Asianet Suvarna News Asianet Suvarna News

ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ಗೋರಕ್ಷಣೆ?: ಬಿಜೆಪಿ ಸರ್ಕಾರದ ವಿರುದ್ಧ HDK ಕಿಡಿ

* ಸಾಂಕ್ರಾಮಿಕ ರೋಗದಿಂದ ಹಸುಗಳು ನರಳಾಡಿ ಸಾಯ್ತಿವೆ
* ಕಾಯಿಲೆಗೆ ಬಲಿಯಾಗಿರುವ ರಾಸುಗಳ ಮಾಲೀಕರಿಗೆ ಸರ್ಕಾರ ಪರಿಹಾರ ನೀಡಲಿ
* ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದೆ ನಿಂತು ಮಾಡಿದ ಗೋವಧೆಯಲ್ಲವೇ? 

Former CM HD Kumaraswamy Slam BJP Governments grg
Author
Bengaluru, First Published Jun 5, 2021, 12:05 PM IST

ಬೆಂಗಳೂರು(ಜೂ.05): ‘ಗೋ‘ ರಕ್ಷಣೆ ಬಗ್ಗೆ ಬಿಜೆಪಿ ಹಾದಿಬೀದಿಯಲ್ಲಿ ಅರಚುತ್ತದೇ ಹೊರತು, ಗೋವುಗಳ ರಕ್ಷಣೆ ಮಾಡುವುದಿಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹಸುಗಳಲ್ಲಿ ಕಾಣಿಸಿಕೊಳ್ಳುವ ಗಂಭೀರ ಕಾಯಿಲೆಯಾದ ಕಾಲುಬಾಯಿ ಜ್ವರದ–FMD ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸಿಯೇ ಇಲ್ಲ. ರಾಜ್ಯ ಸರ್ಕಾರ ಕೇಳಿಲ್ಲ. ಈಗ ರಾಸುಗಳು ನರಳುತ್ತಿವೆ ಎಂದು ಬಿಜೆಪಿ ಸರ್ಕಾರಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. 

 

ಇಂದು(ಶನಿವಾರ) ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್‌ ಮಾಡುವ ಮೂಲಕ ಬಿಜೆಪಿ ಸರ್ಕಾರಗಳ ವಿರುದ್ಧ ಟೀಕಾಪ್ರಹಾರ ನಡೆಸಿದ ಹೆಚ್‌ಡಿಕೆ,  ಸಾಂಕ್ರಾಮಿಕ ರೋಗ ಕಾಲುಬಾಯಿ ಜ್ವರ ಭೀಕರ ಕಾಯಿಲೆ. ಅದು ಬಹುಬೇಗ ಹರಡುತ್ತದೆ. ಹಸುಗಳು ನರಳಾಡಿ ಸಾಯುತ್ತವೆ. ಗೋವುಗಳ ಪಾಡು ನೋಡಲಾಗದೇ ರೈತ ಕೊರಗಿ ಕುಗ್ಗಿ ಹೋಗುತ್ತಾನೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸದೇ ಇರುವುದೇ ಇದಕ್ಕೆ ಕಾರಣ ಎಂಬ ಅಂಶ ಬಯಲಾಗಿದೆ ಎಂದು ಕಿಡಿ ಕಾರಿದ್ದಾರೆ. 

SSLC, PUC ಪರೀಕ್ಷೆ: ಶಿಕ್ಷಣ ಸಚಿವರು ಎಡಬಿಡಂಗಿ ನಿರ್ಧಾರ ಎಂದ ಎಚ್‌ಡಿಕೆ

 

ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ರಾಸುಗಳಿಗೆ ಲಸಿಕೆ ಅಭಿಯಾನ ನಡೆಸಬೇಕಿತ್ತು. ಆದರೆ, ಕೋವಿಡ್‌ 19 ಕಾರಣದಿಂದ ಲಸಿಕೆ ಹಾಕಿಲ್ಲ ಎಂದು ಪಶುವೈದ್ಯರು ಹೇಳಿದ್ದಾರೆ. ಲಸಿಕೆ ಅಭಿಯಾನ ನಡೆಸದೇ ಈಗ ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ಗೋರಕ್ಷಣೆ? ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದೆ ನಿಂತು ಮಾಡಿದ ಗೋವಧೆಯಲ್ಲವೇ? ಎಂದು ಪ್ರಶ್ನಿಸಿದ್ದಾರೆ. 

 

ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾ. ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ಹೈನೋದ್ಯಮವನ್ನು ಕಂಗೆಡಿಸುವ ಈ ಕಾಯಿಲೆ ಸಾಂಕ್ರಾಮಿಕವಾಗುವುದನ್ನು ತಡೆಯಲು ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಬೇಕು. ಮುಂದೆ ಜೂನ್‌ನಲ್ಲಿ ನಡೆಯಲಿರುವ ಲಸಿಕೆ ಅಭಿಯಾನವನ್ನು ಯಾವ ಕಾರಣಕ್ಕೂ ತಪ್ಪಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ. 

 

ಕಾಯಿಲೆಗೆ ಬಲಿಯಾಗಿರುವ ರಾಸುಗಳ ಮಾಲೀಕರಿಗೆ ಸರ್ಕಾರ ಪರಿಹಾರ ನೀಡಲಿ. ಹಿಂದೆ ಬಿಜೆಪಿಯೇ ಅಧಿಕಾರದಲ್ಲಿದ್ದಾಗಲೂ ಕಾಲುಬಾಯಿ ಜ್ವರಬಂದಿತ್ತು. ಆಗ ನಾನೇ ವೈಯಕ್ತಿಕವಾಗಿ ರೈತರಿಗೆ ಪರಿಹಾರ ಹಣ ನೀಡಿದ್ದೆ. ಅದರಿಂದ ಎಚ್ಚೆತ್ತ ಸರ್ಕಾರ ತಾನೂ ಪರಿಹಾರ ನೀಡಿತ್ತು. ಗೋವುಗಳ ಬಗ್ಗೆ ದೊಡ್ಡದಾಗಿ ಮಾತಾಡುವ ಬಿಜೆಪಿ ಈಗ ಗೋವುಗಳ ರಕ್ಷಣೆ ಮಾಡಲಿ ಎಂದು ಸರ್ಕಾರಕ್ಕೆ ಸವಾಲ್‌ ಹಾಕಿದ್ದಾರೆ.
 

Follow Us:
Download App:
  • android
  • ios