ವಾರದ ರಜೆ ಪರಿಣಾಮ ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾನುವಾರ ಒಂದೇ ದಿನ ಎರಡು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ದಾಖಲೆ ನಿರ್ಮಿಸಿದ್ದಾರೆ.

ರಾಯಚೂರು (ಜೂ.16): ವಾರದ ರಜೆ ಪರಿಣಾಮ ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾನುವಾರ ಒಂದೇ ದಿನ ಎರಡು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ದಾಖಲೆ ನಿರ್ಮಿಸಿದ್ದಾರೆ. ಸಹಜವಾಗಿ ಶ್ರೀಮಠದ ಪ್ರಮುಖ ಕಾರ್ಯಕ್ರಮಗಳ ಸಮಯದಲ್ಲಿ ಇಲ್ಲವೇ ನಿರಂತರ ರಜೆಗಳ ವೇಳೆಯಲ್ಲಿ ಲಕ್ಷಾಂತರ ಭಕ್ತರು ಶ್ರೀಮಠ ಆಗಮಿಸುತ್ತಾರೆ. ಆದರೆ ಈ ಬಾರಿ ವಾರದ ರಜೆಯಲ್ಲಿಯೇ ಎರಡು ಲಕ್ಷಕ್ಕೂ ಹೆಚ್ಚಿನ ಭಕ್ತರು ಬಂದು ಶ್ರೀರಾಘವೇಂದ್ರ ಸ್ವಾಮಿಗಳವರ ಮೂಲ ಬೃಂದಾವನ ದರ್ಶನ ಪಡೆದಿದ್ದಾರೆ.

ರಾಜ್ಯ ಸೇರಿದಂತೆ ದೇಶದ ವಿವಿಧ ಪ್ರದೇಶಗಳು ಹಾಗೂ ವಿದೇಶಗಳಿಂದಲೂ ಇಷ್ಟೊಂದು ಪ್ರಮಾಣದಲ್ಲಿ ಆಗಮಿಸಿದ್ದ ಭಕ್ತರಿಗೆ ಶ್ರೀಮಠದಿಂದ ವಿವಿಧ ಧಾರ್ಮಿಕ ಸೇವೆಗಳ ಜೊತೆಗೆ ಅಗತ್ಯ ಸವಲತ್ತುಗಳು ಹಾಗೂ ತೀರ್ಥ ಪ್ರಸಾದದ ವ್ಯವಸ್ಥೆಯನ್ನು ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಶ್ರೀಮಠವು ಕಲ್ಪಿಸಿದೆ. ಏಕಕಾಲಕ್ಕೆ ಬಂದ ಲಕ್ಷಾಂತರ ಭಕ್ತರಿಗೆ ದರ್ಶನ, ಪ್ರಸಾದ ಹಾಗೂ ಇತರೆ ಸವಲತ್ತುಗಳನ್ನು ಕಲ್ಪಿಸಿಕೊಡಲು ಶ್ರೀಮಠದಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಠದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಬುಧೇಂದ್ರ ಯತಿಗಳಿಂದ ಶ್ರೀ ಕೃಷ್ಣ ದರ್ಶನ: ಕೃಷ್ಣ ಮಠದ ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ, ಪರ್ಯಾಯದ ಕಾಲದಲ್ಲಿ ಪ್ರಥಮ ಬಾರಿಗೆ ಉಡುಪಿಗೆ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಆಗಮಿಸಿದರು. ಅವರನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಮತ್ತು ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠಕ್ಕೆ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ, ಆದರದಿಂದ ಬರಮಾಡಿಕೊಂಡರು. ಈ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತರಿದ್ದರು.

ಬಳಿಕ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದ ಮಂತ್ರಾಲಯ ಶ್ರೀಪಾದರನ್ನು ಗಂಧಾದ್ಯುಪಚಾರಗಳಿಂದ ಸತ್ಕರಿಸಿದ ಪೂಜ್ಯ ಪರ್ಯಾಯ ಶ್ರೀಪಾದರು, ತಮ್ಮ ಮಠಕ್ಕೂ ಮಂತ್ರಾಲಯ ಮಠಕ್ಕೂ ಇರುವ ಅವಿನಾಭಾವ ಮಧುರ ಸಂಬಂಧಗಳನ್ನು ಸ್ಮರಿಸಿ ಮುಂದೆಯೂ ಇದು ಶಾಶ್ವತವಾಗಿ ಮುಂದುವರಿಯಲಿ ಎಂದು ಹಾರೈಸಿದರು.

ನಮ್ಮ ಮಂತ್ರಾಲಯ ರಾಘವೇಂದ್ರ ಮಠದ ಪೀಠದಲ್ಲಿ ಬಂದ ಅನೇಕ ಯತಿಗಳ ಮತ್ತು ಉಡುಪಿ ಪುತ್ತಿಗೆ ಮಠದ ಪೀಠದಲ್ಲಿ ಬಂದ ಅನೇಕ ಯತಿಗಳ ಹೆಸರು ಒಂದೇ ಆಗಿದೆ ಎಂದು ಉಲ್ಲೇಖಿಸಿದ ಸುಬುಧೇಂದ್ರ ತೀರ್ಥ ಶ್ರೀಪಾದರು, ಸುಗುಣೇಂದ್ರ ತೀರ್ಥರು ಕೂಡ ನಮ್ಮ ಪೂರ್ವಿಕ ಯತಿಗಳಲ್ಲೊಬ್ಬರು ಎಂದು ಸ್ಮರಿಸಿ, ಈ ಪುತ್ತಿಗೆ ಮಠದ ಶ್ರೀಗಳು ನನಗೆ ಅಣ್ಣನ ಸಮಾನ, ಇವರ ಚತುರ್ಥ ಪರ್ಯಾಯಕ್ಕೆ ತಮ್ಮ ಶಾರ್ಟ್ ವಿಸಿಟ್ ಇದು. ಮತ್ತೆ ಸಂಸ್ಥಾನ ಸಮೇತ ಆಗಮಿಸುತ್ತೇವೆ ಎಂದರು.