ಜಾಗತಿಕ ಯುದ್ಧಗಳ ಪರಿಣಾಮವಾಗಿ ಇನ್ಫೋಸಿಸ್‌ ಐಟಿ ಕಂಪನಿಯ ಬೆಂಗಳೂರು, ಚೆನ್ನೈ, ಮತ್ತು ಪುಣೆ ಕ್ಯಾಂಪಸ್‌ಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಕೊರತೆ ಉಂಟಾಗಿದೆ. ಇದರಿಂದ ಕ್ಯಾಂಟೀನ್‌ಗಳಲ್ಲಿನ ಲೈವ್ ಕೌಂಟರ್‌ಗಳನ್ನು ಮುಚ್ಚಲಾಗಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಊಟ ತರುವಂತೆ ಕಂಪನಿ ಸೂಚಿಸಿದೆ.

ಬೆಂಗಳೂರು (ಮಾ.13): ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳ ಪರಿಣಾಮ ಕೇವಲ ಇಂಧನ ಅಥವಾ ಷೇರು ಮಾರುಕಟ್ಟೆಯ ಮೇಲೆ ಮಾತ್ರವಲ್ಲದೆ, ಸಾಮಾನ್ಯ ಜನರ ದಿನನಿತ್ಯದ ಬದುಕಿನ ಮೇಲೂ ಬೀರಲು ಶುರುವಾಗಿದೆ. ಇದರ ನೇರ ಹೊಡೆತ ಈಗ ಭಾರತದ ಹೆಮ್ಮೆಯ ಐಟಿ ಸಂಸ್ಥೆ 'ಇನ್ಫೋಸಿಸ್' (Infosys) ಗೂ ತಟ್ಟಿದೆ. ಇನ್ಫೋಸಿಸ್‌ನ ಪ್ರಮುಖ ಕ್ಯಾಂಪಸ್‌ಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ (Commercial Gas) ಕೊರತೆ ಉಂಟಾಗಿದ್ದು, ಉದ್ಯೋಗಿಗಳಿಗೆ ಊಟದ ಸಮಸ್ಯೆ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ಯಾಂಟೀನ್‌ನಲ್ಲಿ ಗ್ಯಾಸ್ ಖಾಲಿ; ಲೈವ್ ಕೌಂಟರ್ ಕ್ಲೋಸ್!

ಹೌದು, ಇನ್ಫೋಸಿಸ್‌ನ ಬೆಂಗಳೂರು, ಚೆನ್ನೈ ಮತ್ತು ಪುಣೆ ಬ್ರಾಂಚ್‌ಗಳ ಕ್ಯಾಂಟೀನ್‌ನಲ್ಲಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಕಾಣಿಸಿಕೊಂಡಿದೆ. ಜಾಗತಿಕ ಮಟ್ಟದ ಯುದ್ಧದ ಸನ್ನಿವೇಶಗಳಿಂದಾಗಿ ಸರಬರಾಜು ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದ್ದು, ಕಮರ್ಷಿಯಲ್ ಗ್ಯಾಸ್ ಲಭ್ಯವಾಗುತ್ತಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯ ಕ್ಯಾಂಪಸ್‌ನಲ್ಲಿರುವ ಫುಡ್ ಕೋರ್ಟ್‌ಗಳಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಅಡುಗೆ ಮಾಡಲು ಗ್ಯಾಸ್ ಇಲ್ಲದ ಕಾರಣ, ಬಿಸಿ ಬಿಸಿಯಾಗಿ ತಿಂಡಿ-ಊಟ ಮಾಡಿಕೊಡುತ್ತಿದ್ದ 'ಲೈವ್ ಕೌಂಟರ್‌'ಗಳನ್ನು (Live Counters) ಸದ್ಯಕ್ಕೆ ಬಂದ್ ಮಾಡಲಾಗಿದೆ.

ಮಾರ್ಚ್ 12ರಿಂದಲೇ ಹೊಸ ಅಲರ್ಟ್ ಜಾರಿ

ಈ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮಹತ್ವದ ಇಮೇಲ್ ರವಾನಿಸಿದೆ. ಮಾರ್ಚ್ 12ರಿಂದಲೇ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಗ್ಯಾಸ್ ಕೊರತೆ ಇರುವುದರಿಂದ ಕ್ಯಾಂಟೀನ್‌ನಲ್ಲಿ ಸೀಮಿತ ಮೆನು ಮಾತ್ರ ಲಭ್ಯವಿರಲಿದೆ. ಅತಿ ಹೆಚ್ಚು ಬೇಡಿಕೆ ಇರುವ ಬೆರಳೆಣಿಕೆಯ ಆಹಾರ ಪದಾರ್ಥಗಳನ್ನು ಮಾತ್ರ ತಯಾರಿಸಲಾಗುತ್ತಿದೆ. ಪರಿಸ್ಥಿತಿ ತಿಳಿಯಾಗುವವರೆಗೆ ಸಹಕರಿಸುವಂತೆ ಕಂಪನಿ ಕೋರಿದೆ.

ಮನೆಯಿಂದಲೇ ಬಾಕ್ಸ್ ತರುವಂತೆ ಸೂಚನೆ

ಕ್ಯಾಂಟೀನ್‌ನಲ್ಲಿ ಪೂರ್ಣ ಪ್ರಮಾಣದ ಆಹಾರ ಸಿದ್ಧಪಡಿಸಲು ಸಾಧ್ಯವಾಗದ ಕಾರಣ, ಇನ್ಫೋಸಿಸ್ ತನ್ನ ಸಿಬ್ಬಂದಿಗೆ 'ಮನೆಯಿಂದಲೇ ಊಟದ ಬಾಕ್ಸ್ ತನ್ನಿ' ಎಂದು ಸಲಹೆ ನೀಡಿದೆ. ಒಂದು ವೇಳೆ ಮನೆಯಿಂದ ತರಲು ಸಾಧ್ಯವಾಗದಿದ್ದರೆ, ಹೊರಗಿನಿಂದ ಆಹಾರವನ್ನು ಆರ್ಡರ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಐಟಿ ಉದ್ಯೋಗಿಗಳು ಕೆಲಸದ ಒತ್ತಡದ ನಡುವೆ ಈಗ ಊಟದ ವ್ಯವಸ್ಥೆಗಾಗಿಯೂ ತಲೆಕೆಡಿಸಿಕೊಳ್ಳುವಂತಾಗಿದೆ.

ಹೊರಗಿನಿಂದ ಬರುತ್ತಿದೆ ಬೇಯಿಸಿದ ಊಟ

ಕ್ಯಾಂಪಸ್ ಒಳಗೆ ಅಡುಗೆ ಮಾಡಲು ಅಸಾಧ್ಯವಾದ ಕಾರಣ, ಕಂಪನಿಯು ಹೊರಗಿನ ಕೇಟರಿಂಗ್ ಸಂಸ್ಥೆಗಳಿಂದ ಬೇಯಿಸಿದ ಊಟವನ್ನು ತರಿಸಿ ವಿತರಿಸುತ್ತಿದೆ. ಆದರೆ, ಸಾವಿರಾರು ಉದ್ಯೋಗಿಗಳು ಇರುವ ಕ್ಯಾಂಪಸ್‌ನಲ್ಲಿ ಹೊರಗಿನ ಊಟ ಎಲ್ಲರಿಗೂ ತಲುಪುತ್ತಿಲ್ಲ ಮತ್ತು ತಾಜಾತನದ ಕೊರತೆಯೂ ಇರುತ್ತದೆ. ಹೀಗಾಗಿ, ಉದ್ಯೋಗಿಗಳು ತಮ್ಮ ಸ್ವಂತ ವ್ಯವಸ್ಥೆ ಮಾಡಿಕೊಳ್ಳುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಯುದ್ಧದ ಬಿಸಿ ಐಟಿ ಕಂಪನಿಗಳಿಗೆ ಹೇಗೆ?

ಜಾಗತಿಕ ಯುದ್ಧಗಳ ಕಾರಣದಿಂದಾಗಿ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ವಿಶೇಷವಾಗಿ ರಷ್ಯಾ-ಉಕ್ರೇನ್ ಸಂಘರ್ಷದ ನಂತರ ನೈಸರ್ಗಿಕ ಅನಿಲ ಮತ್ತು ಎಲ್‌ಪಿಜಿ ಬೆಲೆಗಳಲ್ಲಿ ಏರಿಕೆಯಾಗಿರುವುದಲ್ಲದೆ, ಪೂರೈಕೆಯೂ ಕುಂಠಿತಗೊಂಡಿದೆ. ಇದರ ಬಿಸಿ ಈಗ ಭಾರತದ ಐಟಿ ಹಬ್‌ಗಳಲ್ಲಿರುವ ಕ್ಯಾಂಟೀನ್‌ಗಳಿಗೂ ತಟ್ಟುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಒಟ್ಟಿನಲ್ಲಿ, ಗ್ಯಾಸ್ ಸಮಸ್ಯೆ ಬಗೆಹರಿಯುವವರೆಗೂ ಇನ್ಫೋಸಿಸ್ ಉದ್ಯೋಗಿಗಳಿಗೆ ಮನೆಯಿಂದ ಬರುವ 'ಲಂಚ್ ಬಾಕ್ಸ್'ಗಳೇ ಗತಿ ಎಂಬಂತಾಗಿದೆ.