ಕೆರಗೋಡು ಹನುಮ ಧ್ವಜಕ್ಕೆ ಅನುಮತಿ ಕೊಟ್ಟ ಗ್ರಾಮ ಪಂಚಾಯಿತಿ ನಡಾವಳಿ ಪುಸ್ತಕವೇ ನಾಪತ್ತೆ!
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಹಾರಾಟಕ್ಕೆ ಅನುಮತಿ ಕೊಟ್ಟ ಗ್ರಾಮ ಪಂಚಾಯಿತಿ ನಡಾವಳಿ ಪುಸ್ತಕವೇ ನಾಪತ್ತೆಯಾಗಿದೆ.
ಮಂಡ್ಯ (ಜ.30): ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಿಂದಲೇ ಗೌರಿಶಂಕರ ಟ್ರಸ್ಟ್‌ಗೆ ಅನುಮತಿ ನೀಡಲಾಗಿತ್ತು. ಆದರೆ, ಇದನ್ನು ಮುಚ್ಚಿಟ್ಟು ರಾಜ್ಯದ ಜನತೆಯ ದಿಕ್ಕನ್ನು ತಪ್ಪಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯದ್ದೇ (ಪಿಡಿಒ) ತಪ್ಪು ಎಂದು ಅವರನ್ನು ಅಮಾನತುಗೊಳಿಸಿದೆ. ಆದರೆ, ಕೆರಗೋಡು ಪಿಡಿಒ ಅಮಾನತು ಬೆನ್ನಲ್ಲಿಯೇ ಸರ್ಕಾರ ಹಾಗೂ ಶಾಸಕ ರವಿ ಗಣಿಗ ಅವರು ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿ ಗ್ರಾಮ ಪಂಚಾಯಿತಿ ನಡಾವಳಿ ಪುಸ್ತಕವನ್ನೇ ನಾಪತ್ತೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಮಂಡ್ಯದ ಕೆರಗೋಡು ಗ್ರಾಮದ ಹನುಮ ಧ್ವಜ ನಿರ್ಮಾಣ ವಿವಾದ ರಾಜ್ಯದಲ್ಲಿ ತಾರಕಕ್ಕೇರಿದೆ. ಲೋಕಸಭಾ ಚುನಾವನೆಗೂ ಮುನ್ನ ಮಂಡ್ಯದ ಜಿಲ್ಲೆಯಲ್ಲಿ ತಮ್ಮ ಹಕ್ಕನ್ನು ಸ್ಥಾಪಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರೂ ಪಕ್ಷಗಳು ಭಾರಿ ಕಸರತ್ತು ಮಾಡುತ್ತಿವೆ. ಅದಕ್ಕೆ ಪೂರಕವೆಂಬಂತೆ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ ಆರಂಭವಾಗಿದೆ. ಕೆರಗೋಡು ಗ್ರಾಮದ ಟ್ರಸ್ಟ್‌ನಿಂದ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಹನುಮ ಧ್ವಜಸ್ತಂಭ ನಿರ್ಮಾಣ ಹಾಗೂ ಹನುಮ ಧ್ವಜಾರೋಹಣದ ಬಗ್ಗೆ ಅನುಮತಿ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಧ್ವಜ ಅಳವಡಿಕೆ ನಂತರ ಸರ್ಕಾರದಿಂದ ರಾಷ್ಟ್ರಧ್ವಜ ಹಾರಿಸಲು ಮಾತ್ರ ಅನುಮತಿ ಪಡೆಯಲಾಗಿದೆ ಎಂಬ ಪತ್ರವನ್ನು ಮಾತ್ರ ರಾಜ್ಯದ ಜನತೆಗೆ ತೋರಿಸಿ ಹನುಮಧ್ವಜವನ್ನು ತೆರವುಗೊಳಿಸಿದೆ.
ಕೆರಗೋಡು ಹನುಮಧ್ವಜ ವಿವಾದಕ್ಕೆ ಪಿಡಿಒ ತಲೆದಂಡ ಕೊಟ್ಟ ಸರ್ಕಾರ!
ಗ್ರಾಮಸ್ಥರು ಹಾಗೂ ವಿಪಕ್ಷಗಳಿಂದ ಸರ್ಕಾರದ ನಡೆಯ ವಿರುದ್ಧ ಪ್ರತಿಭಟನೆಗಳು ಆರಂಭವಾಗಿ ದೊಡ್ಡ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಜಿಲ್ಲಾಡಳಿತದಿಂದ ರಾಷ್ಟ್ರಧ್ವಜ ಹಾರಿಸಲಾಗಿದೆ. ಜಿಲ್ಲಾಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಲು ಮುಂದಾದಾಗ ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ. ಇಷ್ಟೆಲ್ಲಾ ವಿವಾದ ಹಾಗೂ ಗೊಂದಲ ವಾತಾವರಣ ಸೃಷ್ಟಿಗೆ ಪಿಡಿಒ ಅಧಿಕಾರಿ ಕಾರಣವೆಂದು ಅವರನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತನ್ವೀರ್ ಆಶೀಫ್ ಸೇಠ್ ಅವರು ಪಿಡಿಒ ಜೀವನ್ ಅವರನ್ನು ಅಮಾನತು ಮಾಡುತ್ತಾರೆ.
ಕೆರಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮಾನತು ಬೆನ್ನಲ್ಲಿಯೇ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯ ನಡಾವಳಿ ಪುಸ್ತಕವೇ ಈಗ ನಾಪತ್ತೆಯಾಗಿದೆ. ಈ ನಡಾವಳಿ ಪುಸ್ತಕದಲ್ಲಿ ಗ್ರಾಮ ಪಂಚಾಯಿತಿಯಿಂದ ಹನುಮ ಧ್ವಜಸ್ತಂಭ ನಿರ್ಮಾಣ ಹಾಗೂ ಹನುಮ ಧ್ವಜ ಹಾರಿಸಲು ಅನುಮತಿ ನೀಡಲಾಗಿರುವ ಬಗ್ಗೆಯೂ ಉಲ್ಲೇಖ ಮಾಡಲಾಗಿತ್ತು. ಈಗ ಸರ್ಕಾರ ನಡೆಯ ವಿರುದ್ಧ ಸಾಕ್ಷಿಯನ್ನು ಒದಗಿಸಲು ಇದ್ದ ಏಕೈಕ ಸಾಕ್ಷಿ ನಡಾವಳಿ ಪುಸ್ತಕ ನಾಪತ್ತೆ ಆಗಿದ್ದು, ಇದಕ್ಕೆ ಸ್ಥಳೀಯ ಶಾಸಕರ ಕುಮ್ಮಕ್ಕು ಇದೆ ಎಂದು ಹೇಳಲಾಗುತ್ತಿದೆ.
ಗ್ರಾಮ ಪಂಚಾಯಿತಿಯಲ್ಲಿ ನಡೆದಿದ್ದೇನು?
ಕೆರಗೋಡು ಗ್ರಾಮದ ರಾಮಮಂದಿರದ ಮುಂದಿನ ಬಯಲು ಜಾಗದಲ್ಲಿ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಾಟಕ್ಕೆ ಅವಕಾಶ ಕೇಳಿ ಗೌರಿಶಂಕರ ಟ್ರಸ್ಟ್‌ನಿಂದ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಅರ್ಜಿಯನ್ನು ಪಂಚಾಯಿತಿಯಲ್ಲಿ ಜನವರಿ 25 ರಂದು ಸಭೆಯಲ್ಲಿ ಚರ್ಚೆ ಮಾಡಿ ನಡಾವಳಿ ಬರೆಯಲಾಗಿತ್ತು. ಈ ಸಭೆಯಲ್ಲಿದ್ದ 18 ಜನ ಸದಸ್ಯರು ಹನುಮಧ್ವಜ ನಿರ್ಮಾಣಕ್ಕೆ ಅವಕಾಶ ನೀಡಿದ್ದರು. ಅನುಮತಿ ನೀಡಿರುವ ಬಗ್ಗೆ ನಡಾವಳಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಪಂಚಾಯಿತಿ ಅನುಮತಿ ನೀಡಿದ ಹಿನ್ನೆಲೆಯಲ್ಲಿಯೇ ಗ್ರಾಮಸ್ಥರಿಂದ ಹನುಮ ಧ್ವಜ ಹಾರಿಸಲಾಗಿತ್ತು. ಆದರೆ, ಇದೀಗ ಏಕಾಏಕಿ ಗ್ರಾಪಂ ಕಚೇರಿಯಿಂದ ನಾಪತ್ತೆಯಾಗಿದೆ.
ಹನುಮಂತನ ಕೆಣಕ್ಕಿದ್ದಕ್ಕೆ ಲಂಕ ದಹನವಾಯ್ತು, ಈಗ ಹನುಮಧ್ವಜ ತೆಗೆದವರ ಅವನತಿಯೂ ಆಗುತ್ತೆ: ಹೆಚ್.ಡಿ. ಕುಮಾರಸ್ವಾಮಿ
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರತ್ನಮ್ಮ ಅವರಿಗೆ ಗ್ರಾಮದ ಸದಸ್ಯರು ಹೋಗಿ ನಡಾವಳಿ ಪುಸ್ತಕ ಎಲ್ಲಿ ಪ್ರಶ್ನೆ ಮಾಡಿದರೆ, ನಮ್ಮ ಸುಪರ್ದಿಗೆ ನಡಾವಳಿ ಪುಸ್ತಕವನ್ನೇ ಕೊಟ್ಟಿಲ್ಲವೆಂದು ಹೇಳುತ್ತಿದ್ದಾರೆ. ಇದೀಗ ಕಾರ್ಯದರ್ಶಿ ನಡೆದ ಹಲವು ಅನುಮಾನಕ್ಕೆ ಕಾರಣವಾಗಿದೆ. ಪಂಚಾಯಿತಿ ನಡಾವಳಿ ಪುಸ್ತಕ ಕಾಣುತ್ತಿಲ್ಲವೆಂಬ ನಾಟಕ ಆರಂಭವಾಗಿದೆ. ಹೀಗಾಗಿ, ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ ಸೇರಿ ಹನುಮಧ್ವಜ ಹಾರಾಟಕ್ಕೆ ಅನುಮತಿ ನೀಡಿದ ನಡಾವಳಿ ಪುಸ್ತಕವನ್ನೇ ನಾಪತ್ತೆ ಮಾಡಿದ ಅಧಿಕಾರಿಯ ಬಗ್ಗೆ ಜನರು ತಿರುಗಿ ಬಿದ್ದಿದ್ದಾರೆ.