ಬೆಳಗಾವಿ ಜಿಲ್ಲಾಧಿಕಾರಿಗಳ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರು ಡಿಸಿ ಪರವಾಗಿ ನಿಂತಿದ್ದು, ಕಾನೂನು ಹೋರಾಟದ ಬಗ್ಗೆ ಸ್ಪಷ್ಟನೆ. ಜೊತೆಗೆ, 275 ಕೋಟಿ ರೂ. ವೆಚ್ಚದ ಬೆಳಗಾವಿ ಫ್ಲೈಓವರ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕ ಬಗ್ಗೆ ಮಹತ್ವದದ ಮಾಹಿತಿ ನೀಡಿದ್ದಾರೆ.

ಬೆಳಗಾವಿ (ಡಿ.24): ನಮ್ಮ ಪ್ರಕಾರ ಜಿಲ್ಲಾಧಿಕಾರಿಗಳು ಯಾವುದೇ ತಪ್ಪು ಮಾಡಿಲ್ಲ. ದೂರು ನೀಡಿದ ತಕ್ಷಣವೇ ಏನೂ ಆಗುವುದಿಲ್ಲ, ಅದು ಸಮಿತಿಯ ಮುಂದೆ ಹೋಗಿ ಚರ್ಚೆಯಾಗಬೇಕು. ನೋಟಿಸ್ ಬಂದ ನಂತರ ನಾವು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಅವರು ನೋಟಿಸ್ ನೀಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ, ಅದಕ್ಕೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿಗಳ ವಿರುದ್ಧ ಮಹಾರಾಷ್ಟ್ರ ಸಂಸದ ಧೈರ್ಯಶೀಲ್ ಮಾನೆ ಅವರು ಲೋಕಸಭಾ ಸ್ಪೀಕರ್‌ಗೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿಂದು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಜಿಲ್ಲಾಧಿಕಾರಿಗಳ ಪರವಾಗಿ ಬ್ಯಾಟಿಂಗ್ ಮಾಡಿದರು.

ಮಹಾರಾಷ್ಟ್ರ ಗಡಿ ವಿವಾದ ಬಗ್ಗೆ ಜಾರಕಿಹೊಳಿ ಹೇಳಿದ್ದೇನು?

ಮಹಾಜನ್ ವರದಿ ಪ್ರಕಾರ ಕ್ಯಾಂಪ್ ಸೇರಿದಂತೆ ಬೆಳಗಾವಿಯ ಹಲವು ಭಾಗಗಳು ಹೋಗಬೇಕಿತ್ತು, ಆದರೆ ಪ್ರಸ್ತುತ ಅದು ಸಾಧ್ಯವಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು. ಇನ್ನು ನಗರದ ಪೋಕ್ಸೋ ಪ್ರಕರಣವೊಂದರಲ್ಲಿ ಆರೋಪಿಗೆ ಸ್ಟೇಷನ್ ಬೆಲ್ ನೀಡಿ ಕಳುಹಿಸಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಅಂತಹ ಪ್ರಕರಣಗಳಲ್ಲಿ ತಕ್ಷಣ ಎಫ್‌ಐಆರ್ ದಾಖಲಿಸಿ ಆದ್ಯತೆ ನೀಡಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಈ ಬಗ್ಗೆ ಕಮಿಷನರ್ ಜೊತೆ ಚರ್ಚಿಸಿ ಮಾಹಿತಿ ಪಡೆಯುತ್ತೇನೆ, ಒಂದು ವೇಳೆ ಅಧಿಕಾರಿಗಳ ತಪ್ಪಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.

ಬೆಳಗಾವಿ ಫ್ಲೈಓವರ್ ನಿರ್ಮಾಣ: ಸಚಿವ ಜಾರಕಿಹೊಳಿ ಬಿಗ್ ಅಪ್ಡೇಟ್:

ಬೆಳಗಾವಿ ನಗರದ ಬಹುನಿರೀಕ್ಷಿತ ಪ್ಲೈ ಓವರ್ ನಿರ್ಮಾಣದ ಬಗ್ಗೆಯೂ ಸಚಿವರು ಅಪ್‌ಡೇಟ್ ನೀಡಿದ್ದು, ಇತ್ತೀಚೆಗೆ ಕ್ಯಾಬಿನೆಟ್‌ನಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ. ಸುಮಾರು 275 ಕೋಟಿ ರೂಪಾಯಿ ವೆಚ್ಚದಲ್ಲಿ, ಯಾವುದೇ ಭೂಸ್ವಾಧೀನವಿಲ್ಲದೆಯೇ ಎರಡು ಹಂತದಲ್ಲಿ ಈ ಪ್ಲೈ ಓವರ್ ನಿರ್ಮಾಣವಾಗಲಿದೆ. ಇದೊಂದು ರಾಜ್ಯಕ್ಕೆ ಮಾದರಿ ಪ್ಲೈ ಓವರ್ ಆಗಲಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು. ಇನ್ನು ಜಿಲ್ಲಾ ವಿಭಜನೆ ವಿಚಾರದಲ್ಲಿ ಗೊಂದಲವಿರುವುದು ನಿಜ. ಈ ಬಗ್ಗೆ ಬೆಂಗಳೂರಿನಲ್ಲಿ ಶಾಸಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಾಗುವುದು. ಮುಖ್ಯಮಂತ್ರಿಗಳೇ ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.