Santosh Lad attended the Maratha Mahamelav event: ಚಿಕ್ಕೋಡಿಯಲ್ಲಿ ನಡೆದ ಮರಾಠಾ ಮಹಾಮೇಳಾವ್‌ನಲ್ಲಿ ಭಾಗವಹಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಗಡಿಭಾಗದ ಜನರ ವಲಸೆ ತಡೆಯಲು ಇಂಡಸ್ಟ್ರಿಯಲ್ ಮತ್ತು ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸುವ ಭರವಸೆ ನೀಡಿದರು.

ಚಿಕ್ಕೋಡಿ (ಡಿ.27): ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಇಂದು ಆಯೋಜಿಸಲಾಗಿದ್ದ 'ಮರಾಠಾ ಮಹಾಮೇಳಾವ್' ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಡಿಭಾಗದ ಸಮಸ್ಯೆಗಳು, ಸಿಎಂ ಬದಲಾವಣೆ ಹಾಗೂ ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಪ್ರತಿಕ್ರಿಯಿಸಿದರು.

ವಲಸೆ ತಡೆಯಲು ಗಡಿಭಾಗದಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಭರವಸೆ

ಗಡಿಭಾಗದ ಜನರು ಉದ್ಯೋಗ ಹುಡುಕಿಕೊಂಡು ಮಹಾರಾಷ್ಟ್ರಕ್ಕೆ ಹೋಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಜನರು ಕೆಲಸಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗುತ್ತಿರುವುದು ನಿಜ, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಹೈದರಾಬಾದ್ ಕರ್ನಾಟಕ ಭಾಗದವರು ಬಿಹಾರಕ್ಕೆ ಹೋಗುತ್ತಾರೆ, ಅಲ್ಲಿಯವರು ಇಲ್ಲಿಗೆ ಬರ್ತಾರೆ. ನಾನು ಕಾರ್ಮಿಕ ಸಚಿವನಾಗಿ ಇದಕ್ಕೆ ಬೇಕಾದ ನಿಯಮಗಳನ್ನು ರೂಪಿಸುತ್ತಿದ್ದೇನೆ. ಈ ಭಾಗದಲ್ಲಿ ಕೈಗಾರಿಕಾ ಪಾರ್ಕ್ ಹಾಗೂ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಎಂಬಿ ಪಾಟೀಲ್ ಅವರು ಹೆಚ್ಚಿನ ಒತ್ತು ನೀಡಿದ್ದಾರೆ. ಇದರಿಂದ ಸ್ಥಳೀಯರಿಗೆ ಶೀಘ್ರವೇ ಕೆಲಸ ಸಿಗಲಿದೆ ಎಂದು ಭರವಸೆ ನೀಡಿದರು.

ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಬಗ್ಗೆ ಲಾಡ್ ಮೌನ

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಸಿಎಂ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಾಡ್, ಈಗಾಗಲೇ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ, ಹಾಗಾಗಿ ನಾನು ಆ ಬಗ್ಗೆ ಮಾತನಾಡುವುದಿಲ್ಲ. ಇನ್ನು ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಸಿಎಂ, ಡಿಸಿಎಂ ಮತ್ತು ಹೈಕಮಾಂಡ್ ಸೂಕ್ತ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

ಗೃಹಲಕ್ಷ್ಮಿ ಹಣ ಸಂತೋಷ್ ಲಾಡ್ ಹೇಳಿದ್ದೇನು?

ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾಗದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸದನದಲ್ಲಿ ಉತ್ತರ ನೀಡಲಾಗಿದೆ. ತಾಂತ್ರಿಕ ಕಾರಣಗಳಿಂದ ಎರಡು ತಿಂಗಳ ಹಣ ಬಾಕಿ ಇತ್ತು, ಅದನ್ನು ಶೀಘ್ರವೇ ಜಮೆ ಮಾಡಲಾಗುವುದು, ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಕಿಡಿಕಾರಿದ ಲಾಡ್, 'ದೇಶದಲ್ಲಿ ಈಗ ಎಲ್ಲವೂ ಸರಿಯಿದೆಯಾ? ಮೊದಲು ಬಿಜೆಪಿಯವರನ್ನು ಹೋಗಿ ಕೇಳಿ. ಇವತ್ತು ಬಂಗಾರದ ಬೆಲೆ ಎಷ್ಟಾಗಿದೆ ನೋಡಿ, ಎಂದು ಮರುಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಬಿಹಾರ್ ಸಚಿವರ ಫೋಟೋ ವಿವಾದ

ಬೆಂಗಳೂರಿನಲ್ಲಿ 200 ಮನೆಗಳ ತೆರವು ಕಾರ್ಯಾಚರಣೆ ಬಗ್ಗೆ ಮಾತನಾಡಿದ ಅವರು, ಒತ್ತುವರಿ ಮಾಡಿಕೊಂಡಿದ್ದರೆ ಖಂಡಿತ ತೆರವು ಮಾಡುತ್ತೇವೆ. ಆದರೆ ನಾವು ಉತ್ತರ ಪ್ರದೇಶದ ರೀತಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ತೊಂದರೆ ಕೊಡುವ ಕೆಲಸ ಮಾಡುತ್ತಿಲ್ಲ ಎಂದರು. ಇನ್ನು ಬಿಹಾರ್ ಸಚಿವರ ಎಐ ಜನರೇಟೆಡ್ ಫೋಟೋ ಬಗ್ಗೆ ಪ್ರಿಯಾಂಕ್ ಖರ್ಗೆ ಅವರ ಟ್ವೀಟ್ ಕುರಿತು ಕೇಳಿದಾಗ, 'ನಾನು ಇನ್ನು ಆ ಫೋಟೋ ನೋಡಿಲ್ಲ, ನೋಡಿದ ಮೇಲೆ ಪ್ರತಿಕ್ರಿಯಿಸುತ್ತೇನೆ ಎಂದರು.