ಕಾಲ್ತುಳಿತ ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಬೆಂಗಳೂರು (ಜು.20): ಆರ್‌ಸಿಬಿ ವಿಜಯೋತ್ಸವ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಕರ್ನಾಟಕದ ಕ್ರೀಡಾ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ. ಈ ವಿಷಯವಾಗಿ ಪೊಲೀಸರು ಮತ್ತು ರಾಜ್ಯ ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಸರ್ಕಾರವು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಕೈತೊಳೆದುಕೊಂಡು ಕುಳಿತಿದೆ. ಅಮಾಯಕ ಜನರ ಪ್ರಾಣಕ್ಕೆ ಕಾರಣವಾದ ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಬೆರಸದೆ ಸಿಬಿಐ ತನಿಖೆಗೆ ವಹಿಸಿಸಬೇಕು ಎಂದು ಅಶೋಕ್ ಮನವಿ ಮಾಡಿದ್ದಾರೆ.
ಹೊಣೆಯಿಂದ ನುಣುಚಿಕೊಳ್ಳಲೆತ್ನ: ಐಪಿಎಲ್ ವಿಜಯೋತ್ಸವ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಪ್ರಾಣ ಕಳೆದುಕೊಂಡ 11 ಅಮಾಯಕರ ಕುಟುಂಬದವರಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ದುರಂತಕ್ಕೆ ಪೊಲೀಸ್ ಇಲಾಖೆಯೇ ಕಾರಣ ಎಂದು ಬಿಂಬಿಸುವ ಮೂಲ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಹೀಗಾಗಿ ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸಿಎಂಗೆ ಪತ್ರ: ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತ ದುರಂತಕ್ಕೆ ಕಾರಣವಾದ ಲೋಪ, ಘಟನೆ ಬಳಿಕ ಸರ್ಕಾರದ ಕ್ರಮಗಳಿಂದ ಉಂಟಾಗಿರುವ ಸಂಶಯ ನಿವಾರಣೆ. ಮುಂದೆ ಈ ರೀತಿ ಆಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಮೂರು ದಿನಗಳ ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ. ದುರ್ಘಟನೆಗೆ ಸಂಬಂಧಿಸಿ ಆಡಳಿತದಲ್ಲಿ ಆಗಿರುವ ಲೋಪ, ಘಟನೆ ಬಳಿಕ ಸರ್ಕಾರದ ಕ್ರಮ ಅನೇಕ ಸಂಶಯ ಹುಟ್ಟುಹಾಕಿದೆ. ಕಾಲ್ತುಳಿತಕ್ಕೆ ಕಾರಣರಾದ ಬಲಾಢ್ಯರನ್ನು ರಕ್ಷಿಸಲಾಗುತ್ತಿದೆ. ಸತ್ಯವನ್ನು ಮರೆಮಾಚಲು ಮೂರು ರೀತಿಯ ತನಿಖೆ ಮಾಡಲಾಗುತ್ತಿದೆ. ಅಸಹಾಯಕ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
ದುರ್ಘಟನೆಯು ಸಾರ್ವಜನಿಕ ಸುರಕ್ಷತೆ, ಗುಂಪು ನಿಯಂತ್ರಣ, ಕ್ರೀಡಾ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಈ ದುರಂತ ಜನರಲ್ಲಿ ಆತಂಕ ಮತ್ತು ಕಳವಳ ಉಂಟುಮಾಡಿದೆ. ಕಾಲ್ತುಳಿತ ಘಟನೆಗೆ ಕಾರಣವಾದ ಸಂದರ್ಭಗಳ ಸಂಪೂರ್ಣ ತನಿಖೆ, ಜನಜಂಗುಳಿ ನಿಯಂತ್ರಣ ಮತ್ತು ಸುರಕ್ಷತಾ ಕ್ರಮಗಳ ಬಲವರ್ಧನೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಪರಿಹಾರದ ವ್ಯವಸ್ಥೆ, ಭವಿಷ್ಯದಲ್ಲಿ ಇಂಥ ಘಟನೆ ತಪ್ಪಿಸಲು ರಾಜ್ಯ ಸರ್ಕಾರ ಕೈಗೊಳ್ಳುವ ಯೋಜನೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಲು ತುರ್ತು ಅಧಿವೇಶನ ಕರೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ. ಈ ತುರ್ತು ಅಧಿವೇಶನ ರಾಜ್ಯ ಸರ್ಕಾರದ ಬದ್ಧತೆ ಮತ್ತು ದುರಂತದಿಂದ ಕಲಿತ ಪಾಠಗಳ ಆಧಾರದಲ್ಲಿ ಭವಿಷ್ಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಹಾಯಕವಾಗಲಿದೆ. ಹಾಗೆಯೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
