5 ಕೇಜಿ ಹೆಚ್ಚುವರಿ ಅಕ್ಕಿ ಬದಲಿಗೆ ಈವರೆಗೆ .301 ಕೋಟಿ ವರ್ಗಾವಣೆ, ಇನ್ನು 8 ದಿನದಲ್ಲಿ ಎಲ್ಲ ಫಲಾನುಭವಿಗಳಿಗೂ ಸಿಗಲಿದೆ ಹಣ
ಬೆಂಗಳೂರು(ಜು.16): ರಾಜ್ಯ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವದ ಗ್ಯಾರಂಟಿಗಳಲ್ಲಿ ಒಂದಾದ ‘ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿಯ ಬದಲಿಗೆ ಈವರೆಗೆ 17 ಜಿಲ್ಲೆಗಳ 1.83 ಕೋಟಿಗೂ ಅಧಿಕ ಫಲಾನುಭವಿಗಳಿಗೆ 301 ಕೋಟಿ ರು.ಗಳಿಗೂ ಹೆಚ್ಚು ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 10ರಂದು ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಅದರಂತೆ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕುಟುಂಬದ ಪ್ರತಿ ಸದಸ್ಯರ ಬ್ಯಾಂಕ್ ಖಾತೆಗಳಿಗೆ ತಲಾ 170 ರು.ನಂತೆ ಹಣವನ್ನು ಡಿಬಿಟಿ ಮೂಲಕ ಪಾವತಿಸಲಾಗುತ್ತಿದೆ.
ಅನ್ನಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ: ನೀವು ಹಣ ಪಡೆಯಲು ಅರ್ಹರೇ..
ಆಹಾರ ಇಲಾಖೆಯ ಮಾಹಿತಿಯಂತೆ ಇಲ್ಲಿಯವರೆಗೆ ಮೈಸೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಾಗಲಕೋಟೆ, ಚಿತ್ರದುರ್ಗ, ಯಾದಗಿರಿ, ದಾವಣಗೆರೆ, ಕೊಪ್ಪಳ, ಬಳ್ಳಾರಿ, ಚಿಕ್ಕಮಗಳೂರು ಸೇರಿದಂತೆ ಒಟ್ಟು 17 ಜಿಲ್ಲೆಗಳ 51.26 ಲಕ್ಷ ಕಾರ್ಡುಗಳ 1.83 ಕೋಟಿಗೂ ಅಧಿಕ ಫಲಾನುಭವಿಗಳಿಗೆ 301 ಕೋಟಿ ರು.ಗಳಿಗೂ ಹೆಚ್ಚು ಹಣವನ್ನು ಪಾವತಿ ಮಾಡಲಾಗಿದೆ ಎಂದು ಆಹಾರ ಇಲಾಖೆ ಆಯುಕ್ತೆ ಎಂ.ಕನಗವಲ್ಲಿ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಉಳಿದ ಜಿಲ್ಲೆಗಳಿಗೆ ಶೀಘ್ರ:
ರಾಯಚೂರು, ಬೆಳಗಾವಿ ಜಿಲ್ಲೆಯ 11.66 ಲಕ್ಷಕ್ಕೂ ಅಧಿಕ ಪಡಿತರ ಕಾರ್ಡುಗಳ 40.27 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಒಟ್ಟು 66.27 ಕೋಟಿ ರು.ಗಳು ಎರಡು ದಿನಗಳೊಳಗೆ ಡಿಬಿಟಿ ಮೂಲಕ ಸಂದಾಯವಾಗಲಿವೆ. ಹಾಗೆಯೇ ಮುಂದಿನ ಐದು ದಿನಗಳಲ್ಲಿ ಚಾಮರಾಜನಗರ, ಮಂಡ್ಯ, ಕೊಡಗು, ಶಿವಮೊಗ್ಗ ಜಿಲ್ಲೆಯ 10.21 ಲಕ್ಷಕ್ಕೂ ಹೆಚ್ಚು ಕಾರ್ಡುಗಳ 34.21 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ 55.53 ಕೋಟಿ ರು. ಪಾವತಿಯಾಗಲಿದೆ.
ಹಾಸನ, ವಿಜಯಪುರ, ಹಾವೇರಿ, ಚಿಕ್ಕಬಳ್ಳಾಪುರ ಜಿಲ್ಲೆಗಳ 12.61 ಲಕ್ಷಕ್ಕೂ ಅಧಿಕ ಕಾರ್ಡುಗಳ 44.23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 72.37 ಕೋಟಿ ರು.ಗಳು ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಎಂಟು ದಿನಗಳೊಳಗೆ ಜಮೆಯಾಗಲಿದೆ. ಹಾಗೆಯೇ ವಿಜಯನಗರ, ತುಮಕೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಫಲಾನುಭವಿಗಳಿಗೂ ನಾಲ್ಕು ದಿನಗಳಲ್ಲಿ ಹೆಚ್ಚುವರಿ ಐದು ಕೆಜಿ ಅಕ್ಕಿಯ ಹಣ ಪಾವತಿಯಾಗಲಿದೆ ಎಂದು ಕನಗವಲ್ಲಿ ತಿಳಿಸಿದ್ದಾರೆ.
ಗ್ಯಾರಂಟಿಗಳು ಬಿಟ್ಟರೇ, ಯಾವುದೇ ಅಭಿವೃದ್ಧಿ ಕಾರ್ಯಗಳು ಬಜೆಟ್‌ನಲ್ಲಿ ಇರುವುದಿಲ್ಲ: ಆರ್.ಅಶೋಕ್
ನಿಮ್ಮ ಖಾತೆಗೆ ಹಣ ಬಂತಾ? ಈ ಲಿಂಕ್‌ನಲ್ಲಿ ಪರಿಶೀಲಿಸಿ
ಆಹಾರ ಇಲಾಖೆಯ ವೆಬ್‌ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಕಂದಾಯ ವಲಯವಾರು ಮೂರು ವಿಭಾಗಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆ ಯಾವ ವಿಭಾಗದಲ್ಲಿದೆ ಎಂಬುದನ್ನು ಗುರುತಿಸಿ, ಬಳಿಕ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಂತರ ಮತ್ತೊಂದು ಪುಟ ತೆರೆದುಕೊಳುತ್ತದೆ. ಅದರಲ್ಲಿ ನಗದು ವರ್ಗಾವಣೆಯ ಸ್ಥಿತಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.
ಆನಂತರ ವರ್ಷ, ತಿಂಗಳು ಮತ್ತು ರೇಷನ್ ಕಾರ್ಡ್ ನಂಬರ್ ಎಂಬ ಮೂರು ಕಾಲಂ ಇರುತ್ತದೆ. ವರ್ಷ 2023, ತಿಂಗಳು ಜುಲೈ ಮತ್ತು ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ರೇಷನ್ ಕಾರ್ಡ್‌ನಲ್ಲಿರುವ ಮನೆಯ ಯಜಮಾನಿ ಅಥವಾ ಯಜಮಾನನ ಹೆಸರು, ಆಧಾರ್‌ಕಾರ್ಡ್ ನಂಬರ್ ನಿಮ್ಮ ಮನೆಯಲ್ಲಿ ಎಷ್ಟುಸದಸ್ಯರಿದ್ದಾರೆ ಅಕ್ಕಿಯ ಪ್ರಮಾಣ ಮತ್ತು ನಿಮಗೆ ಬಂದಿರುವ ಮೊತ್ತವನ್ನು ತೋರಿಸುತ್ತದೆ.
ಇಲ್ಲವೇ ಮೊಬೈಲ್‌ನ ಪ್ಲೇ ಸ್ಟೋರ್‌ನಲ್ಲಿ ‘ಡಿಬಿಟಿ ಕರ್ನಾಟಕ’ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹಣ ವರ್ಗಾವಣೆ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
