ಸ್ವತಃ ಸಚಿವರೇ ಭರವಸೆ ನೀಡಿದರೂ ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್‌ಗೇಟನ್ನು ತೆರವು ಮಾಡಿಲ್ಲ ಎಂದು ಕೋಪಗೊಂಡು ಶಾಸಕಿ ಕರೆಮ್ಮ ಜಿ.ನಾಯಕ ಅವರು ಟೋಲ್‌ಗೇಟ್ ಮುಂದೆಯೇ ಅಹೋರಾತ್ರಿ ಧರಣಿ ನಡೆಸುತ್ತಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.
ದೇವದುರ್ಗ (ಜು.20): ಸ್ವತಃ ಸಚಿವರೇ ಭರವಸೆ ನೀಡಿದರೂ ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್‌ಗೇಟನ್ನು ತೆರವು ಮಾಡಿಲ್ಲ ಎಂದು ಕೋಪಗೊಂಡು ಶಾಸಕಿ ಕರೆಮ್ಮ ಜಿ.ನಾಯಕ ಅವರು ಟೋಲ್‌ಗೇಟ್ ಮುಂದೆಯೇ ಅಹೋರಾತ್ರಿ ಧರಣಿ ನಡೆಸುತ್ತಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.
ರಾಯಚೂರಿನಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಿಂಥಣಿ ಸೇತುವೆಯಿಂದ ಕಲಮಲಾ ಕ್ರಾಸ್ ರಸ್ತೆಯ ಮಧ್ಯೆ ಕಾಕರಗಲ್‌ನಲ್ಲಿ 40 ಕಿ.ಮೀ. ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ 2 ಟೋಲ್ ಗೇಟುಗಳನ್ನು ಹಾಕಿ ಕರ ವಸೂಲಿ ಮಾಡುತ್ತಿದ್ದಾರೆ ಎಂದು ಶಾಸಕಿ ಸಭೆಯ ಅಧ್ಯಕ್ಷತೆ ವಹಿಸಿದ ಡಾ। ಶರಣ ಪ್ರಕಾಶ ಪಾಟೀಲ ಅವರ ಗಮನ ಸೆಳೆದು ನೆಲದ ಮೇಲೆ ಧರಣಿ ಕುಳಿತ್ತಿದ್ದರು. ನೀವು ಸಭೆ ಮುಗಿಸಿ ಹೋಗುವುದರೊಳಗೆ ಟೋಲ್ ತೆಗೆಸುವೆ ಎಂದು ಸಚಿವರು ಭರವಸೆ ನೀಡಿದ್ದರು.
ಸಭೆ ಬಳಿಕ ತೆರಳುತ್ತಿದ್ದ ಶಾಸಕಿಗೆ ಕಾಕರಗಲ್ ಟೋಲ್‌ಗೇಟ್‌ನಲ್ಲಿ ಇನ್ನೂ ಶುಲ್ಕ ವಸೂಲಿ ಮಾಡುತ್ತಿರುವುದು ಕಾಣಿಸಿದೆ. ಇದರಿಂದ ಆಕ್ರೋಶಗೊಂಡ ಅವರು ತಮ್ಮ ಬೆಂಬಲಿಗರೊಂದಿಗೆ ಅಹೋರಾತ್ರಿ ಧರಣಿ ಕುಳಿತರು. ರಸ್ತೆಯಲ್ಲಿಯೇ ಮಲಗಿ ಪ್ರತಿಭಟಿಸಿದ್ದಾರೆ. ಅನೇಕ ಬಾರಿ ಟೋಲ್‌ಗೇಟ್‌ಗಳ ರದ್ದುಪಡಿಸಲು ಒತ್ತಾಯಿಸಿದರೂ ಪ್ರಯೋಜನವಾಗುತ್ತಿಲ್ಲ. ಉಸ್ತುವಾರಿ ಸಚಿವರ ಭರವಸೆಯೂ ಸುಳ್ಳಾಗಿದೆ. ಅಧಿಕಾರಿಗಳು ಕೂಡ ಒಬ್ಬ ಮಹಿಳೆ ಮತ್ತು ವಿರೋಧ ಪಕ್ಷದ ಶಾಸಕಿ ಆಗಿರುವುದರಿಂದ ನನಗೆ ಪರೋಕ್ಷವಾಗಿ ಕಿರುಕುಳ ನೀಡುತ್ತಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಿರುವೆ. ಸರ್ಕಾರ ಕೇವಲ ಭರವಸೆ ನೀಡುತ್ತದೆ. ಆದರೆ ಸಮಸ್ಯೆಗಳು ಜೀವಂತವಾಗಿವೆ ಎಂದು ಶಾಸಕಿ ದೂರಿದರು.
ಇಡೀ ರಾತ್ರಿ ಒಬ್ಬ ಮಹಿಳೆ ಅದರಲ್ಲೂ ಶಾಸಕಿ ರಸ್ತೆ ಮೇಲೆ ಮಲಗಿದ್ದರೂ ಜಿಲ್ಲಾಮಟ್ಟದ ಅಧಿಕಾರಿಗಳಾಗಲಿ, ಆಡಳಿತಾರೂಢ ಜನಪ್ರತಿನಿಧಿಗಳಾಗಲಿ ಗಮನಿಸದಿರುವುದು ನೋವಿನ ಸಂಗತಿ. ಈ ರಸ್ತೆ ಹೆದ್ದಾರಿಯಲ್ಲ. ದೊಡ್ಡ ಉದ್ದಿಮೆಗಳಾಗಲಿ, ಕೈಗಾರಿಗಳಾಗಲಿ ಇಲ್ಲ. ಇಲ್ಲಿ ರೈತರು, ಬಡ ಕುಟುಂಬಗಳು, ಮಧ್ಯಮ ಕುಟುಂಬಗಳು ಮಾತ್ರ ಸಂಚಾರ ಮಾಡುತ್ತಾರೆ. ಆದರೆ ಕೇವಲ 40 ಕಿ.ಮೀ ಅಂತರದಲ್ಲಿಯೇ 2 ಟೋಲ್‌ಗೇಟ್‌ಗಳನ್ನು ಹಾಕಲಾಗಿದೆ. ಆದರೆ ಕಲಬರುಗಿ ರಸ್ತೆ ಮಾರ್ಗದಲ್ಲಿ ಯಾವುದೇ ಟೋಲ್ ಗೇಟ್‌ಗಳಿಲ್ಲ. ಆದರೆ ನಮ್ಮಲ್ಲಿ ನಿರ್ಮಿಸಿ ಕರವಸೂಲಿ ನೆಪದಲ್ಲಿ ಬಡವರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಕರೆಮ್ಮ ಆಕ್ರೋಶ ವ್ಯಕ್ತಪಡಿಸಿದರು.
