ಜಿಎಸ್‌ಟಿ ಕಾನೂನು ಅಡಿ ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟು ಮಾಡಲು ಕೆಲ ರಿಯಾಯಿತಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಕೂಡಲೇ ವ್ಯಾಪಾರಸ್ಥರಿಗೆ ಪರಿಹಾರ ಒದಗಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಬೆಂಗಳೂರು (ಜು.20): ಜಿಎಸ್‌ಟಿ ಕಾನೂನು ಅಡಿ ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟು ಮಾಡಲು ಕೆಲ ರಿಯಾಯಿತಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಕೂಡಲೇ ವ್ಯಾಪಾರಸ್ಥರಿಗೆ ಪರಿಹಾರ ಒದಗಿಸಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ರಾಜ್ಯದಲ್ಲಿ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಸ್ಥರಿಗೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್‌ಟಿ ಶಾಕ್ ಕೊಟ್ಟಿರುವುದು ಅತ್ಯಂತ ಖಂಡನೀಯ.
ಈ ವಿಚಾರದಲ್ಲಿ ದುಡುಕಿ ಹಲವು ವರ್ಷದ ತೆರಿಗೆ, ಅದರ ಮೇಲೆ ಬಡ್ಡಿ ಮತ್ತು ಇತರೆ ಚಾರ್ಜ್ ಹಾಕಿ ಬೀದಿ ಬದಿ ಸಣ್ಣ ವ್ಯಾಪಾರಸ್ಥರ ಮೇಲೆ ದೊಡ್ಡ ಹೊರೆ ಹೊರೆಸಿ ಅವರ ವ್ಯಾಪಾರ ಮುಚ್ಚುವ ಪರಿಸ್ಥಿತಿಗೆ ತಂದಿರುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಸಂಬಂಧಪಟ್ಟ ಸಣ್ಣ ವ್ಯಾಪಾರಿಗಳ ಪ್ರತಿನಿಧಿಗಳನ್ನು ಕರೆದು ಚರ್ಚಿಸಿ ಅವರಿಗೆ ಎಲ್ಲಾ ರೀತಿಯ ರಿಯಾಯಿತಿ ಕೊಡಬೇಕು. ಕರ ಸಮಾಧಾನ ಯೋಜನೆ ಅಡಿ ಯಾವ ರೀತಿ ತೆರಿಗೆದಾರರಿಗೆ ಸಹಾಯ ಮಾಡುತ್ತೇವೆಯೋ ಅದೇ ರೀತಿ ಇವರಿಗೂ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬೇರೆ ರಾಜ್ಯಗಳಲ್ಲಿ ಈ ವಿಚಾರದಲ್ಲಿ ಏನೆಲ್ಲಾ ಕ್ರಮ ತೆಗೆದುಕೊಂಡಿದ್ದಾರೆ. ಸಣ್ಣ ವ್ಯಾಪಾರಸ್ಥರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಆ ಕ್ರಮ ಇಲ್ಲಿ ಕೂಡ ಅನ್ವಯಿಸಬೇಕು. ರಾಜ್ಯದಲ್ಲಿ ಹಣಕಾಸಿನ ತೊಂದರೆಯಾಗಿ ಬೊಕ್ಕಸ ಖಾಲಿಯಾಗಿರುವುದು ಮತ್ತು ಈ ವರ್ಷದ ಮೊದಲನೇ ತ್ರೈಮಾಸಿಕ ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಗಾಬರಿಯಿಂದ ತೀವ್ರವಾದ ಕ್ರಮಕ್ಕೆ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಉನ್ನತ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದುಳಿದವರ ಹೊಟ್ಟೆ ತುಂಬುವುದಿಲ್ಲ: ದಲಿತರು ಮತ್ತು ಹಿಂದುಳಿದವರ ಅಭಿವೃದ್ಧಿ ಕೇವಲ ಬಾಯಿ ಮಾತಿನ ಘೋಷಣೆಯಿಂದ ಆಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಕೇವಲ ಘೋಷಣೆಯಿಂದ ಹೊಟ್ಟೆ ತುಂಬುತ್ತದೆ ಎಂದು ತಿಳಿದುಕೊಂಡಿದ್ದಾರೆ. ಆ ಸಮುದಾಯಗಳಿಗೆ ಮೀಸಲು ಮಾಡಿದ ಹಣವನ್ನು ಸರಿಯಾಗಿ ನೀಡಲಿ ಎಂದು ಒತ್ತಾಯಿಸಿದರು. ಅವರು ಗುರುವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಬಗ್ಗೆ ಬಹಳ ಮಾತನಾಡುತ್ತಾರೆ. ಅವರು ಎಸ್ಸಿ ಎಸ್ಟಿಗೆ ಮೀಸಲಿಟ್ಟ ಹಣವನ್ನು ಸರಿಯಾಗಿ ಕೊಟ್ಡರೆ ಸಾಕು. ಅದೇ ರೀತಿ ಹಿಂದುಳಿದವರ ಯೋಜನೆಗಳಿಗೆ ಟಾರ್ಗೆಟ್ ಕೊಟ್ಟಿಲ್ಲ.
ಎಂಟು ಒಬಿಸಿ ನಿಗಮಗಳಿವೆ. ಅವುಗಳಿಗೆ ಹಣವನ್ನೇ ನೀಡಿಲ್ಲ. ಒಬಿಸಿಯನ್ನು ಉದ್ದಾರ ಮಾಡುತ್ತೇವೆ ಎನ್ನುತ್ತಾರೆ. ಇರುವ ಯೋಜನೆಗಳಿಗೆ ಹಣ ಕೊಡುವುದಿಲ್ಲ. ದಲಿತರ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಕಡಿತ ಮಾಡುತ್ತಾರೆ. ಇದರ ಬಗ್ಗೆ ಮುಖ್ಯಮಂತ್ರಿ ಚರ್ಚೆ ಮಾಡಲಿ, ಯಾರೋ ಅಧ್ಯಕ್ಷರಾಗುವುದರಿಂದ ಏನೂ ಆಗುವುದಿಲ್ಲ. ಆ ಜನಾಂಗ ಅಭಿವೃದ್ಧಿ ಆಗಬೇಕು. ಜನಾಂಗ ಅಭಿವೃದ್ಧಿ ಆಗಬೇಕೆಂದರೆ ಅವರಿಗೆ ಯೋಜನೆಗಳು ತಲುಪಬೇಕು. ಕೇವಲ ಬಾಯಿ ಮಾತಿನಿಂದ ಘೋಷಣೆಯಿಂದ ಏನೂ ಆಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಕೇವಲ ಘೋಷಣೆಯಿಂದ ಹೊಟ್ಟೆ ತುಂಬುತ್ತದೆ ಎಂದು ತಿಳಿದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
