ಸಂಕ್ರಮಣ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗ್ತಾರೆ ಅಂತ ಇದೆ. ಆಗೋದಿಲ್ಲ ಅಂತಾನೂ ಇದೆ. ಎಲ್ಲವೂ ಅಂತಾರೆ, ಸಂಕ್ರಾಂತಿಗೆ ಎಲ್ಲವೂ ಇದೆ ಅಂತಾರೆ. ಆದರೆ ನಮಗೇನು ಗೊತ್ತಾಗಿಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಬಾಗಲಕೋಟೆ (ಡಿ.24): ಸಂಕ್ರಮಣ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗ್ತಾರೆ ಅಂತ ಇದೆ. ಆಗೋದಿಲ್ಲ ಅಂತಾನೂ ಇದೆ. ಎಲ್ಲವೂ ಅಂತಾರೆ, ಸಂಕ್ರಾಂತಿಗೆ ಎಲ್ಲವೂ ಇದೆ ಅಂತಾರೆ. ಆದರೆ ನಮಗೇನು ಗೊತ್ತಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕ್ರಮಣ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಾರೆ ಎನ್ನುವ ವಿಷಯದ ಕುರಿತು ಮಾರ್ಮಿಕವಾಗಿ ಉತ್ತರ ನೀಡಿದರು. ಕುರ್ಚಿ ಕದನ ವಿಚಾರಕ್ಕೆ ಹೈಕಮಾಂಡ್ ಮೌನಕ್ಕೆ ಜಾರಿತಾ? ಎಂಬ ಮಾತಿಗೆ ಇಲ್ಲೇ ಮುಗಿಯುತ್ತೆ, ಇಲ್ಲದಿದ್ದರೆ ಅಂತಿಮವಾಗಿ ಹೈಕಮಾಂಡ್‌ನೇ ಹೇಳಬೇಕಾಗುತ್ತೆ.

ಸಿಎಂ ಅವರು ಹೈಕಮಾಂಡ್ ನನ್ನ ಪರವಾಗಿದೆ ಹಾಗೂ ಹೈಕಮಾಂಡ್ ಹೇಳಿದರೆ ಕುರ್ಚಿ ತ್ಯಾಗ ಮಾಡುವ ಹೇಳಿಕೆಗೆ ಪ್ರತಿಕ್ರಿಯಿಸಿ, ಬಹಳ ಸಾರಿ ಹೇಳಿದ್ದಾರೆ ಎಂದರು. ಡಿಸಿಎಂ ಡಿಕೆಶಿ ದೆಹಲಿ ಪ್ರಯಾಣ ಪ್ರಸ್ತಾಪಿಸಿ, ರಾಜಕಾರಣ ಹಾಗೂ ಸರ್ಕಾರ ಅಂದ್ರೆ ದೆಹಲಿಗೆ ಹೋಗೋದು ಸಂಘಟನೆ ಚರ್ಚೆ ಇದ್ದೇ ಇರುತ್ತದೆ. ಅದರಲ್ಲೇನು ವಿಶೇಷ ಇಲ್ಲ. ದೊಡ್ಡ ಸರ್ಕಾರ ಇದೆ, ಹೋಗಲೇಬೇಕಲ್ಲ. ಏಳು ಕೋಟಿ ಜನಸಂಖ್ಯೆ, ₹4 ಲಕ್ಷ ಕೋಟಿ ಬಜೆಟ್ ಇರುವ ರಾಜ್ಯ. ದೆಹಲಿಗೆ ಹೋಗಬೇಕಾಗುತ್ತದೆ. ಅವರು ಎರಡು ಇಲಾಖೆ ಮಂತ್ರಿ ಇದ್ದಾರೆ. ಕೆಲಸವಿದ್ದರೆ ಹೋಗೇ ಹೋಗುತ್ತಾರೆ. ಒಂದು ಕಡೆ ಪಕ್ಷದ ಅಧ್ಯಕ್ಷರು, ಒಂದುಕಡೆ ಡಿಸಿಎಂ. ಎರಡೂ ಅವರಿಗೆ ಸಂಬಂಧಪಟ್ಟ ಕೆಲಸವಿರಬಹುದು ಎಂದು ತಿಳಿಸಿದರು.

ಡಿಕೆಶಿ ದೆಹಲಿ ಪ್ರಯಾಣ, ವ್ಯರ್ಥ ಪ್ರಯತ್ನವಾ? ಎಂಬ ಪ್ರಶ್ನೆಗೆ ನಾವೇನು ಹೇಳಲ್ಲ, ಪರವಾಗಿಯೂ ಹೇಳಲ್ಲ, ವಿರೋಧವಾಗಿಯೂ ಇಲ್ಲ. ನಾವು ತಟಸ್ಥವಾಗಿದ್ದೇವೆ ಎಂದರು. ಕೆ.ಎನ್ ರಾಜಣ್ಣ ಅವರು ರಾಹುಲ್ ಗಾಂಧಿಗೆ ಸರಣಿ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಜಸ್ಟಿಫೈ ಮಾಡಲೇಬೇಕು. ನಾವು ಸಹ ಹಿಂದೆ ಹೇಳಿದ್ದೆವು. ಅವರು ದೆಹಲಿಗೆ ಹೋಗಿ, ಹೈಕಮಾಂಡ್ ಭೇಟಿ ಮಾಡಿ ಮನವೊಲಿಕೆ ಮಾಡಬೇಕು ಅಂತಾ ಹೇಳಿದ್ದೆವು. ಜಸ್ಟಿಫೈ ಮಾಡಿಕೊಳ್ಳಿ ಅಂತಾ ಮೊದಲೇ ಹೇಳಿದ್ದೆವು. ಈಗ ಅವರು ಪತ್ರ ಮುಖೇನ ಮಾಡಿರಬಹುದು ಎಂದರು.

ರಾಜಣ್ಣ ಡಿಕೆಶಿ ಭೇಟಿ ಬಗ್ಗೆ ಮಾತನಾಡಿ, ಪಕ್ಷ ಒಂದೇ ಭೇಟಿ ಆಗುತ್ತಾರೆ. ರಾಜಕೀಯದಲ್ಲಿ ಕೋಲ್ಡ್ ವಾರ್ ಇದ್ದೇ ಇರುತ್ತೆ. ನಾವೆಲ್ಲ ಒಂದೇ ಪಕ್ಷದಲ್ಲಿದ್ದೇವೆ, ಡಿಕೆಶಿ ಅವರನ್ನ ರಾಜಣ್ಣ ಭೇಟಿ ಆಗೋದ್ರಲ್ಲಿ ತಪ್ಪಿಲ್ಲ ಎಂದ ಅವರು, ಡಿಕೆಶಿ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಾರಾ ಅಥವಾ ಇಲ್ಲ ಎಂಬುದನ್ನು ಬಾಗಲಕೋಟೆಯಲ್ಲಿ ಕೂತ್ಕೊಂಡವರಿಗೆ ಗೊತ್ತಿಲ್ಲ. ಅವರು ದೆಹಲಿಯಲ್ಲಿ ಭೇಟಿಯಾದರೆ ನಮಗೇನು ಗೊತ್ತಾಗುತ್ತೆ ಎಂದರಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರ ಎಲ್ಲಿಗೆ ಬಂತು ಎಂಬ ಪ್ರಶ್ನೆ. ಅದರ ಬಗ್ಗೆ ಚರ್ಚೆಯೇ ಆಗಿಲ್ಲ. ಚರ್ಚೆಗೆ ಬಂದಾಗ ಹೇಳ್ತೇನೆ ಎಂದರು.

ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಾ?

ಡಿ.27ಕ್ಕೆ ಸಿಡಬ್ಲ್ಯೂಸಿ ಮೀಟಿಂಗ್ ಇದೆ. ಆ ಕಾರ್ಯಕ್ರಮಕ್ಕಾಗಿ ಸಿಎಂ ಡಿಸಿಎಂ ಹೋಗೋದು ಕಾಮನ್. ಸಿಡಬ್ಲ್ಯೂಸಿ ಮೀಟಿಂಗ್‌ ಗೆ ಸಿಎಂ ಹಾಗು ಡಿಸಿಎಂ ಆಹ್ವಾನ ಇಲ್ಲ ಎಂಬ ಪ್ರಶ್ನೆಗೆ ಇರುತ್ತೆ. ಇಲ್ಲ ಅಂದ್ರೆ ಹೋಗಲ್ಲ ಎಂದು ನಕ್ಕು ಸುಮ್ಮನಾದರು. ಸಿಎಂ ಸ್ಥಾನದ ವಿಷಯ ಚರ್ಚೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಸಿಎಂ, ಅಧ್ಯಕ್ಷ ಅಂದ್ರೆ ಅವರಿಗೂ ಆಹ್ವಾನ ಮಾಡೇ ಮಾಡುತ್ತಾರೆ. ಮುಖ್ಯಮಂತ್ರಿಗಳನ್ನು ಕರೆದೇ ಕರೆಯುತ್ತಾರೆ. ಸಿಡಬ್ಲ್ಯೂಸಿಯಲ್ಲಿ ಸಿಎಂ ಡಿಸಿಎಂ ಹೊರಗಿಟ್ಟು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಾ? ಎಂಬ ಪ್ರಶ್ನೆಗೆ ಸಿಡಬ್ಲ್ಯೂಸಿಯಲ್ಲಿ ಆ ಪ್ರಶ್ನೆ ಬರಲ್ಲ. ಅದೊಂದು ಅಜೆಂಡಾ ಇದೆ. ಅಜೆಂಡಾ ಪ್ರಕಾರ ಸಿಡಬ್ಲ್ಯೂಸಿ ಸೀಮಿತವಾಗಿರುತ್ತೆ ಎಂದರು.