ಬೆಂಗಳೂರು (ಮೇ.09):  ಯಾವುದೇ ಜಿಲ್ಲೆಯಲ್ಲಿ ರೋಗೋದ್ರೇಕ ಕಂಡುಬಂದ 5 ರಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಲಸಿಕೆ ಹಾಕಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಸೂಚಿಸಿದ್ದಾರೆ.

ಕಾಲುಬಾಯಿ ಲಸಿಕೆ, ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆ ಭರ್ತಿ ಹಾಗೂ ಗೋಶಾಲೆಗಳಿಗೆ ಸಂಬಂಧಿ​ಸಿದಂತೆ ವಿಕಾಸಸೌಧದಲ್ಲಿ ಮಂಗಳವಾರ ತುರ್ತು ಸಭೆ ನಡೆಸಿದ ಅವರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ, ಅ​ಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಚಿವರು, ಕೆಲಸ ಮಾಡಲು ಆಗದಿದ್ದರೆ ಕುರ್ಚಿ ಖಾಲಿ ಮಾಡಿ, ಇಲಾಖೆಯ ಅಭಿವೃದ್ಧಿ ಕೆಲಸ ಕುಂಠಿತವಾದರೆ ಸಹಿಸುವುದಿಲ್ಲ ಎಂದು ನಿರ್ದೇಶಕರು ಮತ್ತು ಆಯುಕ್ತರ ಮೇಲೆ ಗರಂ ಆದರು.

ಕೊರೋನಾ ಎಫೆಕ್ಟ್: ರಾಸುಗಳಿಗೆ ಮೇವಿನ ಕೊರತೆ

ಕೊಡಗು, ರಾಮನಗರ, ಚಿಕ್ಕಬಳ್ಳಾಪುರ, ಹಾಸನ, ಚಾಮರಾಜನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ‘ರಿಂಗ್‌ ವ್ಯಾಕ್ಸಿನ್‌’ ನಡೆಸಬೇಕು. ಯಾವುದೇ ಜಿಲ್ಲೆಯಲ್ಲಿ ರೋಗೋದ್ರೇಕ ಕಂಡುಬಂದರೆ ಸಾರ್ವಜನಿಕರು ಹತ್ತಿರದ ಪಶು ವೈದ್ಯಾಧಿ​ಕಾರಿಗಳಿಗೆ ತಿಳಿಸಬೇಕು. ಕಾಲುಬಾಯಿ ರೋಗಕ್ಕೆ ಪಶುಸಂಗೋಪನೆ ಇಲಾಖೆಯ ಎಲ್ಲ ಸಿಬ್ಬಂದಿ, ಅ​ಧಿಕಾರಿಗಳು ಹಾಗೂ ಕೆಎಂಎಫ್‌ ಸಿಬ್ಬಂದಿಯನ್ನು ಬಳಸಿಕೊಂಡು ಲಸಿಕೆ ನೀಡಲಾಗುವುದು ಎಂದು ಹೇಳಿದರು.

ರೈತರ ಸಮಸ್ಯೆ ಆಲಿಸಲು ವಾರ್‌ ರೂಮ್‌ ಸಹ ತಯಾರಾಗಿದ್ದು, ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಸದ್ಯದಲ್ಲೇ ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯದ 15 ಜಿಲ್ಲೆಗಳಲ್ಲಿ ಪಶುಸಂಜೀವಿನಿ ಯಶಸ್ವಿಯಾಗಿ ನಡೆಯುತ್ತಿದೆ. ಉಳಿದ 15 ಜಿಲ್ಲೆಗಳಲ್ಲಿ ಪಶುಸಂಜೀವಿನಿಗೆ ಭಾರಿ ಬೇಡಿಕೆಯಿದ್ದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟುಬೇಗ ಉಳಿದ ಜಿಲ್ಲೆಗಳಿಗೆ ನೀಡಲಾಗುವುದು ಎಂದರು.

ಸಭೆಯಲ್ಲಿ ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್‌ ಮಣಿವಣ್ಣನ್‌, ಆಯುಕ್ತ ಬಸವರಾಜೇಂದ್ರ, ನಿರ್ದೇಶಕ ಶಿವರಾಮ್‌ ಸೇರಿದಂತೆ ಇಲಾಖೆ ಅ​ಧಿಕಾರಿಗಳು ಹಾಜರಿದ್ದರು.