Asianet Suvarna News Asianet Suvarna News

ಬಿಜೆಪಿ-ಜೆಡಿಎಸ್ ಮೈತ್ರಿ: ಲೋಕಸಭಾ ಚುನಾವಣೆಯಲ್ಲಿ ಸುಮಲತಾರನ್ನು ಬೆಂಬಲಿಸುತ್ತಾ ಜೆಡಿಎಸ್?

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗುವ ಕುರಿತಂತೆ ಚರ್ಚೆಗಳು ಶುರುವಾಗಿರುವ ಬೆನ್ನಲ್ಲೇ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಸುಮಲತಾ ಕಣಕ್ಕಿಳಿದರೆ ಜೆಡಿಎಸ್ ಅವರನ್ನು ಬೆಂಬಲಿಸುವುದೇ ಎಂಬ ಬಗ್ಗೆಯೂ ಚರ್ಚೆಗಳು ಆರಂಭಗೊಂಡಿವೆ. 

JDS supporting Sumalatha Ambareesh in Lok Sabha election gvd
Author
First Published Sep 12, 2023, 4:00 AM IST

ಮಂಡ್ಯ ಮಂಜುನಾಥ

ಮಂಡ್ಯ (ಸೆ.12): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗುವ ಕುರಿತಂತೆ ಚರ್ಚೆಗಳು ಶುರುವಾಗಿರುವ ಬೆನ್ನಲ್ಲೇ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಸುಮಲತಾ ಕಣಕ್ಕಿಳಿದರೆ ಜೆಡಿಎಸ್ ಅವರನ್ನು ಬೆಂಬಲಿಸುವುದೇ ಎಂಬ ಬಗ್ಗೆಯೂ ಚರ್ಚೆಗಳು ಆರಂಭಗೊಂಡಿವೆ. ಪ್ರಸ್ತುತ ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅವರು ಬಿಜೆಪಿಗೆ ಬಾಹ್ಯ ಬೆಂಬಲವನ್ನಷ್ಟೇ ಘೋಷಿಸಿದ್ದಾರೆ. 2024ರ ಲೋಕಸಭಾ ಚುನಾವಣೆ ವೇಳೆಗೆ ಅವರು ಬಿಜೆಪಿ ಸೇರುವುದು ನಿಶ್ಚಿತವಾಗಿದೆ. ಬಿಜೆಪಿ ಹೈಕಮಾಂಡ್ ಸುಮಲತಾ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ತೀರ್ಮಾನಿಸಿದೆ. ಅದಕ್ಕಾಗಿ ಬಿಜೆಪಿ ರಾಜಕೀಯ ಚಾಣಕ್ಯ ಅಮಿತ್‌ಶಾ ಅವರು ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಎದುರು ದಾಳ ಉರುಳಿಸಿದ್ದಾರೆ.

ಜೆಡಿಎಸ್‌ಗೆ ಪ್ರತಿಷ್ಠೆಯ ಕಣ: ಜೆಡಿಎಸ್ ಪಾಲಿಗೆ ಮಂಡ್ಯ ಪ್ರತಿಷ್ಠೆಯ ಕಣವಾಗಿದೆ. ಬಿಜೆಪಿಗಿಂತಲೂ ಹೆಚ್ಚು ಸಂಘಟನಾತ್ಮಕ ಶಕ್ತಿ, ಅತಿ ಹೆಚ್ಚು ಮತದಾರರನ್ನೂ ಒಳಗೊಂಡಿದೆ. ಬಿಜೆಪಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ಗೆದ್ದಿರುವ ಉದಾಹರಣೆಯೇ ಇಲ್ಲ. ಇದೀಗ ಸುಮಲತಾ ಅವರನ್ನು ಕಣಕ್ಕಿಳಿಸಿ ಮೊದಲ ಬಾರಿಗೆ ಖಾತೆ ತೆರೆಯುವುದಕ್ಕೆ ಬಿಜೆಪಿ ತಂತ್ರಗಾರಿಕೆ ರೂಪಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿತ್ತು. ಅವರಿಗೆ ಪ್ರತಿಸ್ಪರ್ಧಿಯಾಗಿ ಸುಮಲತಾ ಕಣಕ್ಕಿಳಿದಿದ್ದರು. ಆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಹಾಕದೆ ಸಂಪೂರ್ಣ ಬೆಂಬಲವನ್ನು ಸುಮಲತಾ ಅವರಿಗೆ ಘೋಷಿಸಿತ್ತು. ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಜಯಶಾಲಿಯಾಗಿದ್ದರು.

ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನೋಡೋದು ತಪ್ಪು: ಯದುವೀರ್‌ ಒಡೆಯರ್‌

ಮಾಜಿ ಶಾಸಕರೆಲ್ಲರೂ ಸಮ್ಮತಿಸುವರೇ?: ಅಂದು ಜೆಡಿಎಸ್ ಸೋಲಿಗೆ ಕಾರಣರಾಗಿದ್ದ ಸುಮಲತಾ ಅಂಬರೀಶ್ ಅವರನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಒಪ್ಪಿಕೊಂಡು ಜೆಡಿಎಸ್ ವರಿಷ್ಠರು ಹಾಗೂ ಸ್ಥಳೀಯ ನಾಯಕರು ಅವರನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವರೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಸಂಸದೆ ಸುಮಲತಾ ಅಂಬರೀಶ್‌ಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ಪ್ರಾಮೀಸ್ ಮಾಡಿರುವುದಾಗಿ ಬಿಜೆಪಿ ಹೈಕಮಾಂಡ್ ದೇವೇಗೌಡರಿಗೆ ತಿಳಿಸಿದ್ದು, ಇದಕ್ಕೆ ದೇವೇಗೌಡರು ಸ್ಥಳೀಯ ನಾಯಕರು ಅಂದರೆ ಮಂಡ್ಯ ಜಿಲ್ಲೆಯ ಜೆಡಿಎಸ್‌ನ ಮಾಜಿ ಶಾಸಕರ ಜೊತೆ ಚರ್ಚಿಸಬೇಕು ಎಂದು ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆದ್ದ ನಂತರದಲ್ಲೂ ಜೆಡಿಎಸ್ ಪಕ್ಷ ಅವರ ನೇರ ಟಾರ್ಗೇಟ್ ಆಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕರ ವಿರುದ್ಧವೇ ಹರಿಹಾಯ್ದಿದ್ದರು. ಈಗ ಹಿಂದೆ ನಡೆದಿದ್ದೆಲ್ಲವನ್ನೂ ಮರೆತು ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮಾಜಿ ಶಾಸಕರೆಲ್ಲರೂ ಸುಮಲತಾರನ್ನು ಗೆಲ್ಲಿಸಲು ಶ್ರಮಿಸುವರೇ ಎನ್ನುವುದು ಗಮನಾರ್ಹ ಅಂಶವಾಗಿದೆ.

ಕಾಂಗ್ರೆಸ್ ಕಟ್ಟಿಹಾಕಲು ದೋಸ್ತಿ: ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಹೆಡೆಮುರಿ ಕಟ್ಟುವುದು ಬಿಜೆಪಿ-ಜೆಡಿಎಸ್‌ನ ಪ್ರಮುಖ ಗುರಿಯಾಗಿದೆ. ಹಾಗಾಗಿ ಜೆಡಿಎಸ್ ತನ್ನ ಜೊತೆಗಾರನನ್ನಾಗಿ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಸುಮಲತಾ ಅವರ ಗೆಲುವಿಗೆ ಶ್ರಮಿಸುವುದು ಜೆಡಿಎಸ್‌ನವರಿಗೆ ಅನಿವಾರ್ಯವಾಗಿದೆ. ಸ್ಥಳೀಯ ನಾಯಕರು ಒಪ್ಪಿಗೆ ಸೂಚಿಸದಿದ್ದರೂ ದಳಪತಿಗಳು ಅವರನ್ನು ಒಪ್ಪಿಸುವಂತೆ ಮಾಡುವರೇ ಎನ್ನುವುದು ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಲು ಪ್ರಬಲ ಅಭ್ಯರ್ಥಿಗಳಿಲ್ಲ. ಇದನ್ನು ಮನಗಂಡಿರುವ ಬಿಜೆಪಿ ಸುಮಲತಾ ಅವರನ್ನು ಕಣಕ್ಕಿಳಿಸಿ ಜೆಡಿಎಸ್ ಬೆಂಬಲದೊಂದಿಗೆ ಕ್ಷೇತ್ರ ಗೆಲ್ಲುವ ಲೆಕ್ಕಾಚಾರದಲ್ಲಿದೆ. ಅಸ್ತಿತ್ವವೇ ಇಲ್ಲವಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ 2019ರಲ್ಲಿ ನಡೆದ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿತು. ಅದೇ ರೀತಿ ಲೋಕಸಭೆಯಲ್ಲೂ ಖಾತೆ ತೆರೆಯುವ ಉತ್ಸಾಹದಲ್ಲಿದೆ.

ಅಸ್ತಿತ್ವದ ಉಳಿವಿಗೆ ಹೋರಾಟ: 2023ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಂಡು ಜೆಡಿಎಸ್ ದುರ್ಬಲವಾಗಿದೆ. ಮಂಡ್ಯ ನೆಲದಲ್ಲಿ 5 ವರ್ಷಗಳಲ್ಲಿ ನಡೆದ ಒಂದು ಲೋಕಸಭೆ, ಎರಡು ವಿಧಾನಪರಿಷತ್ ಚುನಾವಣೆ, 7 ಕ್ಷೇತ್ರಗಳಿಗೆ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಷ್ಟೇ ಜಯ ಸಾಧಿಸಿದೆ. ಈಗ ಮಂಡ್ಯ ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದನ್ನೇ ಎದುರುನೋಡುತ್ತಿದೆ. ಇದೀಗ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಬೇಕೆಂಬ ಬಿಜೆಪಿ ಷರತ್ತು ಮಂಡ್ಯ ಜಿಲ್ಲೆಯೊಳಗೆ ಅಸ್ತಿತ್ವದ ಉಳಿವಿಗೆ ಹೋರಾಟ ನಡೆಸಿರುವ ಜೆಡಿಎಸ್ ಕನಸಿಗೆ ತಣ್ಣೀರೆರಚಿದೆ.

ನಾಲ್ಕು ವರ್ಷಗಳಿಂದ ಸಂಸದೆ ಸುಮಲತಾ ವಿರುದ್ಧ ಟೀಕಾ ಪ್ರಹಾರ ಮಾಡುತ್ತಲೇ ಬಂದಿರುವ ಜೆಡಿಎಸ್ ಮಾಜಿ ಶಾಸಕರು ದಳಪತಿಗಳ ಒತ್ತಡಕ್ಕೆ ಮಣಿದರೆ ಸುಮಲತಾ ಬೆಂಬಲಕ್ಕೆ ನಿಲ್ಲಲೇಬೇಕಾಗುತ್ತದೆ. ಅದು ಸಾಧ್ಯವೇ ಎಂದು ಹೇಳಲಾಗುತ್ತಿದ್ದರೂ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದೆಂಬ ಮಾತೂ ಇದೆ. ಒಮ್ಮೆ ಮಂಡ್ಯದ ಮಾಜಿ ಶಾಸಕರು ಸುಮಲತಾ ಅವರನ್ನು ಬೆಂಬಲಿಸದೇ ಹೋದರೆ ಆಗ ದಳಪತಿಗಳು ಯಾವ ನಿರ್‘ಾರ ಮಾಡುವರು ಅಥವಾ ಬಿಜೆಪಿಯೇ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಸುಮಲತಾ ಅವರನ್ನು ಬೇರೆ ಕ್ಷೇತ್ರದಿಂದ ಕಣಕ್ಕಿಳಿಸಲು ಮುಂದಾಗುವುದೇ ಎಂಬ ಬಗ್ಗೆಯೂ ಕುತೂಹಲ ಮೂಡಿಸಿವೆ.

ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ ಪ್ರಕಾಶ್ ರಾಜ್

ಸುಮಲತಾರಿಗೆ ಗೆಲುವು ಸುಲಭವಾಗಿಲ್ಲ: ಸುಮಲತಾ ಅಂಬರೀಶ್‌ಗೆ 2019ರಲ್ಲಿ ಮಂಡ್ಯದಲ್ಲಿದ್ದ ರಾಜಕೀಯ ಪರಿಸ್ಥಿತಿ ಈಗಿಲ್ಲ. ಹಾಗಾಗಿ ೨೦೨೪ರ ಚುನಾವಣೆ ಅವರಿಗೆ ಸುಲಭವಾಗಿಯೂ ಇಲ್ಲ. ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸುವುದಕ್ಕೆ ಪೂರಕವಾದ ರಾಜಕೀಯ ವಾತಾವರಣವಿಲ್ಲ. ಅಂದು ಕಾಂಗ್ರೆಸ್, ಬಿಜೆಪಿ, ರೈತಸಂಘ ಹಾಗೂ ಜೆಡಿಎಸ್‌ನ ಕೆಲವರು ಸುಮಲತಾ ಗೆಲುವಿಗೆ ಬೆಂಬಲವಾಗಿ ನಿಂತಿದ್ದರು. ಈಗ ಅಂತಹ ಸನ್ನಿವೇಶಗಳು ಇಲ್ಲವಾಗಿದೆ. ಪಕ್ಷೇತರ ಸಂಸದೆಯಾಗಿರುವ ಸುಮಲತಾ ಮುಂದಿನ ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಯಸಿದ್ದಾರೆ. 

ಅವರಿಗೆ ಎದುರಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಸುಮಲತಾ ಬೆಂಬಲಿಸುವುದಕ್ಕೆ ಜೆಡಿಎಸ್ ಒಪ್ಪಿದರೆ ಆ ಪಕ್ಷದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆದಿಯಾಗಿ ಮಾಜಿ ಶಾಸಕರೆಲ್ಲರನ್ನೂ ಸುಮಲತಾ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುವುದು ಅನಿವಾರ್ಯವಾಗಲಿದೆ. ಇತ್ತೀಚೆಗೆ ಸಂಸದೆ ಸುಮಲತಾ ಅವರು ಜೆಡಿಎಸ್ ಕುರಿತಂತೆ ಮೃದು ಧೋರಣೆ ಅನುಸರಿಸುತ್ತಿದ್ದಾರೆ. ಕಾವೇರಿ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧವಾದ ನಿಲುವನ್ನು ಅವರು ಪ್ರದರ್ಶಿಸುತ್ತಿದ್ದಾರೆ. ಇದುವರೆಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದವರು ಮುಂದೆ ಕಾಂಗ್ರೆಸ್ ಪಕ್ಷದ ವಿರುದ್ಧ ದಾಳಿ ನಡೆಸಬೇಕಿದೆ.

Follow Us:
Download App:
  • android
  • ios