆಗೆ ಪಕ್ಷ ಮುಖ್ಯ ಅಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ಅಷ್ಟೆ ಮುಖ್ಯ. ಸಮಾಜದಲ್ಲಿ ಶಾಂತಿ ಕಾಪಾಡಲಿಕ್ಕೆ ಪೊಲೀಸ್ ಇರುವುದು. ಕಾನೂನು ರಕ್ಷಣೆಗೆ ಪೋಲೀಸರ ಮೊದಲ ಆದ್ಯತೆ ಆಗಿದೆ ಎಂದು ಅವರು ಹೇಳಿದರು. ಇಂತಹ ಘಟನೆ ವೇಳೆ ಕೇಳಿ ಬರುವ ಹೇಳಿಕೆ ನಿಲ್ಲಿಸಲು ಸಾಧ್ಯವಿಲ್ಲ. ರಾಜಕೀಯ ಹೇಳಿಕೆಗಳಿಂದ ಪೊಲೀಸರ ನೈತಿಕತೆ ಕುಗ್ಗಿಸಲು ಸಾಧ್ಯವಿಲ್ಲ. ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಲು ಯಾರ ಕೈಯಲ್ಲೂ ಆಗಲ್ಲ ಎಂದರು.

ಇಂತಹ ದಾಂಧಲೆಗೆ ಯುಪಿ, ಮಧ್ಯಪ್ರದೇಶದಲ್ಲಿ ಬುಲ್ಡೋಜರ್ ಹತ್ತಿಸುವ ಕ್ರಮ ಇದೆ. ಕರ್ನಾಟಕದಲ್ಲೂ ಆ ಪರಿಸ್ಥಿತಿ ಬಂದರೆ ನೋಡೋಣ. ಈಗ ಅಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಇಲ್ಲ ಎಂದು ಅವರು ಹೇಳಿದರು. ಎನ್.ಆರ್. ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೊಂದು ಠಾಣೆಗೆ ಪ್ರಸ್ತಾವನೆ ಇದೆ. ಇದರ ಬಗ್ಗೆ ಕ್ರಮ ಕೈಗೊಳ್ತುತ್ತೇವೆ. ಈ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು. ಘಟನೆ ದಿ‌ನ ಪೊಲೀಸರು ಪರಿಸ್ಥಿತಿಯನ್ನು ಸಮರ್ಥವಾಗಿಯೇ ನಿಭಾಯಿಸಿದ್ದಾರೆ. ಪೊಲೀಸರ ಬಗ್ಗೆ ವಿವಿಧ ರೀತಿಯ ಹೇಳಿಕೆ ಕೊಡುವವರಿಗೆ ಸಮಯ ಬಂದಾಗ ತಿಳವಳಿಕೆ ಹೇಳುತ್ತೇನೆ ಎಂದು ಅವರು ತಿಳಿಸಿದರು. ಈ ವೇಳೆ ಮೈಸೂರು ಎಸ್ಪಿ ಎನ್. ವಿಷ್ಣುವರ್ಧನ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಎಸಿಪಿ ಶಾಂತಮಲ್ಲಪ್ಪ ಮೊದಲಾದವರು ಇದ್ದರು.

ಬಡವರನ್ನು ಶೋಷಣೆ ಮಾಡಿದ್ರೇ ಸುಮ್ಮನಿರಲ್ಲ: ಗೃಹ ಸಚಿವ ಪರಮೇಶ್ವರ್‌ ಎಚ್ಚರಿಕೆ

ಪೊಲೀಸ್ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ. ಈಗಾಗಲೇ ಸಿಸಿಟಿವಿ ದೃಶ್ಯ ಆಧರಿಸಿ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳುವವರು ಎಷ್ಟೇ ಬಲಾಡ್ಯರಾಗಿದ್ದರೂ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ.
- ಡಾ.ಜಿ. ಪರಮೇಶ್ವರ, ಗೃಹ ಸಚಿವ