ಸಂಕಷ್ಟದಲ್ಲಿ ಕರ್ನಾಟಕ ರೈತರು; ಕೇಂದ್ರ ಜಲಶಕ್ತಿ ಸಚಿವರರೊಂದಿಗೆ ಸಂಸದೆ ಸುಮಲತಾ ಅಂಬರೀಶ್ ಚರ್ಚೆ
ಕಾವೇರಿ ನೀರು, ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆ ಇಂದು ದೆಹಲಿಯಲ್ಲಿ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶಿಕಾವತ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದಾಗಿ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಬೆಂಗಳೂರು (ಸೆ.18): ಕಾವೇರಿ ನೀರು, ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆ ಇಂದು ದೆಹಲಿಯಲ್ಲಿ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶಿಕಾವತ್ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದಾಗಿ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಕರ್ನಾಟಕದ ರೈತರು ಬರ ಕಾರಣದಿಂದಾಗಿ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಮಂಡ್ಯ ರೈತರ ಜೀವನಾಡಿ ಆಗಿರುವ ಕಾವೇರಿಯಿಂದ ನಿರಂತರವಾಗಿ ತಮಿಳು ನಾಡಿಗೆ ನೀರು ಬಿಡಲಾಗುತ್ತಿದೆ. ಮಂಡ್ಯ ಭಾಗದ ರೈತರ ಪರಿಸ್ಥಿತಿ ಚಿಂತಾಜನಕವಾಗಿರುವಾಗ ಮತ್ತೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿದ್ದು ನಿಜಕ್ಕೂ ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು: ಸುಮತಲಾ- ಸಚಿವರ ವಾಕ್ಸಮರ
ಕೇವಲ ರೈತರ ಗದ್ದೆಗಳಿಗೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಈ ಎಲ್ಲ ಸಂಗತಿಗಳನ್ನು ದೆಹಲಿಯಲ್ಲಿ ಇಂದು ಜಲಶಕ್ತಿ ಸಚಿವರಾದ ಮಾನ್ಯ ಶ್ರೀ ಗಜೇಂದ್ರ ಸಿಂಗ್ ಶಿಕಾವತ್ ಅವರನ್ನು ಭೇಟಿ ಮಾಡಿ ವಿವರಿಸಿದ್ದೇನೆ. ಆಯಾ ರಾಜ್ಯಗಳ ಜಂಟಿ ಸಮಿತಿಯನ್ನು ರಚಿಸುವುದಾಗಿ ಮತ್ತು ಮುಂದಿನ ವಾರದಲ್ಲೇ ಸಮೀಕ್ಷೆ ನಡೆಸುವುದಾಗಿ, ನಮ್ಮ ರೈತರ ಪರವಾಗಿ ನಿಂತುಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನೂ ಬಗೆಹರಿಸುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ. ಆದಷ್ಟು ಬೇಗ ಭರವಸೆ ಈಡೇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರ ಕೂಡ ಮಾನ್ಯ ಕೇಂದ್ರ ಸಚಿವರನ್ನು ಮತ್ತು ಸಂಬಂಧಿಸಿದ ಪ್ರಾಧಿಕಾರದ ಅಧ್ಯಕ್ಷರನ್ನು ಖುದ್ದಾಗಿ ಭೇಟಿ ಮಾಡಿ, ಭೀಕರವಾಗಿರುವ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿ. ತಮಿಳು ನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ನಾವೆಲ್ಲರೂ ಪಕ್ಷಭೇದ ಮರೆತು ನಮ್ಮ ರೈತರ ಪರವಾಗಿ ನಿಲ್ಲೋಣ ಎಂದು ಸಲಹೆ ನೀಡಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ: ಲೋಕಸಭಾ ಚುನಾವಣೆಯಲ್ಲಿ ಸುಮಲತಾರನ್ನು ಬೆಂಬಲಿಸುತ್ತಾ ಜೆಡಿಎಸ್?