ನವವೃಂದಾವನ ಗಡ್ಡೆಯಲ್ಲಿ ಪೂಜಾ ವಿವಾದ ಹಿನ್ನಲೆಯಲ್ಲಿ ಮಂತ್ರಾಲಯ ಹಾಗೂ ಉತ್ತರಾದಿ ಮಠಾಧೀಶರ ನಡುವೆ ಚೆನ್ನೈನಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಕೋರ್ಟ್‌ನಲ್ಲಿದ್ದ ಪದ್ಮನಾಭ ತೀರ್ಥರ ಆರಾಧನೆ ಕುರಿತು ಜಗಳ ಸುಖಾಂತ್ಯೆ ಕಂಡಿದೆ.
ಗಂಗಾವತಿ (ಜೂ.14): ನವವೃಂದಾವನ ಗಡ್ಡೆಯಲ್ಲಿ ಪೂಜಾ ವಿವಾದ ಹಿನ್ನಲೆಯಲ್ಲಿ ಮಂತ್ರಾಲಯ ಹಾಗೂ ಉತ್ತರಾದಿ ಮಠಾಧೀಶರ ನಡುವೆ ಚೆನ್ನೈನಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ಕೋರ್ಟ್‌ನಲ್ಲಿದ್ದ ಪದ್ಮನಾಭ ತೀರ್ಥರ ಆರಾಧನೆ ಕುರಿತು ಜಗಳ ಸುಖಾಂತ್ಯೆ ಕಂಡಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿರುವ ಪದ್ಮನಾಭ ತೀರ್ಥರ ಆರಾಧನೆ ಕುರಿತು ಎರಡು ಮಠಗಳ ನಡುವೆ ಹಲವು ದಶಕಗಳಿಂದ ವಿವಾದ ಇತ್ತು. ಪದ್ಮನಾಭ ತೀರ್ಥರ ಆರಾಧನೆ ವಿವಾದ ಹಲವು ಬಾರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಪ್ರತಿವರ್ಷ ಸುಪ್ರೀಂ ಕೋರ್ಟ್ ಆದೇಶದ ಮೆರೆಗೆ ಮಠಾಧೀಶರು ಪೂಜೆ ನೆರವೇರಿಸುತ್ತಿದ್ದರು. ಇತ್ತೀಚೆಗೆ ಸುಪ್ರೀಂ ಕೋರ್ಟ್, ಪೂಜಾ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಲಹೆ ನೀಡಿತ್ತು. ಹಾಗಾಗಿ ಉಭಯ ಶ್ರೀಗಳು ಚೆನ್ನೈನಲ್ಲಿ ಸಮಾಗಮವಾಗಿದ್ದು, ಸಂಧಾನ ಸಭೆ ನಡೆಸಿ ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ. ಉತ್ತರಾದಿಮಠದ ಸತ್ಯಾತ್ಮ ತೀರ್ಥರು, ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ಶ್ರೀಗಳು ಮಾತುಕತೆ ನಡೆಸಿ ವಿವಾದ ಬಗೆಹರಿಸಿಕೊಂಡಿದ್ದಾರೆ. ಇದರಿಂದ ಉಭಯ ಮಠಗಳ ಭಕ್ತರು ಹರ್ಷಗೊಂಡಿದ್ದಾರೆ.
ಬಗೆಹರಿಸಿಕೊಳ್ಳಲು ಸಿದ್ಧ: ಮಂತ್ರಾಲಯ ಮಠ ಎಂದಿಗೂ ಯಾವ ಮಠದ ವಿರುದ್ಧವೂ ನ್ಯಾಯಾಲಯಗಳಲ್ಲಿ ತಾನಾಗಿಯೇ ದಾವೆ ಹೂಡಿಲ್ಲ. ಪರ ಮಠ ದಾವೆ ಹೂಡಿದಾಗ ನ್ಯಾಯಾಲಯಗಳಲ್ಲಿ ವಾದಿಸಲಾಗಿದೆ. ನವ ಬೃಂದಾವನ, ನರಹರಿತೀರ್ಥರ ಬೃಂದಾವನ ಸೇರಿದಂತೆ ಉಳಿದ ತೀರ್ಥರ ವಿವಾದಗಳನ್ನು ಉಭಯ ಮಠಗಳು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮಂತ್ರಾಲಯ ಮಠ ಸದಾ ಸಿದ್ಧವಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಹಂಪಿಯ ನರಹರಿತೀರ್ಥರ ಬೃಂದಾವನದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ನಮಗೆ ಕಾನೂನು ಪ್ರಕಾರ ಆರಾಧನೆಗೆ ಅವಕಾಶ ದೊರೆತಿದೆ. ನಮ್ಮ ಮಠವು ಎಂದಿಗೂ ದ್ವೇಷ ಸಾಧಿಸಲ್ಲ. ಪ್ರೀತಿ, ಸಹಬಾಳ್ವೆಯಿಂದಲೇ ಮುನ್ನಡೆಯುತ್ತೇವೆ. ಉಭಯ ಮಠಗಳು ವ್ಯಾಜ್ಯ ಬಗೆಹರಿಸಿಕೊಳ್ಳಲು ಸಿದ್ಧರಿದ್ದೇವೆ. ಮಠಗಳನ್ನು ಕೂಡಿಸಿಕೊಂಡು ವ್ಯಾಜ್ಯ ಬಗೆಹರಿಸಿದರೆ ಅದಕ್ಕೂ ಸಿದ್ಧ. ಉನ್ನತ ಮಟ್ಟದ ಸ್ವಾಮೀಜಿಗಳು, ಅಧಿಕಾರಿಗಳು, ಮಾಧ್ಯಮದವರು ಕೂಡ ಗೌರವಯುತವಾಗಿ ವೇದಿಕೆ ಸಿದ್ಧ ಮಾಡಿದರೆ ನಾವು ವ್ಯಾಜ್ಯ ಬಗೆಹರಿಸಿಕೊಳ್ಳಲು ತಯಾರಿದ್ದೇವೆ ಎಂದು ಮಂತ್ರಾಲಯ ಶ್ರೀ ಹೇಳಿದರು.
ನವ ಬೃಂದಾವನ, ನರಹರಿತೀರ್ಥರ ಬೃಂದಾವನ ಸೇರಿದಂತೆ ಉಳಿದ ತೀರ್ಥರ ವಿವಾದಗಳನ್ನು ಉಭಯ ಮಠಗಳು ಒಂದೆಡೆ ಸೇರಿ ಸೌಹಾರ್ದವಾಗಿ ಪೂಜೆ ಸಲ್ಲಿಸೋಣ. ಆದರೆ ಪರ ಮಠದವರು ಸೌಹಾರ್ದವಾಗಿ ಪೂಜೆ ಸಲ್ಲಿಸಲು ಬರುತ್ತಿಲ್ಲ. ನರಹರಿತೀರ್ಥರ ಆರಾಧನೆಗೆ ಆಹ್ವಾನಿಸಿದರೂ ಆಗಮಿಸಿಲ್ಲ. ಪರ ಮಠದವರು ಒಪ್ಪುತ್ತಿಲ್ಲ. ಪೂಜೆ, ಆರಾಧನೆಗೆ ನಿರ್ಬಂಧ ಇಲ್ಲ. ಈ ರೀತಿ ವಿವಾದದಿಂದ ಭಕ್ತರು, ಮಠದ ಶಿಷ್ಯರು, ಸಮಾಜದಲ್ಲಿ ಗೊಂದಲ, ಬೇಸರ ಮೂಡುತ್ತದೆ ಎಂದರು.
