ಹಾಸನದ ತಿರುಪತಿಹಳ್ಳಿ ಬೆಟ್ಟದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ಆಯೋಜಿಸಿದ್ದ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಡಿ. 13ರ ರಾತ್ರಿ ನಡೆದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆಯನ್ನು ಕಣ್ತುಂಬಿಕೊಂಡರು

ಡಿ. 13ರ ರಾತ್ರಿ 12 ಗಂಟೆಗೆ ಸುಮಾರು 50ಕ್ಕೂ ಅಧಿಕ ಉಲ್ಕೆ ಮಳೆ। ಆಕಾಶ ವೀಕ್ಷಣೆ ಕಾರ್ಯಕ್ರಮ

ಹಾಸನ (ಡಿ.16) ತಾಲೂಕಿನ ತಿರುಪತಿಹಳ್ಳಿ ಬೆಟ್ಟದ ಮೇಲೆ ಡಿ. 13ರ ರಾತ್ರಿ 12 ಗಂಟೆಗೆ ಸುಮಾರು 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ ಸಂಭವಿಸಿತು. ಇದನ್ನು ವಿದ್ಯಾರ್ಥಿಗಳು, ಪೋಷಕರು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ಕಣ್ತುಂಬಿಸಿಕೊಂಡು ಸಂಭ್ರಮಿಸಿದರು.

ಡಿ. 13ರಂದು ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ಜಿಲ್ಲಾ ಸಮಿತಿ ನಿಟ್ಟೂರು ಗ್ರಾಮ ಪಂಚಾಯಿತಿಯ ಸಹಯೋಗ ಹಾಗೂ ಶ್ರೀ ಚಿಕ್ಕಗಿರಿರಂಗನಾಥ ಸೇವಾನ್ಯಾಸದ ಸಹಕಾರದೊಂದಿಗೆ ತಿರುಪತಿಹಳ್ಳಿ ಬೆಟ್ಟದಲ್ಲಿ “ಆಕಾಶದ ಅದ್ಭುತ ಉಲ್ಕೆಗಳ ಸುರಿಮಳೆ” ಎಂಬ ಶೀರ್ಷಿಕೆಯಡಿ ಆಕಾಶ ವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಜಿಲ್ಲೆಯ ವಿವಿಧ ಭಾಗಗಳಿಂದ ತಮ್ಮ ಸ್ವಂತ ವಾಹನ ಹಾಗೂ ಬಿಜಿವಿಎಸ್ ಆಯೋಜಿಸಿದ್ದ ಬಸ್ಸುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿಜ್ಞಾನ ಆಸಕ್ತರು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಸಂಜೆ ಆರು ಗಂಟೆಯಿಂದಲೂ ಬೆಟ್ಟದ ಮೇಲೆ ಕಿಕ್ಕಿರಿದು ನೆರೆದು ಬೆಟ್ಟದ ಪಶ್ಚಿಮ ತುದಿಯಿಂದ ಸೂರ್ಯಾಸ್ತಮಾನ ನೋಡಿ ಬೆರಗಾದರು, ಟೆಲೆಸ್ಕೋಪಿನ ಮೂಲಕ ಶನಿಗ್ರಹದ ಬಳೆಗಳನ್ನು ಗುರುಗ್ರಹದ ಸಾಲುಹಿಡಿದು ನಿಂತಿದ್ದ ಗ್ಯಾನಿಮಿಡ, ಕ್ಯಾಲೆಸ್ಟೊನ್, ಐಯೋ ಹಾಗೂ ಯೂರೋಪ ಉಪಗ್ರಹಗಳನ್ನು ವೀಕ್ಷಿಸಿ, ಉಲ್ಕಾಪಾತ ನೋಡಿ ಸಂಭ್ರಮಿಸಿದರು ಹಾಗೂ ಸಂಪನ್ಮೂಲ ವ್ಯಕ್ತಿಗಳ ಸುತ್ತ ಬಂಡೆಯ ಮೇಲೆ ಅಂಗಾತ ಮಲಗಿ ತಮ್ಮ ರಾಶಿ ಹಾಗೂ ಮಧುವೆಯಲ್ಲಿ ತೋರಿಸುವ ಅರುಂಧತಿ ನಕ್ಷತ್ರಗಳನ್ನು ನೋಡಿ ಖುಷಿಪಟ್ಟರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ವಿಧ ವಿಧ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಜೊತೆ ಜೊತೆಗೆ ಸರ್ ಸರ್ ಎಂದು ಬೀಳುತ್ತಿದ್ದ ಒಂದೊಂದೆ ಉಲ್ಕೆಗಳನ್ನು ಎಣಿಸಿ ಎಣಿಸಿ ಕುಣಿದಾಡಿದರು. 11 ಗಂಟೆ ವೇಳೆಗೆ 8 ರಿಂದ 10 ಬೀಳುತ್ತಿದ್ದ ಉಲ್ಕೆಗಳು 11 ರ ನಂತರ 10 ರಿಂದ 15 ಕ್ಕೇರಿದವು. ನಂತರ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆ ಕಂಡಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ತುಮಕೂರು ವಿಜ್ಞಾನ ಕೇಂದ್ರದ ರವಿಶಂಕರ ಅವರು ಆಕಾಶ ವೀಕ್ಷಣೆ ಮಾಡುವ ವಿಧಾನ, ವಿವಿಧ ಗ್ರಹಗಳು ಹಾಗೂ ಆ ರಾತ್ರಿ ಕಾಣಿಸಿಕೊಳ್ಳುವ ಉಲ್ಕೆಗಳನ್ನು ಯಾವ ದಿಕ್ಕಿನಲ್ಲಿ ವೀಕ್ಷಿಸಬೇಕೆಂಬುದನ್ನು ವಿವರಿಸಿದರು. ಅಹಮದ್ ಅಗರೆ ಅವರು ಪಿಪಿಟಿ ಮೂಲಕ ಆಕಾಶದ ರಾಶಿ ನಕ್ಷತ್ರಗಳನ್ನು ಹೇಗೆ ಗುರುತಿಸಬೇಕು ಎಂಬುದನ್ನು ತಿಳಿಸಿ, ನೇರವಾಗಿ ಆಕಾಶದಲ್ಲಿಯೇ ಅವುಗಳನ್ನು ಗುರುತಿಸುವ ವಿಧಾನವನ್ನು ಪ್ರಾಯೋಗಿಕವಾಗಿ ವಿವರಿಸಿದರು.

ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾದ ಕೆ.ಎಸ್. ರವಿಕುಮಾರ್ ಅವರು “ಆಕಾಶ ಮತ್ತು ಆರೋಗ್ಯ” ವಿಷಯದ ಕುರಿತು ಪಿಪಿಟಿ ಮೂಲಕ ಆಕಾಶ ವೀಕ್ಷಣೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಆಗುವ ಲಾಭಗಳನ್ನು ವಿವರಿಸಿದರು. ನಂತರ ಸಂಪನ್ಮೂಲ ವ್ಯಕ್ತಿ ಕವಿತಾ ಕೆ.ವಿ. ಅವರು ಸೌರಮಂಡಲದ ಉಗಮ ಹಾಗೂ ಉಲ್ಕಾಪಾತ ಸಂಭವಿಸುವ ಕಾರಣಗಳನ್ನು ವಿಡಿಯೋ ಮತ್ತು ಪಿಪಿಟಿ ಮೂಲಕ ವಿವರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ-ಕಾಲೇಜುಗಳ ಮಕ್ಕಳಿಂದ ಹಿಡಿದು ಮಕ್ಕಳ ಪೋಷಕರು, ಗ್ರಾಮಪಂಚಾಯತಿ ಅಧ್ಯಕ್ಷ ಕಾರ್ಯದರ್ಶಿಗಳು, ಎಂ.ಸಿ.ಎಫ್ ನ ವಿಜ್ಞಾನಿಗಳು, ಊರಿನ ಜನರು ಎಲ್ಲರೂ ನೇರವಾಗಿ 50ಕ್ಕೂ ಹೆಚ್ಚು ಉಲ್ಕೆಗಳು ಆಕಾಶದಲ್ಲಿ ಬೀಳುವುದನ್ನು ವೀಕ್ಷಿಸಿ ಅಪಾರ ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉಲ್ಕೆಗಳ ರೂಪದಲ್ಲಿ ಅಲಂಕರಿಸಿದ್ದ ಚಾಕೊಲೇಟುಗಳನ್ನು ಸಭಿಕರ ಮೇಲೆ ಎರಚುವ ಮೂಲಕ ವಿನೂತನಾವಾಗಿ ಉದ್ಘಾಟಿಸಿದ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎನ್.ಎಂ ನಟರಾಜ್ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಕಾಶದ ಅದ್ಭುತ ಉಲ್ಕೆಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಟ್ಟೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಚಂದ್ರಶೇಖರ್ ಮಾತನಾಡಿ, ಇಂದಿನ ಯುವ ಜನತೆ ಮೊಬೈಲ್ ನಂತಹ ಆಧುನಿಕ ತಂತ್ರಜ್ಞಾನಗಳಿಗೆ ಮಾರು ಹೋಗದೆ. ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ನಿಟ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಹಾಸನ ತಾಲ್ಲೂಕು ಬಿಜಿವಿಎಸ್ ಅಧ್ಯಕ್ಷ ಡಾ. ಎಚ್.ಜಿ.ಮಂಜುನಾಥ್ ಮಾತನಾಡಿ, ಖಗೋಳ ವಿಜ್ಞಾನದ ಮಹಾತಾಯಿ ಎನ್ನುತ್ತಾರೆ. ಆಕಾಶದಲ್ಲಿ ನಡೆಯುವ ಸೌರ ವಿದ್ಯಮಾನಗಳು ವಿರ್ಶವ ವಿಕಾಸದ ಗುಟ್ಟನ್ನು ಹುದುಗಿಸಿಟ್ಟುಕೊಂಡಿರುತ್ತವೆ. ಅವನ್ನು ವೀಕ್ಷಿಸಿ ಅಧ್ಯಯನ ಮಾಡುವ ಮೂಲಕ ಅದರೊಳಗಿನ ಅವಿತ ಸತ್ಯವನ್ನು ಬಯಲು ಮಾಡುವುದೇ ವಿಜ್ಞಾನ. ಅಂತಹ ವಿಜ್ಞಾನಿಗಳು ನೀವಾಗಿ ದೇಶವನ್ನು ವಿಜ್ಞಾನ ಸ್ವಾವಲಂಬನೆಯತ್ತ ಕೊಂಡೊಯ್ಯುವ ವಿಜ್ಞಾನಿಗಳಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಮಾತನಾಡಿ, ಆಕಾಶವನ್ನು ದಿನನಿತ್ಯ ನೋಡುವುದರಿಂದ ನಮ್ಮೊಳಗಿನ ಹೇಡಿತನ, ಮೌಢ್ಯ ಹಾಗೂ ವಿಶ್ವದ ರಚನೆಯ ಅದ್ಭುತಗಳನ್ನು ತಿಳಿಯಲು ಸಾಧ್ಯ ಎಂದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿಗಳಾದ ಚಿನ್ನೇನಹಳ್ಳಿ ಸ್ವಾಮಿ ಅವರು ಪ್ರಸ್ತಾವಿಕ ಭಾಷಣ ಮಾಡಿ ಬಿಜಿವಿಎಸ್ ನ ಉದ್ದೇಶ ಮತ್ತು ಹಿನ್ನೆಲೆಯನ್ನು ತಿಳಿಸಿ, ಈ ಕಾರ್ಯಕ್ರಮವು ವಿಜ್ಞಾನ ಜಾಗೃತಿ ಮೂಡಿಸುವುದರ ಜೊತೆಗೆ ಆಕಾಶ ವೀಕ್ಷಣೆಯ ಮಹತ್ವವನ್ನು ಸಾರ್ವಜನಿಕರಲ್ಲಿ ಪರಿಣಾಮಕಾರಿಯಾಗಿ ತಲುಪಿಸುತ್ತದೆ ಎಂದರು.

ಕಾರ್ಯಕ್ರದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರ್. ತಿರುಪತಿಹಳ್ಳಿ ಬೆಟ್ಟದ ಸಭಾಂಗಣದ ಉಸ್ತುವಾರಿ ಬಿ.ಎಸ್.ರಂಗನಾಥ್, ಬಿಜಿವಿಎಸ್ ಹಾಸನ ಜಿಲ್ಲಾ ಉಪಾಧ್ಯಕ್ಷ ಧರ್ಮರಾಜು, ಮಲ್ನಾಡ್ ಎಂಜಿನೀಯರಿಂಗ್ ಕಾಲೇಜು ಉಪನ್ಯಾಸಕಿ ಉಮ, ಎ.ವಿ.ಕೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್. ಭಾಗವಹಿಸಿದ್ದರು.

ಬಿಜಿವಿಎಸ್ ಹಾಸನ ತಾಲೂಕು ಕಾರ್ಯದರ್ಶಿ ಲೋಲಾಕ್ಷಿ ಸ್ವಾಗತಿಸಿದರು. ಬಿಜಿವಿಎಸ್ ಜಿಲ್ಲಾ ಖಜಾಂಚಿ ರವೀಶ್ ನಿರೂಪಣೆ ಮಾಡಿ ವಂದಿಸಿದರು. ಶಿಕ್ಷಣ ಉಪಸಮಿತಿಯ ಸದಸ್ಯರಾದ ಜಯಪ್ರಕಾಶ್ ಅವರು ವಿನೂತನ ರೀತಿಯಲ್ಲಿ ಉದ್ಘಾಟನೆ ಮಾಡಲು ಸಹಕರಿಸಿದರು. ಕವಿತ, ರವೀಶ್, ಜಾನಕಿ, ಹಾಗೂ ಮೋನಿಕಾ ನಡುನಡುವೆ ಖಗೋಳ ರಸಪ್ರಶನೆಗಳನ್ನು, ಪ್ರಯೋಗಗಳನ್ನು ಮಾಡಿ ಬಹುಮಾನ ವಿತರಿಸಿದರು.

ಈ ಕಾರ್ಯಕ್ರಮವು ವಿಜ್ಞಾನ ಜಾಗೃತಿ ಮೂಡಿಸುವುದರ ಜೊತೆಗೆ ಆಕಾಶ ವೀಕ್ಷಣೆಯ ಮಹತ್ವವನ್ನು ಸಾರ್ವಜನಿಕರಲ್ಲಿ ಪರಿಣಾಮಕಾರಿಯಾಗಿ ತಲುಪಿಸಿತು.