ಹೆಚ್‌ಡಿ ಕುಮಾರಸ್ವಾಮಿ, ಆರ್ ಅಶೋಕ್ ಇಬ್ಬರೂ ಹುಚ್ಚರು: ಎನ್‌ಎಸ್ ಬೋಸರಾಜು ಕಿಡಿ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಆರ್.ಅಶೋಕ್ ಇಬ್ಬರಿಗೂ ಹುಚ್ಚು ಹಿಡಿದಿದೆ ಎಂದು ಸಚಿವ ಎನ್‌ಎಸ್ ಬೋಸರಾಜು ವಾಗ್ದಾಳಿ ನಡೆಸಿದರು.
ರಾಯಚೂರು (ಅ.4): ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಆರ್.ಅಶೋಕ್ ಇಬ್ಬರಿಗೂ ಹುಚ್ಚು ಹಿಡಿದಿದೆ ಎಂದು ಸಚಿವ ಎನ್‌ಎಸ್ ಬೋಸರಾಜು ವಾಗ್ದಾಳಿ ನಡೆಸಿದರು.
ಮುಡಾ ಹಗರಣ ವಿಚಾರ ಸಂಬಂಧ ಇಂದು ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಸಿಎಂ ಸಿದ್ಧರಾಮಯ್ಯರ ಬಗ್ಗೆ ಮುಡಾ ವಿಚಾರದ ಬಗ್ಗೆ ಮಾತನಾಡುವ ಇಬ್ಬರಿಗೂ ಹುಚ್ಚು ಹಿಡಿದಿದೆ. ಯಾವಾಗ ನೋಡಿದರೂ ಇವರು ಹುಚ್ಚರ ತರ ಒದರಾಡ್ತಿದಾರೆ ಎಂದು ಹರಿಹಾಯ್ದರು.
ಸಿಎಂ ಪತ್ನಿ ಪಾರ್ವತಿ ಅವರು 14 ಸೈಟುಗಳನ್ನು ಸರೆಂಡರ್ ಮಾಡಿದ್ದನ್ನು ಇವರಿಬ್ಬರೂ ಹೇಗೆ ಸರೆಂಡರ್ ಮಾಡಿದ್ರು ಅಂತ ಪ್ರಶ್ನಿಸ್ತಾರೆ. ಕುಮಾರಸ್ವಾಮಿ ಅವರ ಮೇಲೆ 50 ಕೋಟಿ ಕೇಳಿ ಬೆದರಿಕೆ ಹಾಕಿದ ಬಗ್ಗೆ ಎಫ್‌ಐಆರ್ ಆಗಿದೆ. ಅಶೋಕ್ ಅವರ ಮೇಲೆ ಭೂಹಗರಣ ಎಫ್‌ಐಆರ್ ಆಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಮೇಲೆ ನೂರು ಕೇಸ್‌ಗಳಿವೆ. ಅವರ ಮೇಲೆ ಏನು ಕ್ರಮ ತೆಗೆದುಕೊಂಡ್ರು? ಎಂದು ಪ್ರಶ್ನಿಸಿದರು.
ಬಿಜೆಪಿ-ಜೆಡಿಎಸ್‌ನವರಿಗೆ ಮಾಡೋದಕ್ಕೆ ಬೇರೇನೂ ಕೆಲಸಗಳಿಲ್ಲ. ಸರ್ಕಾರವನ್ನು ಅಭದ್ರಗೊಳಿಸುವುದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಅವರಿಗೆ ಅಭಿವೃದ್ಧಿ ಕೆಲಸಗಳ ಬಗ್ಗೆ ಯೋಚನೆಯಿಲ್ಲ. ನಾವು ರಾಜ್ಯದ ಜನರ ಆಶಿರ್ವಾದದಿಂದ ಅಧಿಕಾರಕ್ಕೆ ಬಂದಿದ್ದೇವೆ. ಜನರ ಸರ್ಕಾರವನ್ನು ಅಸ್ಥಿರಗೊಳಿಸೋದಕ್ಕೆ ಇವರು ಪ್ರಯತ್ನಿಸ್ತಿದಾರೆ. ಹಿಂದೆ 14 ಜನ ಶಾಸಕರನ್ನು ಸಂಪರ್ಕಿಸಿ ನೂರಾರು ಕೋಟಿ ಆಮಿಷ ಒಡ್ಡಿದ್ರು. ಆದರೆ ಇವರ ಆಮಿಷೆಗಳಿಗೆ ಒಪ್ಪದಿದ್ದಕ್ಕೆ ಕೇಂದ್ರದ ಬಿಜೆಪಿ ಇಡಿ, ಐಟಿ, ಸಿಬಿಐ ದುರ್ಬಳಕೆ ಮಾಡ್ಕೊಳ್ತಿದಾರೆ. ಇದು ಸಾಲದ್ದಕ್ಕೆ ಡಿಸಿಎಂ ಮೇಲೆ ಒತ್ತಡ ತಂದ್ರು ಅದಕ್ಕೂ ಬಗ್ಗಲಿಲ್ಲ ಎಂದು ಇದೀಗ ಸಿಎಂ ಸಿದ್ದರಾಮಯ್ಯರ ಬೆನ್ನು ಬಿದ್ದಿದ್ದಾರೆ. ಸಿಎಂ ಸಿದ್ದರಾಮಯ್ಯರ ಹೆಸರಿಗೆ ಮಸಿ ಬಳೀಬೇಕು, ತೊಂದರೆ ಕೊಡಬೇಕು, ಅವರ ಸ್ಥಾನದಿಂದ ತೆಗೆದರೆ ಸರ್ಕಾರ ಬಿಳುತ್ತೆ ಅನ್ನುವ ಯೋಚನೆ ಬಿಜೆಪಿ ಜೆಡಿಎಸ್‌ನವರು ಮಾಡ್ತಿದ್ದಾರೆ. ಹಾಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಾದ ಮುಡಾ ಹಗರಣ ಹಿಡಿದು ಕೂತಿದ್ದಾರೆ. ಸರ್ಕಾರದ ಮೇಲೆ ಬೇರೆ ಬೇರೆ ರೀತಿಯ ಒತ್ತಡ ತರೋದನ್ನು ಸಹಿಸಲಾರದೇ ಸಿಎಂ ಪತ್ನಿ 14 ಸೈಟುಗಳನ್ನು ಸರಂಡರ್ ಮಾಡ್ತಿದಾರೆ. ಅದೇ ರೀತಿ ಅಶೋಕ್ ಹಾಗೂ ಕುಮಾರಸ್ವಾಮಿ ಹೇಗೆ ಸರೆಂಡರ್ ಮಾಡ್ತಾರೆ ಎಂದು ಪ್ರಶ್ನಿಸಿದರು.
ಕೇಂದ್ರ ಮಾಜಿ ಸಚಿವ ಯತ್ನಾಳ್ ಅವರು, ತಮ್ಮ ಪಕ್ಷದಲ್ಲಿ ಸಿಎಂ ಆಗಲು ಈಗಾಗಲೇ ಸಾವಿರಾರು ಕೋಟಿ ಇಟ್ಟುಕೊಂಡು ಕೂತಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ಸರ್ಕಾರ ಕೆಡವಿ ತಾವು ಸಿಎಂ ಆಗಲು ಕೂತಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ ಆದರೆ ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕಲ್ಲ? ಅಮಿತ್ ಶಾ ಮಾತಾಡಬೇಕಲ್ಲ? ಕರ್ನಾಟಕದಲ್ಲಿ ತಮ್ಮ ಪಕ್ಷ ಸರಿ ಇಟ್ಟುಕೊಳ್ಳಲು ಮೋದಿ, ಅಮಿತ್ ಶಾಗೆ ಆಗ್ತಿಲ್ಲ. ಹೀಗಾಗಿ ಆರೆಸ್ಸೆಸ್ ಮೂಲಕ ಕುಮಾರಕೃಪಾದಲ್ಲಿ ಸರಿ ಪಡಿಸುವ ಕೆಲಸ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಸಿಎಂ ಸಿದ್ದರಾಮಯ್ಯನವರು ತಪ್ಪು ಮಾಡಿಲ್ಲ ಅಂತಾ ಜೆಡಿಎಸ್ ಶಾಸಕ ಜಿಟಿ ದೇವೇಗೌಡರೇ ಹೇಳಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಎಫ್‌ಐಆರ್ ದಾಖಲಾದ ಮಾತ್ರಕ್ಕೆ ರಾಜೀನಾಮೆ ಕೊಡೋದಾದ್ರೆ ಮೊದಲು ಬಿಜೆಪಿ ಜೆಡಿಎಸ್ ನಲ್ಲಿ ಯಾರಾರ ಮೇಲೆ ಎಫ್‌ಐಆರ್ ಆಗಿದೆ ಅವರೆಲ್ಲರು ರಾಜೀನಾಮೆ ಕೊಡಲಿ ಎಂದು ಸವಾಲು ಹಾಕಿದ್ದರೆ. ಕೊಡ್ತಾರಾ ರಾಜೀನಾಮೆ?
ಮುಡಾ ಕೇಸ್‌ನಲ್ಲಿ ಸಾಕ್ಷ್ಯನಾಶ: ಸಿದ್ದರಾಮಯ್ಯ ವಿರುದ್ಧ ಇ.ಡಿ.ಗೆ 2ನೇ ಕಂಪ್ಲೇಂಟ್
ಜಿ.ಟಿ ದೇವೆಗೌಡ ಅವ್ರು ಸಿಎಂ ರಾಜೀನಾಮೆ ಕೊಡೊ ಅವಶ್ಯಕತೆ ಇಲ್ಲ ಅಂದಿದ್ದಾರೆ. ಬಿಜೆಪಿ-ಜೆಡಿಎಸ್‌ನವರು ಬೆಳಗ್ಗೆಯಿಂದ ಸಾಯಂಕಾಲದವರೆಗೆ ಹೇಳೋದೆಲ್ಲ ಸುಳ್ಳುಗಳೇ. ಇನ್ನು ರಾಜ್ಯದಲ್ಲಿ ವಿಜಯೇಂದ್ರ, ಅಶೋಕ್, ಕುಮಾರಸ್ವಾಮಿ ಯಡಿಯೂರಪ್ಪ ಭ್ರಷ್ಟಾಚಾರ ಮಾಡಿರುವುದು ಗೊತ್ತೇ ಇದೆ. ಅದರಲ್ಲಿ ಅಮಿತ್ ಶಾ, ಮೋದಿ ಎಲ್ಲರೂ ಭಾಗಿಯಾಗಿದ್ದಾರೆ. ಹೀಗಾಗಿ ಪಕ್ಷವನ್ನು ಶಿಸ್ತಿನಲ್ಲಿಡಲು ಆಗದೇ ಆರೆಸ್ಸೆಸ್ ಮೂಲಕ ಮೀಟಿಂಗ್ ಮಾಡಿಸುತ್ತಿದ್ದಾರೆ ಎಂದ ಸಚಿವರು.