ಮಂಡ್ಯದ ಹನುಮಧ್ವಜ ವಿವಾದಿತ ಕೆರಗೋಡು ಗ್ರಾಮಕ್ಕೆ ನಾನು ಬೇಕಂತಲೇ ಹೋಗಿಲ್ಲ; ಸಂಸದೆ ಸುಮಲತಾ
ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಹಾರಿಸಿರುವುದನ್ನು ದೊಡ್ಡ ವಿವಾದವನ್ನಾಗಿ ಮಾಡಲಾಗಿದೆ. ನಾನು ಮಂಡ್ಯ ಲೋಕಸಭಾ ಸಂಸದೆಯಾಗಿದ್ದರೂ, ಅಲ್ಲಿಗೆ ಬೇಕಂತಲೇ ಹೋಗಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನವದೆಹಲಿ (ಜ.30): ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಹಾರಿಸಿರುವುದನ್ನು ದೊಡ್ಡ ವಿವಾದವನ್ನಾಗಿ ಮಾಡಲಾಗಿದೆ. ನಾನು ಮಂಡ್ಯ ಲೋಕಸಭಾ ಸಂಸದೆಯಾಗಿದ್ದರೂ, ಅಲ್ಲಿಗೆ ಬೇಕಂತಲೇ ಹೋಗಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಕೆರಗೋಡು ಹನುಮ ಧ್ವಜ ವಿವಾದದ ಕುರಿತು ಮಾತನಾಡಿದ ಅವರು, ಕೆರಗೋಡಲ್ಲಿ ನಡೆದ ಘಟನೆ ನೋಡಿ ಬೇಸರ ಆಗಿದೆ. ಅಲ್ಲಿನ ಜನರೇ ಯಾವ ರೀತಿ ಹೋರಾಟ ಮಾಡ್ತಿದ್ದಾರೆ ಅನ್ನೋದು ನೋವಿನ ವಿಚಾರವಾಗಿದೆ. ಇಷ್ಟರ ಮಟ್ಟಿಗೆ ಆಗುವಂತಹ ಅಗತ್ಯವೇ ಇರ್ಲಿಲ್ಲ. ಒಬ್ಬರು ಮಾಡಿದ್ದ ತಪ್ಪಿಗೆ ಇಡೀ ಸರ್ಕಾರ ಬಂದು ಸಮರ್ಥನೆ ಮಾಡುವ ಪರಿಸ್ಥಿತಿಗೆ ಬಂದಿದೆ. ಗ್ರಾಮಸ್ಥರಿಗೆ ಎಲ್ಲರೂ ಸಹಕಾರ ಕೊಟ್ಟಿದ್ಕೆ ಆ ಧ್ವಜವನ್ನ ಹಾರಿಸೋಕೆ ಸಾಧ್ಯ ಆಗಿದೆ. ಆ ಧ್ವಜ ಹಾರಿಸಿ 6 ದಿನಗಳ ಕಾಲ ಯಾರಿಗೂ ಏನು ಸಮಸ್ಯೆ ಇರಲಿಲ್ಲ. ಇಲ್ಲಿಗೆ ಯಾವ ಅಧಿಕಾರಿಯೂ ಬಂದಿಲ್ಲ, ಯಾರಿಗೂ ನೋವಾಗಿಲ್ಲ ಅಥವಾ ಗಲಭೆನೂ ಆಗಿರಲಿಲ್ಲ ಎಂದರು.
ಕೆರಗೋಡು ಹನುಮ ಧ್ವಜಕ್ಕೆ ಅನುಮತಿ ಕೊಟ್ಟ ಗ್ರಾಮ ಪಂಚಾಯಿತಿ ನಡಾವಳಿ ಪುಸ್ತಕವೇ ನಾಪತ್ತೆ!
ಆದರೆ, ಸ್ಥಳೀಯ ನಾಯಕರ ಮಾತನ್ನು ಕಟ್ಟಿಕೊಂಡು ರಾತ್ರಿ 3 ಗಂಟೆ ಹೊತ್ತಲ್ಲಿ ಏಕಾಏಕಿ ಬಂದು ಹನುಮ ಧ್ವಜವನ್ನು ತೆರವು ಮಾಡಿದ್ದಾರೆ. ಯಾರ ಸೂಚನೆ ಮೇರೆಗೆ ಬಂದು ಈ ರೀತಿ ಮಾಡಿದ್ದಾರೋ ಅಂತ ಗೊತ್ತಾಗಬೇಕಿದೆ. ಜನರನ್ನ ವಿಶ್ವಾಸಕ್ಕೆ ಪಡೆದು ಮಾಡಿದರೆ ಕೆರಗೋಡಲ್ಲಿ ಈ ರೀತಿ ಬೆಂಕಿ ಉರಿತ ಇರಲಿಲ್ಲ. ಅಲ್ಲಿ ನಡೆದಿರೋ ಪ್ರತಿಭಟನೆಯಲ್ಲಿ ಒಬ್ಬರ ಕಣ್ಣು ಹೋಯ್ತು. ಅದನ್ನ ಯಾರು ವಾಪಾಸ್ ತಂದು ಕೊಡೋಕೆ ಆಗುತ್ತದೆ. ಈ ಪರಿಸ್ಥಿತಿಯಲ್ಲಿ ಅಲ್ಲಿ ಪೊಲೀಸರು ಬರಬೇಕು ಎಂದು ಹೇಳಿದರು.
ನಾನು ಈಗ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ ನಡೆದ ಸ್ಥಳಕ್ಕೆ ಹೋದರೆ ಅದು ರಾಜಕೀಯ ಆಗುತ್ತದೆ. ಆದ್ದರಿಂದ ನಾನು ಅಲ್ಲಿ ಹೋಗಿ ಪರಿಸ್ಥಿತಿ ಕಂಟ್ರೋಲ್ ಮಾಡೋಕೆ ಆಗೋಲ್ಲ. ನಾನು ಬೇಕು ಅಂತಲೇ ಆ ಸ್ಥಳಕ್ಕೆ ಹೋಗಿಲ್ಲ. ಬೇರೆಯವರು ಎಲ್ಲಾ ಬರ್ತಿದ್ದಾರೆ ಪ್ರತಿಭಟನೆ ಸಹ ಮಾಡ್ತಿದ್ದಾರೆ. ಆದರೆ ನಾನು ಸಂಸದೆಯಾಗಿ ಬೇರೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಾನು ಪ್ರತಿಭಟನೆಯಲ್ಲಿ ಭಾಗವಹಿಸೋಕೆ ಆಗೋದಿಲ್ಲ. ಆದರೆ, ಜನರ ಭಾವನೆ ಜೊತೆಗೆ ಬೆಂಬಲಕ್ಕೆ ನಿಲ್ಲುತ್ತೇನೆ. ರಾಜ್ಯ ಸರ್ಕಾರ ಈ ರೀತಿ ಮಾಡಿದೆ ಅಂತ ನಾನು ಹೇಳೋಕೆ ಇಷ್ಟ ಪಡೋಲ್ಲ ಎಂದು ಹೇಳಿದರು.
ಕೆರಗೋಡು ಹನುಮಧ್ವಜ ವಿವಾದಕ್ಕೆ ಪಿಡಿಒ ತಲೆದಂಡ ಕೊಟ್ಟ ಸರ್ಕಾರ!
ರಾಜ್ಯ ಸರ್ಕಾರ ಪಾತ್ರದ ಬಗ್ಗೆ ಹೇಳದಿದ್ದರೂ ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ ಇದರಲ್ಲಿ ಶಾಮೀಲು ಆಗಿದ್ದಾರೆ ಅನ್ನೋದು ನಿಜ. ಅಲ್ಲಿನ ಗ್ರಾಮಸ್ಥರು ಸಹ ಇದೆ ಮಾತನ್ನ ಹೇಳ್ತಿದ್ದಾರೆ. ಹನುಮ ಧ್ವಜ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕರನ್ನ ಕರೆದಿಲ್ಲ ಅಂತ ಈ ರೀತಿ ಮಾಡಿದ್ದಾರೆ. ಕೆರಗೋಡು ಗ್ರಾಮಸ್ಥರು ಹಾಗೂ ಹಿಂದೂ ಧರ್ಮದ ವಿಚಾರದಲ್ಲಿ ಮಂಡ್ಯ ಶಾಸಕರು ರಾಜಕಾರಣ ಮಾಡಿದ್ದಾರೆ ಎಂದು ಸಂಸದೆ ಸುಮಲತಾ ಕಿಡಿ ಕಾರಿದ್ದಾರೆ.