ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆ  ವಿಧಾನ ಪರಿಷತ್‌ನಲ್ಲಿ ಸಂತಾಪ ಸೂಚನೆ ನಂತರ ಕಲಾಪ ನಡೆಸುವ ಸಂಪ್ರದಾಯ ಮುರಿದು, ಇಡೀ ದಿನದ ಕಲಾಪ ಮುಂದೂಡಲಾಯಿತು. ಸದಸ್ಯರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಬೇಕಿದ್ದ ಕಾರಣ, ವಿವಿಧ ಪಕ್ಷಗಳ ಸದಸ್ಯರ ಸಲಹೆ ಮೇರೆಗೆ ಸಭಾಪತಿಯಿಂದ ಐತಿಹಾಸಿಕ ನಿರ್ಧಾರ 

ವಿಧಾನ ಪರಿಷತ್‌ (ಡಿ.16) ಸಾಮಾನ್ಯವಾಗಿ ಹಾಲಿ ವಿಧಾನಸಭೆ ಸದಸ್ಯರು ನಿಧನರಾದ ಸಂದರ್ಭದಲ್ಲಿ ಸಂತಾಪ ಸೂಚನೆ ನಂತರ ಕಲಾಪವನ್ನು ಮರುದಿನಕ್ಕೆ ಮುಂದೂಡುವ ಸಂಪ್ರದಾಯವನ್ನು ಕೆಳಮನೆಯಲ್ಲಿ ಅನುಸರಿಸಿಕೊಂಡು ಬರಲಾಗುತ್ತಿದೆ. ಆದರೆ ವಿಧಾನ ಪರಿಷತ್‌ನಲ್ಲಿ ಸಂತಾಪ ಸೂಚನೆ ನಂತರ ಕಲಾಪವನ್ನು ನಡೆಸಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಇಡೀ ದಿನದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದ್ದು ವಿಶೇಷವಾಗಿತ್ತು.

ಬೆಳಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆ ಮಂಡಿಸಿದ ನಂತರ, ಸದಸ್ಯರು ಮಾತನಾಡಿದ ಮೇಲೆ 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಯಿತು. ಪುನಃ ಸದನ ಸೇರುತ್ತಿದ್ದಂತೆ ಜೆಡಿಎಸ್‌ನ ಎಲ್‌.ಎಸ್‌. ಬೋಜೇಗೌಡ ಅವರು ವಿಷಯ ಪ್ರಸ್ತಾಪಿಸಿ, ಈವರೆಗೆ ಕೆಳಮನೆಯ ಸದಸ್ಯರು ನಿಧನರಾದಾಗ ಸಂತಾಪ ಸೂಚನೆ ಸಲ್ಲಿಸಿ ಕಲಾಪ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಶಾಮನೂರು ಶಿವಶಂಕರಪ್ಪ ಅವರು ಹಾಲಿ ಸದಸ್ಯರಾಗಿದ್ದಾರೆ. ಜತೆಗೆ ಸೋಮವಾರವೇ ಅವರ ಅಂತ್ಯ ಸಂಸ್ಕಾರ ಮಧ್ಯಾಹ್ನ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಕಲಾಪ ನಡೆಸುವುದು ಸೂಕ್ತ ಅಲ್ಲವೆಂಬುದು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆ. ಹಾಗಾಗಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡುವುದು ಉತ್ತಮ ಎಂದು ಸಲಹೆ ನೀಡಿದರು.

ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಕಲಾಪ ನಡೆಸುವ ಉದ್ದೇಶವಿದ್ದರೆ ತಮ್ಮ ತಕರಾರು ಇಲ್ಲ. ಸರ್ಕಾರ ಈ ಕುರಿತು ತೆಗೆದುಕೊಳ್ಳುವ ನಿರ್ಣಯ ನೋಡಿಕೊಂಡು ತಮ್ಮ ಅಭಿಪ್ರಾಯ ಹೇಳುತ್ತೇನೆ ಎಂದರು. ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಅವರು ತಾವು ಸೇರಿದಂತೆ ಅನೇಕ ಸಚಿವರು, ಸದಸ್ಯರು ಅಂತ್ಯ ಸಂಸ್ಕಾರಕ್ಕೆ ದಾವಣಗೆರೆಗೆ ಹೋಗಬೇಕಾಗಿದೆ. ಹಾಗಾಗಿ ಇಂದಿನ ಕಲಾಪ ಪಟ್ಟಿಯಲ್ಲಿರುವುದನ್ನು ಮಂಗಳವಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸಭಾನಾಯಕ ಎನ್‌. ಎಸ್‌. ಬೋಸರಾಜು ಅವರು, ಪ್ರತಿಪಕ್ಷದ ಸಲಹೆಗೆ ತಮ್ಮ ವಿರೋಧವಿಲ್ಲ. ಎಲ್ಲ ಸದಸ್ಯರ ಅಭಿಪ್ರಾಯಕ್ಕೆ ಸಹಮತವಿದೆ ಎಂದು ಹೇಳಿದರು.

ನಂತರ ಸಭಾಪತಿ ಬಸವರಾಜ ಹೊರಟ್ಟಿ ಅವರು, ಪ್ರಶ್ನೋತ್ತರ ಮತ್ತಿತರ ಕಲಾಪವನ್ನು ಸೋಮವಾರಕ್ಕೆ ತೆಗೆದುಕೊಳ್ಳುವುದಾಗಿ ಹೇಳಿ ಕಲಾಪವನ್ನು ಮುಂದೂಡಿದರು.