ನಿಗದಿತ ಪ್ರಮಾಣಕ್ಕಿಂತ ಕಡಿಮೆ ಬಿಯರ್ ಉತ್ಪಾದನೆ ಮಾಡಿದ್ದಕ್ಕಾಗಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ಗೆ ಅಬಕಾರಿ ಇಲಾಖೆ ವಿಧಿಸಿದ್ದ 29 ಕೋಟಿ ರೂ. ದಂಡದ ನೋಟಿಸ್ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಅಧೀನ ಅಧಿಕಾರಿಗಳಿಗೆ ದಂಡ ವಿಧಿಸುವ ಅಧಿಕಾರವಿಲ್ಲ ನಿಯಮ ಪ್ರಕಾರ ಮೊದಲು ಕಾರಣ ತಿಳಿಸಬೇಕು ಎಂದಿದೆ.
ಬೆಂಗಳೂರು (ಡಿ.16): ನಿಗದಿಗಿಂತ ಕಡಿಮೆ ಪ್ರಮಾಣದಲ್ಲಿ ಬಿಯರ್ ಉತ್ಪಾದನೆ ಮಾಡಿದ ಹಿನ್ನೆಲೆಯಲ್ಲಿ 29 ಕೋಟಿ ರು. ದಂಡ ಪಾವತಿಸಲು ಸೂಚಿಸಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ಗೆ ರಾಜ್ಯ ಅಬಕಾರಿ ಇಲಾಖೆ ಜಾರಿಗೊಳಿಸಿದ್ದ ಡಿಮ್ಯಾಂಡ್ ನೋಟಿಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಅಬಕಾರಿ ಇಲಾಖೆಯ ಉಪ ಅಬಕಾರಿ ಆಯುಕ್ತರು ಮತ್ತು ಅಬಕಾರಿ ಉಪ ಅಧೀಕ್ಷಕರು ಜಾರಿ ಮಾಡಿದ್ದ ಡಿಮ್ಯಾಂಡ್ ನೋಟಿಸ್ ರದ್ದು ಕೋರಿ ಯುನೈಟೆಡ್ ಬ್ರೇವರೀಸ್ ಲಿಮಿಟೆಡ್ (ಯುಬಿಎಲ್) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರ ಪೀಠ ಈ ಆದೇಶ ನೀಡಿದೆ.
ಕರ್ನಾಟಕ ಅಬಕಾರಿ (ಸ್ಪಿರಿಟ್, ಬಿಯರ್, ವೈನ್ ಅಥಾವ ಮದ್ಯದ ಉತ್ಪಾದನೆ ನಿಯಂತ್ರಣ) ನಿಯಮಗಳು-1998ರ ನಿಯಮ 7ರ ಪ್ರಕಾರ, ಮದ್ಯ ಉತ್ಪಾದಕರು ಪಡೆದ ಮಾಲ್ಟ್ಗೆ ನಿಗದಿಯಾದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಿಯರ್ ಉತ್ಪಾದನೆ ಮಾಡಿದ ಸಂದರ್ಭದಲ್ಲಿ, ಅದಕ್ಕೆ ಕಾರಣ ತಿಳಿದುಕೊಳ್ಳಬೇಕು. ಅದು ಬಿಟ್ಟು ದಂಡ ವಿಧಿಸಲು ಅವಕಾಶವಿಲ್ಲ. ಮೇಲಾಗಿ ಇಂತಹ ಪ್ರಕರಣಗಳಲ್ಲಿ ಅಬಕಾರಿ ಆಯುಕ್ತರು ಮಾತ್ರ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ಅಬಕಾರಿ ಆಯುಕ್ತರ ಅಧೀನ ಅಧಿಕಾರಿಗಳು ಡಿಮ್ಯಾಂಡ್ ನೋಟಿಸ್ ಜಾರಿ ಮಾಡಿದ್ದು, ಅದನ್ನು ರದ್ದುಪಡಿಸಲಾಗುತ್ತಿದೆ ಎಂದು ಪೀಠ ಹೇಳಿದೆ.
ಕಳೆದ 2017ರ ಜುಲೈನಿಂದ 2018ರ ಜೂನ್ ವರೆಗೆ ಪಡೆದಿದ್ದ ಮಾಲ್ಟ್ ಪ್ರಮಾಣಕ್ಕೆ ಅನುಗುಣವಾಗಿ ಬಿಯರ್ ಉತ್ಪಾದನೆ ಮಾಡಿಲ್ಲ. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗಿದೆ ಎಂದು ಹೇಳಿ 29 ಕೋಟಿ ರು. ದಂಡ ಪಾವತಿಸುವಂತೆ ಯುಬಿಎಲ್‌ಗೆ ಅಬಕಾರಿ ಅಧಿಕಾರಿಗಳು ಡಿಮ್ಯಾಂಡ್ ನೋಟಿಸ್ ನೀಡಿದ್ದರು. ಅದರ ವಿರುದ್ಧ ಯುಬಿಎಲ್ ಹೈಕೋರ್ಟ್ ಮೆಟ್ಟಿಲೇರಿತ್ತು.


