5 ಕೆಜಿ ಅಕ್ಕಿ ಬದಲು ಹಣಭಾಗ್ಯ: 3ನೇ ಗ್ಯಾರಂಟಿ ಇಂದು ಆರಂಭ

ಅಕ್ಕಿ ಲಭ್ಯವಾಗದ ಕಾರಣ ಪ್ರತಿ ವ್ಯಕ್ತಿಗೆ (5 ಕೆ.ಜಿ. ಅಕ್ಕಿ ದರ) ತಿಂಗಳಿಗೆ 170 ರು.ಗಳಂತೆ ಕುಟುಂಬ ಸದಸ್ಯರ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಮಾಡುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಲಿದ್ದಾರೆ. 

Money Instead of 5 kg Rice Starts on July 10th in Karnataka grg

ಬೆಂಗಳೂರು(ಜು.10): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೂರನೇ ಗ್ಯಾರಂಟಿಯಾದ ‘ಅನ್ನಭಾಗ್ಯ’ ಯೋಜನೆಗೆ ಹಣ ವರ್ಗಾವಣೆ ಮೂಲಕ ಸೋಮವಾರ ಅಧಿಕೃತ ಚಾಲನೆ ದೊರೆಯಲಿದೆ. ಅನ್ನಭಾಗ್ಯ ಯೋಜನೆ ಅಡಿ ಅಂತ್ಯೋದಯ ಹಾಗೂ ಬಿಪಿಎಲ್‌ ಕುಟುಂಬದ ಸದಸ್ಯರಿಗೆ ಪ್ರಸ್ತುತ ವಿತರಿಸುತ್ತಿರುವ 5 ಕೆ.ಜಿ. ಅಕ್ಕಿ ಜತೆಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಲಾಗಿತ್ತು. ಅಕ್ಕಿ ಲಭ್ಯವಾಗದ ಕಾರಣ ಪ್ರತಿ ವ್ಯಕ್ತಿಗೆ (5 ಕೆ.ಜಿ. ಅಕ್ಕಿ ದರ) ತಿಂಗಳಿಗೆ 170 ರು.ಗಳಂತೆ ಕುಟುಂಬ ಸದಸ್ಯರ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಮಾಡುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಸೋಮವಾರ ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಈ ಕುರಿತ ಸಮಾರಂಭ ನಡೆಯಲಿದೆ.

‘ನಗದು ರೂಪದಲ್ಲಿ ಇರದೇ, ಹಣವು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಆಗುತ್ತದೆ. ಅಂತ್ಯೋದಯ ಅನ್ನ ಯೋಜನೆ (ಎಎವೈ), ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರ ಕುಟುಂಬದ ಮುಖ್ಯಸ್ಥರ ಖಾತೆಗಳ ಮಾಹಿತಿಯನ್ನು ಈಗಾಗಲೇ ಪಡೆಯಲಾಗಿದೆ. ಸೋಮವಾರದಿಂದ ಜುಲೈ ತಿಂಗಳ ಕಂತಿನ ಹಣವನ್ನು ವರ್ಗಾಯಿಸಲಾಗುವುದು’ ಎಂದು ಸರ್ಕಾರದ ಪ್ರಕಟಣೆ ಹೇಳಿದೆ. ಹೆಚ್ಚುವರಿ ಅಕ್ಕಿ ಸಿಗುವವರೆಗೆ ಮಾತ್ರ ಹಣ ವರ್ಗಾವಣೆ ನಡೆಯಲಿದೆ ಎಂದು ಇತ್ತೀಚೆಗೆ ಸರ್ಕಾರ ಸ್ಪಷ್ಟಪಡಿಸಿತ್ತು.

ಅನ್ನಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ: ನೀವು ಹಣ ಪಡೆಯಲು ಅರ್ಹರೇ..

ಕಾಂಗ್ರೆಸ್ಸಿನ 5 ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಹಾಗೂ ‘ಗೃಹಜ್ಯೋತಿ’ ಯೋಜನೆಗಳು ಈಗಾಗಲೇ ಪ್ರಾರಂಭವಾಗಿವೆ.

ಶೇ.82ರಷ್ಟು ಮಂದಿ ತಕ್ಷಣ ಅರ್ಹ:

ಒಟ್ಟು ಬಿಪಿಎಲ್‌, ಎಎವೈ ಕಾರ್ಡ್‌ ಸಂಖ್ಯೆ 1,28,16,253 (1.28 ಕೋಟಿ). ಈ ಪೈಕಿ ಆಧಾರ್‌ ಲಿಂಕ್‌ ಆಗಿರುವ ಕಾರ್ಡ್‌ 1,28,13,048 (ಶೇ.99), ಆಧಾರ್‌ ಹಾಗೂ ಬ್ಯಾಂಕ್‌ ಖಾತೆ ಲಿಂಕ್‌ ಆಗಿರುವ ಕಾರ್ಡ್‌ 1.06 (ಶೇ.82) ಕೋಟಿಯಷ್ಟಿವೆ. ಈ ಶೇ.82 ಮಂದಿಗೆ ತಕ್ಷಣ ನಗದು ವರ್ಗಾವಣೆಯಾಗಲಿದೆ. ಉಳಿದಂತೆ 22 ಲಕ್ಷ (ಶೇ.18) ಪಡಿತರ ಚೀಟಿಗಳಿಗೆ ಆಧಾರ್‌ ಹಾಗೂ ಬ್ಯಾಂಕ್‌ ಖಾತೆ ಲಿಂಕ್‌ ಬಾಕಿ ಇದ್ದು, ಲಿಂಕ್‌ ಆದ ತಕ್ಷಣ ಹಣ ವರ್ಗಾವಣೆ ಮಾಡಲಾಗುವುದು.

ಇನ್ನು ಆಧಾರ್‌ ಲಿಂಕ್‌ ಬಾಕಿ ಇರುವ ಕಾರ್ಡ್‌ 3,016 ಮಾತ್ರ ಇದೆ. ಆಧಾರ್‌ ಇ-ಕೆವೈಸಿ ಮಾಡಿಸದಿದ್ದರೆ ಇಂತಹವರು ಆಹಾರ ಧಾನ್ಯ ಹಾಗೂ ನೇರ ನಗದು ವರ್ಗಾವಣೆ ಎರಡಕ್ಕೂ ಅರ್ಹರಾಗುವುದಿಲ್ಲ. ಹೀಗಾಗಿ ತಕ್ಷಣ ಸ್ಥಳೀಯ ಆಹಾರ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಬೇಕು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶೇ.94ರಷ್ಟು ಹಣ ಮಹಿಳೆಯರ ಖಾತೆಗೆ

ಕುಟುಂಬದ ಮುಖ್ಯಸ್ಥರ ಪೈಕಿ ಶೇ.94 ರಷ್ಟುಮಹಿಳೆಯರು, ಶೇ.5ರಷ್ಟುಪುರುಷರು ಇದ್ದಾರೆ. ಈ ಮುಖ್ಯಸ್ಥರ ಖಾತೆಗೆ 5 ಕೆ.ಜಿ. ಅಕ್ಕಿ ಬದಲಿಗೆ ಪ್ರತಿ ಫಲಾನುಭವಿಗೆ ಪ್ರತಿ ಕೆಜಿಗೆ 34 ರು.ಗಳಂತೆ 170 ರು. ಹಣ ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಆಗಲಿದೆ.

ಅಂತ್ಯೋದಯ ಅನ್ನ ಯೋಜನೆ ಕಾರ್ಡ್‌ನಲ್ಲಿ 3 ಅಥವಾ ಅದಕ್ಕಿಂತ ಕಡಿಮೆ ಸದಸ್ಯರಿದ್ದರೆ ಅವರಿಗೆ ಈಗಾಗಲೇ ಪ್ರತಿ ತಿಂಗಳು 35 ಕೆ.ಜಿ. ಆಹಾರಧಾನ್ಯ ನೀಡುತ್ತಿರುವುದರಿಂದ ಅಂತಹ ಕುಟುಂಬಗಳಿಗೆ ನಗದು ವರ್ಗಾವಣೆ ಸೌಲಭ್ಯ ನೀಡಲಾಗುವುದಿಲ್ಲ.

ಇನ್ನು ಅಂತ್ಯೋದಯ ಕಾರ್ಡ್‌ನ ಕುಟುಂಬದಲ್ಲಿ 4 ಸದಸ್ಯರಿದ್ದರೆ 175 ರು., 5 ಸದಸ್ಯರಿದ್ದರೆ 510 ರು., 6 ಮಂದಿ ಇದ್ದರೆ 850 ರು. ನೀಡಲಾಗುವುದು. ಹೆಚ್ಚಿನ ಸದಸ್ಯರಿದ್ದರೆ ಇದೇ ಅನುಪಾತ ಮುಂದುವರೆಯಲಿದೆ ಎಂದು ಆಹಾರ ಇಲಾಖೆ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಕುಟುಂಬದ ಮುಖ್ಯಸ್ಥರನ್ನು ಗುರುತಿಸಿ ಆಧಾರ್‌ ಜೋಡಣೆ ಮಾಡಿರುವ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್‌ ಖಾತೆಯನ್ನು ಹೊಂದಿರುವ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯಕ್ಕೆ ಅರ್ಹವಾಗಲಿವೆ. ಕಳೆದ ಮೂರು ತಿಂಗಳಲ್ಲಿ ಪಡಿತರ ಆಹಾರ ಪಡೆಯದವರು, ಪಡಿತರ ಚೀಟಿಯಲ್ಲಿ ಮುಖ್ಯಸ್ಥರನ್ನು ಸೂಚಿಸದ ಅಥವಾ ಒಂದಕ್ಕಿಂತ ಹೆಚ್ಚು ಮಂದಿ ಮುಖ್ಯಸ್ಥರನ್ನು ತೋರಿಸಿರುವವರನ್ನು ಸೌಲಭ್ಯದಿಂದ ಹೊರಗಿಡಲಾಗಿದೆ. ಅವರು ಸಂಬಂಧಪಟ್ಟಸ್ಥಳೀಯ ಅಧಿಕಾರಿಗಳನ್ನು ಭೇಟಿ ಮಾಡಿ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

* ಒಟ್ಟು ಬಿಪಿಎಲ್‌, ಎಎವೈ ಕಾರ್ಡ್‌ ಸಂಖ್ಯೆ- 1,28,16,253 (1.28 ಕೋಟಿ)
* ಆಧಾರ್‌ ಲಿಂಕ್‌ ಆಗಿರುವ ಕಾರ್ಡ್‌- 1,28,13,048 (ಶೇ.99)
* ಆಧಾರ್‌ ಹಾಗೂ ಬ್ಯಾಂಕ್‌ ಖಾತೆ ಲಿಂಕ್‌ ಆಗಿರುವ ಕಾರ್ಡ್‌ - 1.06 ಕೋಟಿ (ಶೇ.82)
* ಆಧಾರ್‌ ಹಾಗೂ ಬ್ಯಾಂಕ್‌ ಖಾತೆ ಲಿಂಕ್‌ ಬಾಕಿ ಇರುವ ಕಾರ್ಡ್‌ - 22 ಲಕ್ಷ (ಶೇ.18)
* ಆಧಾರ್‌ ಲಿಂಕ್‌ ಬಾಕಿ ಇರುವ ಕಾರ್ಡ್‌: 3,016
* ಆಧಾರ್‌, ಬ್ಯಾಂಕ್‌ ಖಾತೆ ಲಿಂಕ್‌ ಆಗದವರಿಗೆ ಲಿಂಕ್‌ ಬಳಿಕ ಹಣ ವರ್ಗಾವಣೆ
* ಹಣ ವರ್ಗಾವಣೆಯಾಗುವ ಫಲಾನುಭವಿಗಳಲ್ಲಿ ಶೇ.94 ರಷ್ಟುಮಹಿಳೆಯರು, ಶೇ.5 ರಷ್ಟು ಪುರುಷರು

ಅನ್ನಭಾಗ್ಯ ಯೋಜನೆಗೆ ಮುಹೂರ್ತ ಫಿಕ್ಸ್: ಯಾರಿಗೆಲ್ಲಾ ಸಿಗುತ್ತೆ ದುಡ್ಡು ?

ಏನಿದು ಯೋಜನೆ?

ಬಿಪಿಎಲ್‌ ಪಡಿತರದಾರರಿಗೆ 10 ಕೆ.ಜಿ. ಅಕ್ಕಿ ನೀಡುವುದಾಗಿ ಕಾಂಗ್ರೆಸ್‌ ‘ಗ್ಯಾರಂಟಿ’ ಭರವಸೆ ನೀಡಿತ್ತು. ಅಕ್ಕಿ ಹೊಂದಿಸಲಾಗದ ಕಾರಣ ಕೆ.ಜಿ.ಗೆ 34 ರು.ನಂತೆ 5 ಕೆ.ಜಿ. ಅಕ್ಕಿಯ ಬೆಲೆಯನ್ನು ಪಡಿತರದಾರರ ಬ್ಯಾಂಕ್‌ ಖಾತೆಗೆ ವರ್ಗಾಯಿಸುತ್ತಿದೆ.

ಯಾರಿಗೆ ಸಿಗುತ್ತೆ?

- ಬಿಪಿಎಲ್‌, 4ಕ್ಕಿಂತ ಹೆಚ್ಚು ಜನರಿರುವ ಅಂತ್ಯೋದಯ ಕುಟುಂಬಗಳು
- ಪಡಿತರ ಚೀಟಿಯಲ್ಲಿ ‘ಕುಟುಂಬದ ಮುಖ್ಯಸ್ಥ’ರನ್ನು ಸೂಚಿಸಿದವರು
- ಆಧಾರ್‌ ಲಿಂಕ್‌ ಮಾಡಿಸಿ ಸಕ್ರಿಯ ಬ್ಯಾಂಕ್‌ ಖಾತೆ ಹೊಂದಿದವರು

ಯಾರಿಗಿಲ್ಲ?

- ಎಪಿಎಲ್‌, 3ಕ್ಕಿಂತ ಕಡಿಮೆ ಸದಸ್ಯರಿರುವ ಅಂತ್ಯೋದಯ ಕಾರ್ಡುದಾರರು
- ಕಳೆದ 3 ತಿಂಗಳಿಂದ ಪಡಿತರ ಅಂಗಡಿಯಿಂದ ಆಹಾರ ಧಾನ್ಯ ಪಡೆಯದವರು
- ಕುಟುಂಬದ ಮುಖ್ಯಸ್ಥರ ಸೂಚಿಸದವರು, 1ಕ್ಕಿಂತ ಹೆಚ್ಚು ಮುಖ್ಯಸ್ಥರಿರುವವರು

Latest Videos
Follow Us:
Download App:
  • android
  • ios