Asianet Suvarna News Asianet Suvarna News

ನಾನು ಮೌಖಿಕ ಆದೇಶ ಕೊಟ್ಟಿಲ್ಲ, ರಾಜೀನಾಮೆ ಪ್ರಶ್ನೆಯೇ ಇಲ್ಲ: ಸಚಿವ ನಾಗೇಂದ್ರ

ವ್ಯವಸ್ಥಾಪಕ ನಿರ್ದೇಶಕರು ಅನುದಾನವನ್ನು ಒತ್ತಾಯಪೂರ್ವಕವಾಗಿ ವರ್ಗಾಯಿಸಿದ್ದಾರೆ ಎಂದು ಹೇಳಲಾಗಿದೆ. ತಮಗೆ ಇದರ ಒಳಸಂಚು ಅರ್ಥವೇ ಆಗಿಲ್ಲ. ಮೃತ ಚಂದ್ರಶೇಖರ್‌, ನನ್ನ ಹೆಸರನ್ನು ಯಾಕೆ ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ. ನಾನು ಯಾವುದೇ ಆದೇಶವನ್ನೂ ಮೌಖಿಕವಾಗಿ ನೀಡಿಲ್ಲ. ಎಲ್ಲವನ್ನೂ ಲಿಖಿತವಾಗಿಯೇ ಸೂಚನೆ ನೀಡುತ್ತೇನೆ ಎಂದ ಸಚಿವ ನಾಗೇಂದ್ರ 

Minister B Nagendra React to Suicide Case in Karnataka grg
Author
First Published May 29, 2024, 6:00 AM IST

ಬೆಂಗಳೂರು(ಮೇ.29): ‘ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಮಾಡುವಂತೆ ಯಾವುದೇ ಮೌಖಿಕ ಆದೇಶವನ್ನು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ್‌ ಅವರಿಗೆ ನೀಡಿಲ್ಲ. ಎಲ್ಲ ಆದೇಶವನ್ನು ಲಿಖಿತವಾಗಿ ನೀಡುತ್ತೇನೆ. ಹಣ ವರ್ಗಾವಣೆಯಲ್ಲಿ ನನ್ನ ಪಾತ್ರ ಇಲ್ಲವೇ ಇಲ್ಲ’ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ನಿಗಮದ ಹಣ ವರ್ಗಾವಣೆ ಮತ್ತು ಅಧಿಕಾರಿಯ ಆತ್ಯಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ತನಿಖಾ ವರದಿ ಬಂದ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದ ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ ಹಾಗೂ ಅವರು ತಮ್ಮ ಆತ್ಮಹತ್ಯಾ ಪತ್ರದಲ್ಲಿ ನಿಗಮದಲ್ಲಿನ ಭ್ರಷ್ಟಾಚಾರ ಹಾಗೂ ತಮ್ಮ ಹೆಸರು ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯಿಸಿದರು. ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ತನಿಖೆ ನಡೆಯುತ್ತಿದ್ದು, ಶೀಘ್ರವೇ ಕ್ರಮ ಜರುಗಿಸಲಾಗುವುದು. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ತಳುಕು ಹಾಕಲಾಗಿದೆ ಎಂಬುದೇ ಗೊತ್ತಿಲ್ಲ’ ಎಂದರು.

ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ ಸಚಿವಗೆ ಉರುಳು?: ನಾಗೇಂದ್ರ ರಾಜೀನಾಮೆಗೆ ಬಿಜೆಪಿ ನಾಯಕರ ಬಿಗಿಪಟ್ಟು

ರಾಜೀನಾಮೆ ಪ್ರಶ್ನೆಯೇ ಇಲ್ಲ:

‘ಇಷ್ಟು ಬೃಹತ್‌ ಮೊತ್ತದ ಹಣವನ್ನು ವರ್ಗಾವಣೆ ಮಾಡುವಾಗ ತಮ್ಮ ಗಮನಕ್ಕೆ ತರದೇ ಇರುವುದು ವ್ಯವಸ್ಥಾಪಕ ನಿರ್ದೇಶಕರ ಲೋಪವಾಗಿದೆ. ಈ ಕಾರಣಕ್ಕೆ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಪ್ರಕರಣದ ಬಗ್ಗೆ ನನಗೆ ಯಾವ ಮಾಹಿತಿಯೂ ಇರಲಿಲ್ಲ. ನಿಗಮ ಪ್ರತ್ಯೇಕವಾದ ಸಂಸ್ಥೆಯಾಗಿದೆ. ಹೀಗಾಗಿ ಪ್ರತಿಪಕ್ಷಗಳು ಒತ್ತಾಯಿಸುವಂತೆ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಮಾಜಿ ಸಚಿವ ಕೆ.ಎಸ್‌‍.ಈಶ್ವರಪ್ಪ ಅವರ ಪ್ರಕರಣವೇ ಬೇರೆ, ಈ ಪ್ರಕರಣವೇ ಬೇರೆ’ ಎಂದು ಸಮರ್ಥಿಸಿಕೊಂಡರು.

ಬ್ಯಾಂಕ್‌ ವಿರುದ್ಧ ಎಫ್‌ಐಆರ್‌:

ನಿಗಮದಲ್ಲಿದ್ದ 187 ಕೋಟಿ ರು. ಪೈಕಿ 88 ಕೋಟಿ ರು.ಗಳನ್ನು ಯೂನಿಯನ್‌ ಬ್ಯಾಂಕ್‌ನ ನಿಗಮದ ಖಾತೆಯಿಂದ ಅದೇ ಬ್ಯಾಂಕಿನ ಮತ್ತೊಂದು ಶಾಖೆಯ ನಕಲಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರ ಹಿಂದೆ ಬ್ಯಾಂಕ್‌ ಅಧಿಕಾರಿಗಳ ಪಾತ್ರ ಇರುವ ಶಂಕೆ ಇದೆ. ವರ್ಗಾವಣೆಯಾಗಿದ್ದ ಹಣದ ಪೈಕಿ 28 ಕೋಟಿ ರು. ಗಳನ್ನು ಮರು ವಸೂಲಿ ಮಾಡಿ ನಿಗಮದ ಖಾತೆಯಲ್ಲಿಡಲಾಗಿದೆ. ಬಾಕಿ ಇರುವ ಮೊತ್ತವನ್ನು ಮರಳಿಸಬೇಕು, ಇಲ್ಲದೇ ಹೋದರೆ ಯೂನಿಯನ್‌ ಬ್ಯಾಂಕ್‌ನ ಅಧ್ಯಕ್ಷರು, ನಿರ್ದೇಶಕರು ಮತ್ತು ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಅವರು ತಮ್ಮ ಗಮನಕ್ಕೆ ಬಾರದೆ, ಸಹಿಯನ್ನು ನಕಲು ಮಾಡಿ ಹಣ ವರ್ಗಾವಣೆ ಮಾಡಲಾಗಿದೆ ಎಂದಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ನಕಲು ಸಹಿ ಕುರಿತು ಪರಿಶೀಲಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇಡೀ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ವ್ಯವಸ್ಥಾಪಕ ನಿರ್ದೇಶಕರೂ ಸೇರಿದಂತೆ ಯಾರ ವಿರುದ್ಧವೂ ಮೃದು ಧೋರಣೆ ಅನುಸರಿಸುವುದಿಲ್ಲ’ ಎಂದು ತಿಳಿಸಿದರು.

News Hour: ಅಕ್ರಮಕ್ಕೆ ಸಹಕರಿಸಿದ್ರೆ ಕಾಣಿಕೆ, ಇಲ್ಲದಿದ್ರೆ ಕುಣಿಕೆ ಗ್ಯಾರಂಟಿ!

‘ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್‌ ಅವರು ನಿಗಮದ ಎಂಡಿ ಜೆ.ಜಿ.ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ ದುರಗಣ್ಣವರ್, ಯೂನಿಯನ್ ಬ್ಯಾಂಕ್‌ ವ್ಯವಸ್ಥಾಪಕರಾದ ಶುಚಿಸ್ಮಿತಾ ರವುಲ್ ಅವರ ಹೆಸರನ್ನು ಬರೆದಿಟ್ಟಿರುವ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ. ಅಲ್ಲದೇ, ಆರ್ಥಿಕ ಇಲಾಖೆಯ ಮುಖ್ಯ ಅಧಿಕಾರಿಗಳ ತಂಡ ನಿಗಮದ ಕೇಂದ್ರ ಕಚೇರಿಗೆ ತೆರಳಿ ಎಲ್ಲ ಲೆಕ್ಕಪತ್ರಗಳನ್ನು ಸುದೀರ್ಘವಾಗಿ ಪರಿಶೀಲಿಸಿದೆ. ಈ ವೇಳೆ ನಿಗಮದ ಅಧಿಕಾರಿಗಳಿಗೆ ತಿಳಿಯದೆ ನಕಲು ಸಹಿ ಬಳಸಿ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎನ್ನಲಾಗಿದೆ’ ಎಂದರು.

‘ವ್ಯವಸ್ಥಾಪಕ ನಿರ್ದೇಶಕರು ಅನುದಾನವನ್ನು ಒತ್ತಾಯಪೂರ್ವಕವಾಗಿ ವರ್ಗಾಯಿಸಿದ್ದಾರೆ ಎಂದು ಹೇಳಲಾಗಿದೆ. ತಮಗೆ ಇದರ ಒಳಸಂಚು ಅರ್ಥವೇ ಆಗಿಲ್ಲ. ಮೃತ ಚಂದ್ರಶೇಖರ್‌, ನನ್ನ ಹೆಸರನ್ನು ಯಾಕೆ ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ. ನಾನು ಯಾವುದೇ ಆದೇಶವನ್ನೂ ಮೌಖಿಕವಾಗಿ ನೀಡಿಲ್ಲ. ಎಲ್ಲವನ್ನೂ ಲಿಖಿತವಾಗಿಯೇ ಸೂಚನೆ ನೀಡುತ್ತೇನೆ’ ಎಂದು ಸಚಿವ ನಾಗೇಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Latest Videos
Follow Us:
Download App:
  • android
  • ios