ಸಚಿವ ಅಶ್ವತ್ಥನಾರಾಯಣ ನೇತೃತ್ವದಲ್ಲಿ ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ, ರೇಷ್ಮೆ ಸೀರೆ ಸಮರ್ಪಿಸಿದ ರಾಮನಗರ ಭಕ್ತರು

ಕರ್ನಾಟಕದ ರಾಮನಗರ ಜಿಲ್ಲೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ..ಸಿ ಎನ್ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಉತ್ತರ ಪ್ರದೇಶಕ್ಕೆ ಆಗಮಿಸಿರುವ 150 ಯಾತ್ರಾರ್ಥಿಗಳ ತಂಡವು ಆಯೋಧ್ಯೆಯಲ್ಲಿ ಮೈದಾಳುತ್ತಿರುವ ಭವ್ಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿತು.

minister ashwath narayan and team visit Ayodhya Ram Mandir gow

ಉತ್ತರ ಪ್ರದೇಶ (ಡಿ.15): ಕರ್ನಾಟಕದ ರಾಮನಗರ ಜಿಲ್ಲೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ..ಸಿ ಎನ್ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಇಲ್ಲಿಗೆ ಆಗಮಿಸಿರುವ 150 ಯಾತ್ರಾರ್ಥಿಗಳ ತಂಡವು ಇಲ್ಲಿ ಮೈದಾಳುತ್ತಿರುವ ಭವ್ಯ ಶ್ರೀರಾಮ ಮಂದಿರಕ್ಕೆ 1.50 ಕೆ.ಜಿ. ತೂಕದ ಬೆಳ್ಳಿ ಇಟ್ಟಿಗೆ, ಸೀತಾಮಾತೆಗೆ ಸ್ಥಳೀಯ ರೇಷ್ಮೆ ಸೀರೆ, ರಾಮ-ಲಕ್ಷ್ಮಣರಿಗೆ ಶಲ್ಯಗಳನ್ನು ಗುರುವಾರ ಸಮರ್ಪಿಸಿತು.

ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಚಿವರ ನೇತೃತ್ವದಲ್ಲಿ ಭಕ್ತರ ತಂಡವು ರಾಮ ಮಂದಿರ ಆವರಣಕ್ಕೆ ಆಗಮಿಸಿತು. ನಂತರ, ಇಲ್ಲಿರುವ ಕನ್ನಡಿಗ ಅರ್ಚಕರಾದ ಗೋಪಾಲ್‌ ಭಟ್‌ ಮತ್ತು ಅವರ ತಂಡವು ರಾಮನಗರದ ತಂಡವು ಭಕ್ತಿ-ಗೌರವಗಳೊಂದಿಗೆ ತಂದಿದ್ದ ಕಾಣಿಕೆಗಳಿಗೆ ವಿಧಿಬದ್ಧವಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಯೋಧ್ಯೆಯ ಪವಿತ್ರ ಮೃತ್ತಿಕೆಯನ್ನು ಕೂಡ ಶಾಸ್ತ್ರೋಕ್ತವಾಗಿ ಪೂಜಿಸಿ, ಸಚಿವರು ಮತ್ತು ಅವರ ಸಹಯಾತ್ರಾರ್ಥಿಗಳಿಗೆ ವಿತರಿಸಲಾಯಿತು. ಈ ಮೃತ್ತಿಕೆಯನ್ನು ರಾಮದೇವರ ಬೆಟ್ಟಕ್ಕೆ ಸಮರ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಬಳಿಕ, ಮಂದಿರದ ಆವರಣದಲ್ಲಿ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪಕ್ ರಾಯ್‌ ಮತ್ತು ನ್ಯಾಸದ ಪದಾಧಿಕಾರಿಗಳಿಗೆ ಈ ಕಾಣಿಕೆಗಳನ್ನು ರಾಮನಗರ ಜಿಲ್ಲೆಯ ಪರವಾಗಿ ಸಚಿವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅವರ ಜತೆಗಿದ್ದ ಭಕ್ತಗಣವು 'ಭಾರತ್‌ ಮಾತಾ ಕೀ ಜೈ, ಗಂಗಾ ಮಾತಾ ಕೀ ಜೈ, ಸರಯೂ ಮಾತಾ ಕೀ ಕೈ, ಜೈ ಶ್ರೀ ರಾಮ್‌ ಮುಂತಾದ ಘೋಷಣೆಗಳನ್ನು ಉತ್ಸಾಹದಿಂದ ಮೊಳಗಿಸಿತು. ಯಾತ್ರಾರ್ಥಿಗಳ ಈ ಉತ್ಸಾಹಕ್ಕೆ ಅಶ್ವತ್ಥನಾರಾಯಣ ಅವರೂ ದನಿಗೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 'ರಾಮದೇವರ ಬೆಟ್ಟದ ತಾಣವಾದ ರಾಮನಗರವು ಪರಮಾತ್ಮನಾದ ಶ್ರೀರಾಮನ ಹೆಸರನ್ನೇ ಹೊತ್ತಿದೆ. ಜತೆಗೆ ಈ ಬೆಟ್ಟದಲ್ಲಿ ದೇಶದಲ್ಲೇ ಅಪರೂಪವಾಗಿರುವ ರಣಹದ್ದಿನ ಸಂತತಿ ಉಳಿದುಕೊಂಡಿದೆ. ರಾಮಾಯಣದಲ್ಲೂ ಈ ಸಂತತಿಗೆ ಸೇರಿದ ಜಟಾಯು, ಸಂಪಾತಿಗಳ ಪಾತ್ರವಿದೆ. ಹೀಗೆ ರಾಮನಗರ, ರಾಮ ಮತ್ತು ರಾಮಾಯಣಗಳ ನಡುವೆ ಮಧುರ ಬಾಂಧವ್ಯವಿದೆ' ಎಂದು ಸ್ಮರಿಸಿದರು.

'ಶ್ರೀರಾಮನು ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಭಾರತೀಯತೆಯ ಪ್ರತೀಕವಾಗಿದ್ದಾನೆ. ನಮ್ಮೆಲ್ಲರ ಪಾಲಿನ ಆದರ್ಶಮೂರ್ತಿಯಾಗಿರುವ ಶ್ರೀರಾಮನಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. 2024ರ ಜನವರಿಯ ಹೊತ್ತಿಗೆ ಮಂದಿರದ ಕಾಮಗಾರಿಗಳು ಮುಗಿದು, ಜನರಿಗೆ ದರ್ಶನಕ್ಕೆ ಮುಕ್ತಗೊಳಿಸಲಾಗುವುದು' ಎಂದು ಅವರು ನುಡಿದರು.

'ರಾಮನಿಂದ ನಮ್ಮಲ್ಲಿ ರಾಮರಾಜ್ಯದ ಪರಿಕಲ್ಪನೆ ಬಂದಿದೆ. ತ್ರೇತಾಯುಗದಿಂದಲೂ ರಾಮನು ಭಾರತೀಯರನ್ನು ಒಗ್ಗೂಡಿಸುವ ಶಕ್ತಿಯಾಗಿ ಉಳಿದುಕೊಂಡು ಬಂದಿದ್ದಾನೆ. ಇಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರಕ್ಕೆ ತಮ್ಮ ಕಾಣಿಕೆಯೂ ಇರಬೇಕೆಂದು ರಾಮನಗರದ ಭಕ್ತ ಮಹಾಶಯರು ಅಪೇಕ್ಷೆ ವ್ಯಕ್ತಪಡಿಸಿದರು. ಈ ಮೂಲಕ ರಾಮನಗರದ ಜನತೆಗೆ ಪರಮಾತ್ಮನ ಆಶೀರ್ವಾದ ಸಿಕ್ಕಿದೆ' ಎಂದು ಸಚಿವರು ಬಣ್ಣಿಸಿದರು.

Ayodhya ರಾಮಮಂದಿರ ಗರ್ಭಗುಡಿ ವಿನ್ಯಾಸ ಅಂತಿಮ: ರಾಮ​ನ​ವಮಿ ದಿನ ರಾಮನ ಮೇಲೆ ಬೀಳ​ಲಿದೆ ಸೂರ್ಯರಶ್ಮಿ..!

ಪೂಜೆಯ ಬಳಿಕ ಸಚಿವರು ಮತ್ತು ಯಾತ್ರಾರ್ಥಿಗಳು ಪ್ರಗತಿಯಲ್ಲಿರುವ ಮಂದಿರವನ್ನು ವೀಕ್ಷಿಸಿ, ದೇಗುಲದಲ್ಲಿ ದರ್ಶನ ಪಡೆದು ಪುನೀತರಾದರು. ಸಚಿವರ ಜೊತೆ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜು, ರಾಜ್ಯ ರೇಷ್ಮೆ ಕೈಗಾರಿಕೆ ಉದ್ಯಮಗಳ ನಿಗಮದ ಅಧ್ಯಕ್ಷ ಗೌತಮ್‌ ಗೌಡ ಸೇರಿದಂತೆ ಹಲವರು ಇದ್ದರು.

 

ಮಕರ ಸಂಕ್ರಾಂತಿ ವೇಳೆಗೆ ಅಯೋಧ್ಯೆ ರಾಮಮಂದಿರ ಪೂರ್ಣ

ರಾಮನಗರದಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರೊಂದಿಗೆ ಅಯೋಧ್ಯೆಗೆ ತೆರಳಿರುವ 150 ಯಾತ್ರಾರ್ಥಿಗಳ ತಂಡವು ಗುರುವಾರ ಅಲ್ಲಿನ ರಾಮಮಂದಿರದಲ್ಲಿ ಬೆಳ್ಳಿ ಇಟ್ಟಿಗೆ, ರೇಷ್ಮೆ ಸೀರೆ ಮತ್ತು ಶಲ್ಯಗಳನ್ನು ರಾಮ ಮಂದಿರ ನ್ಯಾಸದ ಪದಾಧಿಕಾರಿಗಳಿಗೆ ಹಸ್ತಾಂತರಿಸಿತು. ಅಲ್ಲದೆ, ಈ ತಂಡವು ಅಯೋಧ್ಯೆಯ ಪವಿತ್ರ ಮೃತ್ತಿಕೆಯನ್ನು ಸ್ವೀಕರಿಸಿತು.

Latest Videos
Follow Us:
Download App:
  • android
  • ios