ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.06): ಕೊರೋನಾ ಎಫೆಕ್ಟ್‌ನಿಂದಾಗಿ ಇಲ್ಲಿನ ಪಾಂಜರಪೋಳದಲ್ಲಿರುವ ರಾಸುಗಳೀಗ ಮೇವಿನ ಕೊರತೆ ಎದುರಾಗಿದೆ. ಇನ್ನೂ ಐದಾರು ದಿನಗಳಾದರೆ ಮೇವಿಲ್ಲದೇ ರಾಸುಗಳು ಉಪವಾಸ ಇರುವಂತಾಗಬಹುದು ಎಂಬ ಚಿಂತೆ ಗೋಶಾಲೆ ನಿರ್ವಾಹಕರಿಗೆ ಎದುರಾಗಿದೆ.

ಹೌದು, ಕಳೆದ ಹಲವು ದಶಕಗಳಿಂದ ಮುದಿ ಹಸುಗಳು, ಎಮ್ಮೆ, ಎತ್ತು ಸೇರಿದಂತೆ ಎಲ್ಲ ಬಗೆಯ ದನಕರುಗಳನ್ನು ಉಚಿತವಾಗಿ ಸಾಕಿ ಸಲಹುವ ಗೋಶಾಲೆ ಪಾಂಜರಪೋಳ. ಪಾಂಜರಪೋಳಕ್ಕೆ ತನ್ನದೇ ಆದ ಇತಿಹಾಸವಿದೆ. 100ಅಧಿಕ ರಾಸುಗಳು ಇಲ್ಲಿವೆ. ರೈತರಿಗೆ ನಿರುಪಯುಕ್ತವೆನಿಸಿದ ರಾಸುಗಳನ್ನು ಇಲ್ಲಿಗೆ ತಂದು ಬಿಡಲಾಗುತ್ತದೆ. ಹೀಗೆ ಬಂದ ರಾಸುಗಳನ್ನು ಅವುಗಳ ಸಾಯುವವರೆಗೂ ಯಾವುದೇ ಫಲಾಪೇಕ್ಷೆ ಇಲ್ಲದೇ ಸಾಕುವುದೇ ಪಾಂಜರಪೋಳನ ಕೆಲಸ. ಇದಕ್ಕಾಗಿ ಹತ್ತಕ್ಕೂ ಹೆಚ್ಚು ಜನ ಇಲ್ಲಿ ಕೆಲಸ ಮಾಡುತ್ತಾರೆ.

ಉತ್ತರ ಕರ್ನಾಟಕದಲ್ಲಿ ಮೊದಲ ಪ್ರಯತ್ನ: ಕೊರೋನಾ ಸೋಂಕು ಕಳೆಯುವ ಸುರಂಗ ಸ್ಥಾಪನೆ

ಇಲ್ಲಿರುವ 100 ರಾಸುಗಳ ಪೈಕಿ 35ಕ್ಕೂ ಹೆಚ್ಚು ರಾಸುಗಳು ನಡೆದಾಡಲು ಶಕ್ತಿ ಹೊಂದಿದ ರಾಸುಗಳು ಅವುಗಳನ್ನು ಮೇಯಿಸಲು ಸಮೀಪದ ಕಾಡಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಇನ್ನುಳಿದ 65ಕ್ಕೂ ಹೆಚ್ಚು ರಾಸುಗಳಿಗೆ ಹೀಗೆ ಕಾಡಲ್ಲಿ ಅಲೆದಾಡುವ ಶಕ್ತಿ ಇಲ್ಲ. ಹೀಗಾಗಿ ಅವುಗಳಿಗೆ ಗೋಶಾಲೆಯಲ್ಲೇ ಮೇವಿನ ವ್ಯವಸ್ಥೆ ಮಾಡಬೇಕು. ಪ್ರತಿದಿನ ಕನಿಷ್ಠವೆಂದರೂ 3 ಟನ್ ಮೇವು ಬೇಕಾಗುತ್ತದೆ. ಸದ್ಯ 20 ಟನ್‌ಗಳಷ್ಟು ಮಾತ್ರ ಮೇವಿದೆ. ಅಂದರೆ ಆರರಿಂದ ಐದಾರು ದಿನ ಯಾವುದೇ ಸಮಸ್ಯೆಯಾಗಲ್ಲ. ಆದರೆ ಅದರ ಬಳಿಕ ಇಲ್ಲಿನ ರಾಸುಗಳಿಗೆ ಮೇವಿನ ಕೊರತೆ ಎದುರಾಗುವುದು ನಿಶ್ಚಿತ ಎಂಬ ಚಿಂತೆ ಗೋಶಾಲೆ ನಿರ್ವಾಹಕರಲ್ಲಿ ಕಾಡುತ್ತಿದೆ.

ಹಾಗೆ ನೋಡಿದರೆ ಗೋಶಾಲೆಯಲ್ಲಿ ಸಾಕಷ್ಟು ಮೇವಿರುತ್ತಿತ್ತು. ಆದರೆ ಈ ವರ್ಷ ಅತಿವೃಷ್ಟಿಯಾದ್ದರಿಂದ ಹೀಗಾಗಿ ಮುಂಗಾರಿನ ವೇಳೆ ಮೇವು ಹೆಚ್ಚಿಗೆ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಈಗ ಕೊರೋನಾದಿಂದಾಗಿ ಮೇವು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮತ್ತೇನು ಮಾಡುತ್ತಿದೆ?

ಕೊರೋನಾ ಇರುವುದರಿಂದ ಹೊರಗಡೆಯಿಂದ ಮೇವು ತರಲು; ತರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಕೆಲವೊಂದು ಗ್ರಾಮಗಳಲ್ಲಿ ಮೇವು ಖರೀದಿಗಾಗಿ ರೈತರನ್ನು ಸಂಪರ್ಕಿಸಿದೆ. ಅವರು ಮಾರಾಟ ಮಾಡಲು ಮುಂದೆ ಬಂದಿದ್ದಾರೆ. ಆದರೆ ಹೊಲಗಳಲ್ಲಿರುವ ಮೇವನ್ನು ಕಟಾವ್ ಮಾಡಿಕೊಂಡು, ಟ್ಯಾçಕ್ಟರ್‌ಗಳಲ್ಲಿ ಹೇರಿಕೊಂಡು ಬರಬೇಕಿದೆ. ಆದರೆ ಕೊರೋನಾ ಇರುವ ಕಾರಣ ಕಾರ್ಮಿಕರು ಸಿಗುತ್ತಿಲ್ಲ ಎಂದು ಗೋಶಾಲೆಯ ಸಿಬ್ಬಂದಿ ತಿಳಿಸುತ್ತಾರೆ. 

ಸದ್ಯ ಗೋಶಾಲೆಯಲ್ಲಿನ ಸುತ್ತಮುತ್ತಲಿನ ಹುಲ್ಲನ್ನು  ಗೋಶಾಲೆಯ ಸಿಬ್ಬಂದಿಯೇ ಕೊಯ್ದು ತಂದು ಗೋಶಾಲೆಯಲ್ಲಿನ ಮೇವಿನ ಜೊತೆಗೆ ಸೇರಿಸಿ ರಾಸುಗಳಿಗೆ ಹಾಕಲಾಗುತ್ತಿದೆ. ಆದರೆ ಹುಲ್ಲು ಕೂಡ ಖಾಲಿಯಾಗುತ್ತಾ ಬರುತ್ತಿದೆ. ಮುಂದೆ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ ಎಂದು ಸಿಬ್ಬಂದಿ ತಿಳಿಸುತ್ತಾರೆ. ಜಿಲ್ಲಾಡಳಿತವೇ ರಾಸುಗಳಿಗೆ ಮೇವಿನ ವ್ಯವಸ್ಥೆ ಮಾಡಿ ಪುಣ್ಯ ಕಟ್ಕೊಳ್ಳಬೇಕು ಎಂಬ ಮನವಿ ಗೋಶಾಲೆಯ ವ್ಯವಸ್ಥಾಪಕರದ್ದು.

ಪಾಂಜರಪೋಳದ ಗೋಶಾಲೆಯಲ್ಲಿರುವ ರಾಸುಗಳಿಗೆ ಪ್ರತಿದಿನ 3 ಟನ್ ಮೇವು ಬೇಕಾಗುತ್ತೆ. ಆದರೆ ಸದ್ಯ 20 ಟನ್ ಮಾತ್ರ ಸಂಗ್ರಹವಿದೆ. ಅದಾದ ಬಳಿಕ ಹೇಗೆ ಮಾಡಬೇಕೋ ತಿಳಿಯುತ್ತಿಲ್ಲ. ಜಿಲ್ಲಾಡಳಿತ ಮೇವಿನ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತೆ ಎಂದು ಪಾಂಜರಪೋಳ ಸಂಸ್ಥೆಯ ಚೇರಮನ್‌ ರಮೇಶ ಬಾಪಣಾ ತಿಳಿಸಿದ್ದಾರೆ.