Asianet Suvarna News Asianet Suvarna News

ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ ಸಚಿವಗೆ ಉರುಳು?: ನಾಗೇಂದ್ರ ರಾಜೀನಾಮೆಗೆ ಬಿಜೆಪಿ ನಾಯಕರ ಬಿಗಿಪಟ್ಟು

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ‌ನಿಗಮದ ಎಂಜಿನಿಯರ್ ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ ನಾಗೇಂದ್ರರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ನಿಗಮದಲ್ಲಿ 85 ಕೋಟಿ ರು. ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ: ಬಿ.ವೈ. ವಿಜಯೇಂದ್ರ 
 

BJP Leaders Demand for Minister B Nagendra's Resignation grg
Author
First Published May 29, 2024, 4:20 AM IST

ಬೆಂಗಳೂರು(ಮೇ.29): ಕೋಟ್ಯಂತರ ರು. ಹಣ ವರ್ಗಾವಣೆ ಕಾರಣ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ, ‘ಸಚಿವರ ಮೌಖಿಕ ಸೂಚನೆ ಮೇರೆಗೆ ಹಣ ವರ್ಗ’ ಎಂಬ ಉಲ್ಲೇಖ ಇರುವುದರಿಂದ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಸಚಿವರ ರಾಜೀನಾಮೆಗೆ ತೀವ್ರ ಒತ್ತಡ ನಿರ್ಮಾಣ ಮಾಡಲಾರಂಭಿಸಿವೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಡೆತ್‌ನೋಟ್‌ ಬರೆದಿಟ್ಟಿದ್ದು, ತಮ್ಮ ಆತ್ಮಹತ್ಯೆಗೆ ಸಚಿವರೂ ಕಾರಣ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಆ ಇಲಾಖೆಯ ಸಚಿವರಾಗಿರುವ ಬಿ. ನಾಗೇಂದ್ರ ಅವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಡೆತ್‌ನೋಟ್‌ನಲ್ಲಿ ಸಚಿವರು ಎಂದು ಉಲ್ಲೇಖಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಅಲ್ಲದೆ, ಪ್ರಕರಣವನ್ನು ಮಾಜಿ ಸಚಿವ. ಕೆ.ಎಸ್. ಈಶ್ವರಪ್ಪ ರಾಜೀನಾಮೆ ಪ್ರಕರಣಕ್ಕೆ ಹೋಲಿಕೆ ಮಾಡುತ್ತಿರುವ ವಿರೋಧ ಪಕ್ಷದ ನಾಯಕರು, ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.

News Hour: ಅಕ್ರಮಕ್ಕೆ ಸಹಕರಿಸಿದ್ರೆ ಕಾಣಿಕೆ, ಇಲ್ಲದಿದ್ರೆ ಕುಣಿಕೆ ಗ್ಯಾರಂಟಿ!

ರಾಜೀನಾಮೆ ನೀಡಿದ್ದ ಈಶ್ವರಪ್ಪ:

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಎಂಬುವವರು ತಾವು ಮಾಡಿದ್ದ ಕಾಮಗಾರಿಗೆ ಬಿಲ್‌ ಪಾವತಿಯಾಗದೇ ಇರಲು ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಕಾರಣ ಎಂದು ಡೆತ್‌ನೋಟ್‌ ಬರೆದಿಟ್ಟು ಉಡುಪಿಯ ಲಾಡ್ಜೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣವನ್ನು ಅಸ್ತ್ರವನ್ನಾಗಿಸಿಕೊಂಡಿದ್ದ ಆಗಿನ ವಿರೋಧ ಪಕ್ಷ ಕಾಂಗ್ರೆಸ್‌ನ ನಾಯಕರು, ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಅಲ್ಲದೆ, ಈ ಕುರಿತು ರಾಜ್ಯಾದ್ಯಂತ ಪ್ರತಿಭಟನೆಯನ್ನೂ ನಡೆಸಿದ್ದರು. ಕೊನೆಗೆ ವಿಪಕ್ಷಗಳ ಒತ್ತಡಕ್ಕೆ ಮಣಿದು ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು:

ಇದೀಗ ಬಿ. ನಾಗೇಂದ್ರ ಅವರಿಗೂ ಈಶ್ವರಪ್ಪ ಅವರಿಗೆ ಎದುರಾದಂತಹ ಪರಿಸ್ಥಿತಿಯೇ ಎದುರಾಗುತ್ತಿದ್ದು, ನಾಗೇಂದ್ರ ರಾಜೀನಾಮೆಗೆ ವಿರೋಧ ಪಕ್ಷ ಬಿಜೆಪಿ ಆಗ್ರಹಿಸುತ್ತಿದೆ. ಅಲ್ಲದೆ, ಆ ಕುರಿತು ರಾಜ್ಯಾದ್ಯಂತ ಪ್ರತಿಭಟನೆಯ ಯೋಜನೆಯನ್ನೂ ರೂಪಿಸುತ್ತಿದೆ.

ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಲಬುರಗಿಯಲ್ಲಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ‌ನಿಗಮದ ಎಂಜಿನಿಯರ್ ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ ನಾಗೇಂದ್ರರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ನಿಗಮದಲ್ಲಿ 85 ಕೋಟಿ ರು. ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ಅದಕ್ಕಾಗಿಯೇ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿ ಉನ್ನತ ಅಧಿಕಾರಿಗಳ ಹೆಸರನ್ನೂ ಬರೆದಿಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸಚಿವ ನಾಗೇಂದ್ರರನ್ನು ವಜಾಗೊಳಿಸದಿದ್ದರೆ, ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಬಡವರ ಪರ; ಬಿಜೆಪಿ ಶ್ರೀಮಂತರ ಹಿತ ಕಾಯಲು ಸೀಮಿತ: ಸಚಿವ ನಾಗೇಂದ್ರ ವಾಗ್ದಾಳಿ

ನಾಗೇಂದ್ರ ವಜಾ ಆಗದಿದ್ದರೆ ರಾಜ್ಯಾದ್ಯಂತ ಹೋರಾಟ

ವಾಲ್ಮೀಕಿ ನಿಗಮದಲ್ಲಿ 85 ಕೋಟಿ ರು. ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ಅದಕ್ಕಾಗಿಯೇ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿ ಉನ್ನತ ಅಧಿಕಾರಿಗಳ ಹೆಸರನ್ನೂ ಬರೆದಿಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು. ನಾಗೇಂದ್ರರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ವಜಾಗೊಳಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. 

ಏನಿದು ಪ್ರಕರಣ?

- ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಭಾನುವಾರ ಆತ್ಮಹತ್ಯೆ

- ಶಿವಮೊಗ್ಗದಲ್ಲಿ ಸಾವಿಗೆ ಶರಣಾಗುವ ಮುನ್ನ 6 ಪುಟ ಡೆತ್‌ನೋಟ್‌ ಬರೆದಿರುವ ಅಧಿಕಾರಿ
- ನಿಗಮದ 187 ಕೋಟಿ ರು. ಅನುದಾನ ಪೈಕಿ 80-85 ಕೋಟಿ ರು. ಬೇರೆಡೆಗೆ ವರ್ಗಾವಣೆ
- ಈ ವರ್ಗಾವಣೆಗೆ ಸಚಿವರಿಂದ ಮೌಖಿಕ ಆದೇಶ ನನಗೆ ಬಂದಿತ್ತು ಎಂದು ಪತ್ರದಲ್ಲಿ ಉಲ್ಲೇಖ
- ನಿಗಮದ ಎಂಡಿ ಪದ್ಮನಾಭ, ಅಕೌಂಟ್‌ ವ್ಯವಸ್ಥಾಪಕ ಪರಶುರಾಮ್‌ ದುರ್ಗಣ್ಣವರ್ ಹೆಸರು ನಮೂದು
- ಜತೆಗೆ ಯೂನಿಯನ್‌ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕರಾದ ಶುಚಿಸ್ಮಿತ ಅವರ ಬಗ್ಗೆಯೂ ಉಲ್ಲೇಖ
- ಅವ್ಯವಹಾರದಲ್ಲಿ ನನ್ನ ಪಾತ್ರವಿಲ್ಲ. ಆದರೆ ಕೆಲಸದ ಒತ್ತಡದಲ್ಲಿ ನನ್ನಿಂದ ತಪ್ಪಾಗಿದೆ ಎಂದು ಮಾಹಿತಿ
- ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮರಣಪತ್ರದಲ್ಲಿ ಚಂದ್ರಶೇಖರನ್‌ ಒತ್ತಾಯ

Latest Videos
Follow Us:
Download App:
  • android
  • ios