ರಾಜ್ಯದಲ್ಲಿ ಅಡುಗೆ ಅನಿಲದ ಕೊರತೆಯ ಆತಂಕಕ್ಕೆ ಸರ್ಕಾರ ತೆರೆ ಎಳೆದಿದೆ. ತೈಲ ಕಂಪನಿಗಳೊಂದಿಗೆ ಸಭೆ ನಡೆಸಿದ ಆಹಾರ ಇಲಾಖೆ, ಗೃಹ ಬಳಕೆಯ ಎಲ್‌ಪಿಜಿ ದಾಸ್ತಾನು ಸಮರ್ಪಕವಾಗಿದ್ದು, ಸಾರ್ವಜನಿಕರು ಅನಗತ್ಯವಾಗಿ ಸಿಲಿಂಡರ್ ಬುಕ್ ಮಾಡಬಾರದು ಎಂದು ಮನವಿ ಮಾಡಿದೆ.
ಬೆಂಗಳೂರು (ಮಾ.13): ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅಡುಗೆ ಅನಿಲ (LPG) ಅಭಾವ ಉಂಟಾಗಲಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿತ್ತು. ಪ್ರಮುಖವಾಗಿ ಹೋಟೆಲ್, ಶಾಲೆ-ಕಾಲೇಜು, ದೇವಾಲಯಗಳ ದಾಸೋಹ ಭವನ, ಇಂದಿರಾ ಕ್ಯಾಂಟೀನ್ ಹಾಗೂ ಐಟಿ ಕಂಪನಿಗಳ ಕ್ಯಾಂಟೀನ್‌ಗಳಲ್ಲಿ ಗ್ಯಾಸ್ ಸಮಸ್ಯೆ ಎದುರಾದ ಬೆನ್ನಲ್ಲೇ ಜನಸಾಮಾನ್ಯರು ಆತಂಕಕ್ಕೆ ಒಳಗಾಗಿದ್ದರು. ಆದರೆ, ಈ ಎಲ್ಲಾ ಗೊಂದಲಗಳಿಗೆ ಈಗ ರಾಜ್ಯ ಸರ್ಕಾರ ತೆರೆ ಎಳೆದಿದೆ. ರಾಜ್ಯದಲ್ಲಿ ಅಡುಗೆ ಅನಿಲದ ಕೊರತೆಯಿಲ್ಲ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದೆ.
ಸಚಿವ ಮುನಿಯಪ್ಪ ನೇತೃತ್ವದಲ್ಲಿ ಮಹತ್ವದ ಸಭೆ
ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ತಡೆಯಲು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರಮುಖ ತೈಲ ಕಂಪನಿಗಳಾದ ಐಒಸಿ (IOC), ಬಿಪಿಸಿ (BPC), ಎಚ್‌ಪಿಸಿ (HPC) ಮತ್ತು ಗೈಲ್ (GAIL) ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್, ಅರುಂದಿ ಗೊಯಲ್, ದಿವ್ಯ ಸೇರಿದಂತೆ ಹಲವು ತಜ್ಞರು ಪೂರೈಕೆಯ ಸ್ಥಿತಿಗತಿ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.
ಯುದ್ಧದ ಬಿಸಿ ಇದ್ದರೂ ಪೂರೈಕೆ ಸುಗಮ
ಪ್ರಸ್ತುತ ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಸನ್ನಿವೇಶ ಇರುವುದು ನಿಜ. ಇದರ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಪೂರೈಕೆ ಸರಪಳಿಯಲ್ಲಿ ಅಲ್ಪಮಟ್ಟಿನ ವ್ಯತ್ಯಯ ಉಂಟಾಗಿದೆ. ಆದಾಗ್ಯೂ, ಭಾರತದಲ್ಲಿ ಮತ್ತು ವಿಶೇಷವಾಗಿ ಕರ್ನಾಟಕದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದಾಸ್ತಾನು ಸಮರ್ಪಕವಾಗಿದೆ. ತೈಲ ಕಂಪನಿಗಳು ಸರ್ಕಾರಕ್ಕೆ ನೀಡಿರುವ ಭರವಸೆಯಂತೆ, ಯಾವುದೇ ಕಾರಣಕ್ಕೂ ಅಡುಗೆ ಅನಿಲದ ಪೂರೈಕೆಯಲ್ಲಿ ತೊಂದರೆಯಾಗುವುದಿಲ್ಲ.
ಅನಗತ್ಯ ಬುಕಿಂಗ್ ಮಾಡಬೇಡಿ: ಸರ್ಕಾರ ಮನವಿ
ಗ್ಯಾಸ್ ಅಭಾವವಾಗಬಹುದು ಎಂಬ ಭೀತಿಯಲ್ಲಿ ಅನೇಕ ಗ್ರಾಹಕರು ಮುನ್ನೆಚ್ಚರಿಕೆ ಕ್ರಮವಾಗಿ ಅಥವಾ ಗಾಬರಿಯಿಂದ ಅನಗತ್ಯವಾಗಿ ಸಿಲಿಂಡರ್ ಬುಕಿಂಗ್ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಕೃತಕ ಬೇಡಿಕೆ ಸೃಷ್ಟಿಯಾಗುತ್ತಿದೆ. 'ಗ್ರಾಹಕರು ಆತಂಕಕ್ಕೆ ಒಳಗಾಗಿ ತುರ್ತು ಮತ್ತು ಅನಗತ್ಯ ಬುಕಿಂಗ್ ಮಾಡಬಾರದು. ಮಾರುಕಟ್ಟೆಯಲ್ಲಿ ಸಮತೋಲನ ಕಾಪಾಡಲು ಸಹಕರಿಸಬೇಕು' ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಗತ್ಯ ಸೇವೆಗಳಿಗೆ ಮೊದಲ ಆದ್ಯತೆ
ಸಾರ್ವಜನಿಕ ಆಸ್ಪತ್ರೆಗಳು, ವಿದ್ಯಾರ್ಥಿನಿಲಯಗಳು, ಅಂಗನವಾಡಿಗಳು, ಶಾಲೆ-ಕಾಲೇಜುಗಳು ಮತ್ತು ಕಾರಾಗೃಹಗಳಂತಹ ಅಗತ್ಯ ಸೇವೆಗಳನ್ನು ಒದಗಿಸುವ ಸಂಸ್ಥೆಗಳಿಗೆ ಯಾವುದೇ ಅಡೆತಡೆಯಿಲ್ಲದೆ ಎಲ್‌ಪಿಜಿ ಒದಗಿಸುವಂತೆ ತೈಲ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಬಗ್ಗೆ ಸಣ್ಣಪುಟ್ಟ ಸಮಸ್ಯೆಗಳಿದ್ದರೂ, ಅಗತ್ಯ ಸೇವೆಗಳಿಗೆ ಧಕ್ಕೆಯಾಗದಂತೆ ಸರ್ಕಾರ ನಿಗಾ ವಹಿಸಿದೆ.
ಕಾಳಸಂತೆಗೆ ಬ್ರೇಕ್: ಜಿಲ್ಲಾಧಿಕಾರಿಗಳಿಗೆ ಹೈ ಅಲರ್ಟ್
ಗ್ಯಾಸ್ ಅಭಾವದ ಸುಳ್ಳು ಸುದ್ದಿ ಹಬ್ಬಿಸಿ ಅಥವಾ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸರ್ಕಾರ ನಿರ್ಧರಿಸಿದೆ. ಅಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಕ್ರಮ ರೀಫಿಲಿಂಗ್ ಅಥವಾ ಸಾಗಾಣಿಕೆ ಕಂಡುಬಂದಲ್ಲಿ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮ ಜರುಗಿಸಲಿದೆ.
ಈ ಸಭೆಯಲ್ಲಿ ಆಹಾರ ಇಲಾಖೆ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತರಾದ ರವಿಕುಮಾರ್ ಮತ್ತು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಸಹ ಭಾಗವಹಿಸಿ, ಪರಿಸ್ಥಿತಿಯನ್ನು ವಿವರಿಸಿದರು. ಒಟ್ಟಾರೆಯಾಗಿ, ಇನ್ಫೋಸಿಸ್‌ನಂತಹ ದೊಡ್ಡ ಕಂಪನಿಗಳಲ್ಲಿ ಉಂಟಾದ ಸಣ್ಣಪುಟ್ಟ ತಾಂತ್ರಿಕ ಪೂರೈಕೆ ಸಮಸ್ಯೆ ಇಡೀ ರಾಜ್ಯಕ್ಕೆ ಅನ್ವಯಿಸುವುದಿಲ್ಲ ಎಂಬುದು ಸರ್ಕಾರದ ಸ್ಪಷ್ಟನೆಯಾಗಿದೆ.


