ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಹಾರ್ಡ್‌ವೇರ್ ಸಾಧನಗಳಿಗೆ ಆಗಾಗ್ಗೆ ನಿರ್ವಹಣೆ, ದುರಸ್ತಿ, ಬದಲಾವಣೆಯ ಅಗತ್ಯವಿದೆ. ಇದು ಅನಗತ್ಯ ವೆಚ್ಚಗಳಿಗೆ ಕಾರಣವಾಗುತ್ತಿದೆ.
ಬೆಂಗಳೂರು (ಜೂ.16): ರಾಜ್ಯದ ಆರೋಗ್ಯ ಇಲಾಖೆ ವಿವಿಧ ಕಚೇರಿ, ಆಸ್ಪತ್ರೆಗಳಲ್ಲಿ ಬಳಸುತ್ತಿರುವ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಹಾರ್ಡ್‌ವೇರ್, ನೆಟ್‌ವರ್ಕ್ ಸಮಸ್ಯೆ ಆಗುತ್ತಿರುವುದರಿಂದ ಇಲಾಖೆ ವ್ಯಾಪ್ತಿಯಲ್ಲಿ ಜು.1ರಿಂದ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಆರೋಗ್ಯ ಇಲಾಖೆ ಆದೇಶ ಮಾಡಿದೆ. ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಹಾರ್ಡ್‌ವೇರ್ ಸಾಧನಗಳಿಗೆ ಆಗಾಗ್ಗೆ ನಿರ್ವಹಣೆ, ದುರಸ್ತಿ, ಬದಲಾವಣೆಯ ಅಗತ್ಯವಿದೆ. ಇದು ಅನಗತ್ಯ ವೆಚ್ಚಗಳಿಗೆ ಕಾರಣವಾಗುತ್ತಿದೆ. ಮೊಬೈಲ್ ಆಧಾರಿತ ವ್ಯವಸ್ಥೆಯಲ್ಲಿ ಹಾರ್ಡ್‌ವೇರ್ ಅಗತ್ಯ ಇಲ್ಲ. ಹೀಗಾಗಿ ನಿರ್ವಹಣೆ ವೆಚ್ಚಗಳೂ ಕಡಿಮೆ ಇರಲಿದೆ. ಆದ್ದರಿಂದ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜತೆಗೆ ಬಯೋಮೆಟ್ರಿಕ್ ಸಾಧನಗಳು ನಿರ್ದಿಷ್ಟ ಸ್ಥಳಗಳಿಗೆ ಸೀಮಿತವಾಗಿದೆ. ಕ್ಷೇತ್ರ ಸಿಬ್ಬಂದಿ ಮತ್ತು ದೂರದ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಇದರಿಂದ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 2025-26ನೇ ಸಾಲಿನ ಬಜೆಟ್‌ನಲ್ಲಿ ತಿಳಿಸಿರುವಂತೆ ಕರ್ನಾಟಕದ ಎಲ್ಲಾ 12,000 ಆರೋಗ್ಯ ಸಂಸ್ಥೆಗಳನ್ನು ಆರೋಗ್ಯ ಇಲಾಖೆಯಾದ್ಯಂತ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAMS) ಅನುಷ್ಠಾನಗೊಳಿಸಲು ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನೂತನ ಹಾಜರಾತಿ ವ್ಯವಸ್ಥೆಗೆ ಆರೋಗ್ಯ ಇಲಾಖೆ ಅಧಿಕಾರಿ, ನೌಕರರು ಸಹಕರಿಸಬೇಕು. ಜು.1 ಮೊಬೈಲ್ ಹಾಜರಾತಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಎನ್‌ಎಚ್‌ಎಂ ವೈದ್ಯರ ವೇತನ ಹೆಚ್ಚಳ: ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಯೋಜನೆಯಡಿ ಕಾರ್ಯನಿರ್ವಹಿಸುವ ವೈದ್ಯರ ಹಾಗೂ ಶುಶ್ರೂಷಕರ ವೇತನವನ್ನು ಆರೋಗ್ಯ ಇಲಾಖೆ ಪರಿಷ್ಕರಿಸಿದ್ದು, ಈ ಪರಿಷ್ಕರಣೆ ಹೊಸ ನೇಮಕಾತಿಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ಎನ್‌ಎಚ್‌ಎಂ ಯೋಜನೆಯಡಿ ಮಂಜೂರಾಗಿದ್ದ 899 ತಜ್ಞ ವೈದ್ಯರ ಹುದ್ದೆಗಳಲ್ಲಿ 305 ಹುದ್ದೆಗಳು, 1,398 ಎಂಬಿಬಿಎಸ್ ವೈದ್ಯರ ಹುದ್ದೆಗಳಲ್ಲಿ 579 ಹುದ್ದೆಗಳು, 9041 ಶುಶ್ರೂಷಕರ ಹುದ್ದೆಗಳಲ್ಲಿ 936 ಹುದ್ದೆಗಳು ಖಾಲಿ ಉಳಿದಿವೆ.
ವೇತನ ಕಡಿಮೆ ಎಂಬ ಕಾರಣಕ್ಕೆ ಸೇವೆಗೆ ಯಾರೂ ಬರುತ್ತಿಲ್ಲ. ಹೀಗಾಗಿ ವೇತನ ಪರಿಷ್ಕರಿಸಿ, ಖಾಲಿ ಹುದ್ದೆಗಳ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು. ಪ್ರಸ್ತುತ ತಜ್ಞ ವೈದ್ಯರ ವೇತನ 1.10 ಲಕ್ಷದಿಂದ 1.30 ಲಕ್ಷವಿದ್ದು, ಅದನ್ನು 1.40 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ಎಂಬಿಬಿಎಸ್ ವೈದ್ಯರಿಗಿರುವ 46,895-50,000 ಗಳಷ್ಟಿದ್ದ ವೇತನವನ್ನು 60,000 ರು.ಗಳಿಗೆ ಏರಿಕೆ ಮಾಡಲಾಗಿದೆ. ಶುಶ್ರೂಷಕರ ವೇತನ ಕನಿಷ್ಠ 14,186 ಹಾಗೂ ಗರಿಷ್ಠ 18,774 ರು.ಗಳಿಂದ 22,000 ರು.ಗೆ ಹೆಚ್ಚಳ ಮಾಡಲಾಗಿದೆ. ಅನುಭವಿ ತಜ್ಞರು ಆಯ್ಕೆಯಾದಲ್ಲಿ ಪ್ರತಿ ವರ್ಷ ಶೇ. 2.5 ರಷ್ಟು ಹೆಚ್ಚುವರಿ ವೇತನ ನೀಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
