ಅಧಿಕಾರ ಹಂಚಿಕೆಯ ಯಾವುದೇ ಒಪ್ಪಂದ ಆಗಿಲ್ಲ, ಹೈಕಮಾಂಡ್‌ ನನ್ನ ಪರವಾಗಿದೆ. ಹಾಗಾಗಿ ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರು ಸದನದಲ್ಲೇ ಹೇಳಿದ್ದಾರೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಸುವರ್ಣ ವಿಧಾನಸೌಧ (ಡಿ.20): ಅಧಿಕಾರ ಹಂಚಿಕೆಯ ಯಾವುದೇ ಒಪ್ಪಂದ ಆಗಿಲ್ಲ, ಹೈಕಮಾಂಡ್‌ ನನ್ನ ಪರವಾಗಿದೆ. ಹಾಗಾಗಿ ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರು ಸದನದಲ್ಲೇ ಹೇಳಿದ್ದಾರೆ. ಇಷ್ಟು ಹೇಳಿದ ಮೇಲೂ ಇನ್ನೂ ಈ ವಿಷಯ ಚರ್ಚೆ ಮಾಡುವುದು ಸರಿಯಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕತ್ವ ಬದಲಾವಣೆ ಚರ್ಚೆ ಕುರಿತ ಪ್ರಶ್ನೆಗೆ, ನೋಡಿ ಸಿಎಂ ಅವರು ಸದನದಲ್ಲೇ ನಾಯಕತ್ವ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಆದರೂ, ಮತ್ತೆ ಮತ್ತೆ ಅದೇ ವಿಚಾರ ಚರ್ಚೆಗೆ ಅರ್ಥವಿಲ್ಲ ಎಂದರು. ಸಚಿವರೊಂದಿಗೆ ಡಿನ್ನರ್‌ ಪಾರ್ಟಿ ಬಗ್ಗೆ ಪ್ರಶ್ನೆಗೆ, ಇದರಲ್ಲಿ ಹೊಸದೇನಿಲ್ಲ. ಆಗಾಗ ಡಿನ್ನರ್‌ ಪಾರ್ಟಿಗಳು ಆಗುತ್ತಿರುತ್ತವೆ. ಇದು ಕೂಡ ಹಾಗೆಯೇ ಎಂದರು. ನಮ್ಮ ಪಕ್ಷದ ಸಲುವಾಗಿ ಸಭೆ ಆಗಿದೆ. ಆಯ್ದ ಸಚಿವರು ಮಾತ್ರ ಸಭೆ ಮಾಡಿದ್ದೇವೆ. ಕಾಂಗ್ರೆಸ್‌ ಪಕ್ಷ ಇನ್ನಷ್ಟು ಗಟ್ಟಿಯಾಗಬೇಕು. 2028ರಲ್ಲಿ ಮತ್ತೆ ನಮ್ಮದೇ ಸರ್ಕಾರದ ಅಧಿಕಾರಕ್ಕೆ ಬರಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.

ಸಿಎಂ ಊಟಕ್ಕೆ ಬಂದಿದ್ದರಲ್ಲಿ ವಿಶೇಷವೇನಿಲ್ಲ: ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮನೆಗೆ ಊಟಕ್ಕೆ ಬಂದಿದ್ದರಲ್ಲಿ ವಿಶೇಷವೆನಿಲ್ಲ. ಬೆಳಗಾವಿಗೆ ಬಂದಾಗ ಸಿಎಂ ಅವರನ್ನು ಊಟಕ್ಕೆ ಆಹ್ವಾನಿಸುತ್ತೇನೆ. ಹೀಗಾಗಿ ಬಂದಿದ್ದಾರೆ ಅಷ್ಟೇ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಕುವೆಂಪು ನಗರದ ಸ್ವಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮನೆಗೆ ಊಟಕ್ಕೆ ಬಂದಿದ್ದರಲ್ಲಿ ವಿಶೇಷವೇನಿಲ್ಲ.

ಸಚಿವರಾದ ಜಿ.ಪರಮೇಶ್ವರ್‌, ಡಾ.ಎಂ.ಸಿ.ಸುಧಾಕರ್‌, ಡಾ.ಎಚ್.‌ಸಿ.ಮಹಾದೇವಪ್ಪ, ಜಮೀರ್‌ ಅಹ್ಮದ್‌ ಖಾನ್‌ ಅವರು ಬಂದಿದ್ದರು ಎಂದು ತಿಳಿಸಿದರು. ಇನ್ನು 2028ರಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಕುರಿತು ಚರ್ಚಿಸಿದ್ದೇವೆ. ನಾಯಕತ್ವ ಬದಲಾವಣೆ ನಮ್ಮ ಕೈಯಲ್ಲಿ ಇಲ್ಲ. ಈ ವಿಷಯ ಕುರಿತು ಸಿಎಂ ಅವರನ್ನೇ ನೀವು ಕೇಳಬೇಕು ಎಂದ ಸಚಿವ ಸತೀಶ ಜಾರಕಿಹೊಳಿ, ಅಹಿಂದ ಸಮಾವೇಶ ಕುರಿತು ಇನ್ನು ಯಾವ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಹೆಡ್ಡೋ, ಟೇಲೋ ಅವರನ್ನೇ ಕೇಳಿ

ಟಾಸ್ ಮಾಡಿದವರು ಅವರೇ ಇಬ್ಬರು. ದೆಹಲಿಯ ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ಟಾಸ್ ಆಗಿದೆ. ನಾವು ಕ್ಯಾಪ್ಟನ್ ಜಾಗದಲ್ಲಿ ಇಲ್ಲ. ಆವಾಗ ಥರ್ಡ್‌ ಅಂಪೈರ್ ಕೂಡ ಇರಲಿಲ್ಲ. ಇಬ್ಬರೇ ಟಾಸ್ ಹಾಕಿದವರು ಅದು ಹೆಡ್ ಬಿದ್ದಿದೆಯೋ ಟೇಲ್ ಬಿದ್ದಿದೆಯೋ ಅವರನ್ನೇ ಕೇಳಬೇಕು ಎಂದು ಜಾರಕಿಹೊಳಿ ಮಾರ್ಮಿಕ ಹೇಳಿಕೆ ನೀಡಿದ್ದಾರೆ. ಬೆಳಗಾವಿ ತಾಲೂಕಿನ ಹುದಲಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಹೈಕಮಾಂಡ್ ಕರೆ ಬಂದಿದೆ ಎಂಬ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನೀವು ಅವರನ್ನೇ ಕೇಳಬೇಕು ನಾವೇನೂ ಹೇಳುವುದು..? ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈ ಕಮಾಂಡ್ ಕರೆ ಬಂದಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಪ್ರಶ್ನಿಸಿದ್ದಕ್ಕೆ ಹೇ ಯಾರ್ರೀ ಅದು ಎಂದು ಗದರಿ ಪ್ರತಿಕ್ರಿಯೆ ನೀಡಿದೇ ಅಲ್ಲಿಂದ ತೆರಳಿದರು.