ಸದ್ಯ ರಾಜ್ಯ ಸರ್ಕಾರ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಯತ್ತ ಹೆಚ್ಚಿನ ಗಮನಹರಿಸಿದೆ. ಆ ಎರಡು ಯೋಜನೆಗಳ ಫಲಾನುಭವಿಗಳಿಂದ ಅರ್ಜಿ ಸ್ವೀಕಾರ, ಅವುಗಳ ಪರಿಶೀಲನೆ ಸೇರಿ ಇನ್ನಿತರ ಕಾರ್ಯಗಳನ್ನು ಮಾಡಬೇಕಿದೆ. ಹೀಗಾಗಿ ಶಕ್ತಿ ಯೋಜನೆಯ ಸ್ಮಾರ್ಟ್‌ಕಾರ್ಡ್‌ ವಿತರಣೆ ಬಗ್ಗೆ ಇನ್ನೂ ಚಿಂತನೆ ನಡೆಸಿಲ್ಲ. ಅಲ್ಲದೆ, ಸಾರಿಗೆ ಇಲಾಖೆ ಹಾಗೂ ನಾಲ್ಕೂ ನಿಗಮಗಳು ಕೂಡ ಸ್ಮಾರ್ಟ್‌ಕಾರ್ಡ್‌ ವಿತರಣೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. 

ಗಿರೀಶ್‌ ಗರಗ

ಬೆಂಗಳೂರು(ಜು.16): ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ನಿರ್ವಾಹಕರು ಪ್ರತಿಬಾರಿ ಉಚಿತ ಟಿಕೆಟ್‌ ನೀಡುವ ಕಿರಿಕಿರಿ ತಪ್ಪಿಸಲು ಮಾಮೂಲಿ ಸ್ಮಾರ್ಟ್‌ಕಾರ್ಡ್‌ ಬದಲು, ಟ್ಯಾಪ್‌ ಆ್ಯಂಡ್‌ ಟ್ರಾವೆಲ್‌ ತಂತ್ರಜ್ಞಾನದ ಸ್ಮಾರ್ಟ್‌ಕಾರ್ಡ್‌ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಆದರೆ, ಈ ಯೋಜನೆ ದುಬಾರಿಯಾಗಲಿದ್ದು, ಆರ್ಥಿಕ ಪರಿಸ್ಥಿತಿಯನ್ನಾಧರಿಸಿ ಜಾರಿಗೆ ತರುವ ಬಗ್ಗೆಯೂ ಚರ್ಚಿಸಲಾಗಿದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್‌ಗಳಲ್ಲಿ ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರಿಗೆ ಮಾತ್ರ ಅನ್ವಯವಾಗುವ ಕಾರಣ, ಬಸ್‌ಗಳ ನಿರ್ವಾಹಕರು ಪ್ರತಿ ಮಹಿಳೆಯರ ದಾಖಲೆ (ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಸೇರಿದಂತೆ ಮತ್ತಿತರ)ಗಳನ್ನು ಪರಿಶೀಲಿಸಿಯೇ ಉಚಿತ ಟಿಕೆಟ್‌ ನೀಡಬೇಕಿದೆ. ಒಂದು ವೇಳೆ ಬೇರೆ ರಾಜ್ಯದ ಮಹಿಳಾ ಪ್ರಯಾಣಿಕರಿದ್ದರೆ ಅವರಿಗೆ ಪುರುಷರಿಗೆ ನೀಡುವ ಮಾದರಿಯಲ್ಲಿ ಹಣ ಪಡೆದು ಟಿಕೆಟ್‌ ನೀಡಬೇಕಿದೆ. ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೆ, ಪ್ರತಿ ಮಹಿಳಾ ಪ್ರಯಾಣಿಕರ ದಾಖಲೆ ಪರಿಶೀಲಿಸಿ ಟಿಕೆಟ್‌ ನೀಡುವುದಕ್ಕೆ ಸಾಕಷ್ಟು ಸಮಯ ತಗುಲಲಿದೆ. ಇದರಿಂದ ನಿರ್ವಾಹಕರು ಸಾಕಷ್ಟುಕಿರಿಕಿರಿ ಅನುಭವಿಸುತ್ತಿದ್ದು, ಅದಕ್ಕಾಗಿ ಮಹಿಳಾ ಪ್ರಯಾಣಿಕರಿಗೆ ಟ್ಯಾಪ್‌ ಆ್ಯಂಡ್‌ ಟ್ರಾವೆಲ್‌ ಸ್ಮಾರ್ಟ್‌ಕಾರ್ಡ್‌ ವಿತರಿಸಲು ಚಿಂತನೆ ನಡೆಸಲಾಗಿದೆ. ಮಹಿಳೆಯರಿಗೆ ಟ್ಯಾಪ್‌ ಸ್ಮಾರ್ಟ್‌ಕಾರ್ಡ್‌ ವಿತರಿಸಿದರೆ ಅದನ್ನಾಧರಿಸಿ ಸೇವೆ ನೀಡುವುದು ನಿರ್ವಾಹಕರಿಗೆ ಸುಲಭ ಎಂಬುದು ಚಿಂತನೆ.

ಸಾರಿಗೆ ಸಚಿವರು ನೋಡಲೇಬೇಕಾದ ಸುದ್ದಿ, ಫುಟ್‌ಬೋರ್ಡ್‌ನಲ್ಲೇ ಮಗು ಹಿಡಿದು ಮಹಿಳೆ ಪ್ರಯಾಣ!

ಏನಿದು ಟ್ಯಾಪ್‌ ಆ್ಯಂಡ್‌ ಟ್ರಾವೆಲ್‌ ಸ್ಮಾರ್ಟ್‌ಕಾರ್ಡ್‌?

ಸದ್ಯ ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ಟ್ಯಾಪ್‌ ಆ್ಯಂಡ್‌ ಟ್ರಾವೆಲ್‌ ಸ್ಮಾರ್ಟ್‌ಕಾರ್ಡ್‌ ಬಳಸಲಾಗುತ್ತಿದೆ. ಅದೇ ಮಾದರಿಯ ಸ್ಮಾರ್ಟ್‌ಕಾರ್ಡ್‌ನ್ನು ಮಹಿಳಾ ಪ್ರಯಾಣಿಕರಿಗೆ ನೀಡುವ ಬಗ್ಗೆಯೂ ಚರ್ಚಿಸಲಾಗಿದೆ. ಈ ಟ್ಯಾಪ್‌ ಸ್ಮಾರ್ಟ್‌ಕಾರ್ಡ್‌ ಗಳನ್ನು ನೀಡಿದರೆ ಮಹಿಳೆಯರು ಬಸ್‌ ಹತ್ತುವಾಗ ಬಾಗಿಲಲ್ಲಿ ಅಳವಡಿಸುವ ಯಂತ್ರಕ್ಕೆ ಟ್ಯಾಪ್‌ ಮಾಡಿ ನಂತರ ಇಳಿಯುವಾಗ ಮತ್ತೊಮ್ಮೆ ಟ್ಯಾಪ್‌ ಮಾಡಬೇಕಿದೆ. ಆಗ ಮಹಿಳಾ ಪ್ರಯಾಣಿಕರು ಎಲ್ಲಿಂದ, ಎಲ್ಲಿಗೆ ಪ್ರಯಾಣಿಸಿದರು ಎಂಬ ನಿಖರ ಮಾಹಿತಿ ಪಡೆಯಬಹುದು ಎನ್ನುತ್ತಾರೆ ಅಧಿಕಾರಿಗಳು.

ನಿಗಮಗಳಿಗೆ ಆರ್ಥಿಕ ಹೊರೆ

ಈ ನಡುವೆ, ಟ್ಯಾಪ್‌ ಆ್ಯಂಡ್‌ ಟ್ರಾವೆಲ್‌ ಸ್ಮಾರ್ಟ್‌ಕಾರ್ಡ್‌ ನೀಡುವ ಬಗ್ಗೆ ಚರ್ಚಿಸಲಾಗಿದೆಯಾದರೂ, ಅದರಿಂದ ನಿಗಮಗಳ ಮೇಲಾಗುವ ಆರ್ಥಿಕ ಹೊರೆ ಬಗ್ಗೆಯೂ ಚಿಂತಿಸಬೇಕಿದೆ. ಪ್ರತಿ ಟ್ಯಾಪ್‌ ಸ್ಮಾರ್ಟ್‌ಕಾರ್ಡ್‌ಗೆ ಕನಿಷ್ಠ 20ರಿಂದ 30 ರು. ತಗಲುಲಿದ್ದು, ಕನಿಷ್ಠ 2 ಕೋಟಿ ಸ್ಮಾರ್ಟ್‌ಕಾರ್ಡ್‌ ವಿತರಿಸಬೇಕಿದೆ. ಅದನ್ನು ಗಮನಿಸಿದರೆ ಸ್ಮಾರ್ಟ್‌ಕಾರ್ಡ್‌ಗಾಗಿಯೇ ಅಂದಾಜು 20 ಕೋಟಿ ರು.ಗೂ ಹೆಚ್ಚಿನ ಹಣ ಖರ್ಚಾಗಲಿದೆ.

ಅಲ್ಲದೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿನ 14 ಸಾವಿರಕ್ಕೂ ಹೆಚ್ಚಿನವು ಸಾಮಾನ್ಯ ಸಾರಿಗೆ ಬಸ್‌ಗಳಿಗೆ ಸ್ಮಾರ್ಟ್‌ಕಾರ್ಡ್‌ ಟ್ಯಾಪ್‌ ಮಾಡುವುದಕ್ಕಾಗಿ ಬೇಕಾಗುವ ಯಂತ್ರವನ್ನು ಅಳವಡಿಸಬೇಕಿದೆ. ಪ್ರತಿಯಂತ್ರಕ್ಕೆ ಕನಿಷ್ಠ 5ರಿಂದ 6 ಸಾವಿರ ರು. ವೆಚ್ಚವಾಗುವ ಅಂದಾಜಿಸಲಾಗಿದೆ. ಅಲ್ಲದೆ, ಬಿಎಂಟಿಸಿಯ ಹಾಗೂ ರಾಜ್ಯದ ವಿವಿಧ ಮಹಾನಗರಗಳ ಶೇ. 99 ಬಸ್‌ಗಳು ಎರಡು ದ್ವಾರಗಳನ್ನು ಹೊಂದಿದ್ದು, ಆ ಎರಡೂ ದ್ವಾರಕ್ಕೂ ಯಂತ್ರ ಅಳವಡಿಸಬೇಕಿದೆ. ಹೀಗೆ ಯಂತ್ರ ಅಳವಡಿಕೆಗಾಗಿಯೇ 15 ಕೋಟಿ ರು.ಗೂ ಹೆಚ್ಚಿನ ವೆಚ್ಚ ಮಾಡಬೇಕಾಗಿದೆ.

ತಿಂಗಳು ಪೂರೈಸಿದ ಶಕ್ತಿ ಯೋಜನೆ: ಸರ್ಕಾರಿ ಬಸ್‌ಗಳಲ್ಲಿ 16.75 ಕೋಟಿ ಮಹಿಳೆಯರ ಉಚಿತ ಪ್ರಯಾಣ

ಸದ್ಯದ ಪರಿಸ್ಥಿತಿಯಲ್ಲಿ ಅಷ್ಟುಪ್ರಮಾಣದ ಹಣ ವ್ಯಯಿಸಲು ನಿಗಮಗಳಿಗೆ ಸಾಧ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಮಾಮೂಲಿ ಗುರುತಿನ ಚೀಟಿ ನೀಡಿ, ಮುಂದೆ ಸರ್ಕಾರದ ಅನುದಾನ ಪಡೆದು ಅಥವಾ ನಿಗಮಗಳ ಆರ್ಥಿಕ ಪರಿಸ್ಥಿತಿ ಬಲಗೊಂಡ ನಂತರ ಟ್ಯಾಪ್‌ ಆ್ಯಂಡ್‌ ಟ್ರಾವೆಲ್‌ ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಸ್ಟ್‌ ಅಂತ್ಯದಿಂದ ಮಾಮೂಲಿ ಸ್ಮಾರ್ಟ್‌ಕಾರ್ಡ್‌ ವಿತರಣೆ ಶುರು?

ಈ ಮುಂಚಿನ ಆಲೋಚನೆಯಂತೆ ಮಾಮೂಲಿ ಸ್ಮಾರ್ಟ್‌ಕಾರ್ಡನ್ನು (ಇದು ಟ್ಯಾಪ್‌ ಕಾರ್ಡ್‌ ಅಲ್ಲ. ಆಧಾರ್‌ ಕಾರ್ಡ್‌ ರೀತಿಯ ಮಾಮೂಲಿ ಸ್ಮಾರ್ಟ್‌ಕಾರ್ಡ್‌ ) ಆಗಸ್ಟ್‌ ಮಧ್ಯಭಾಗ ಅಥವಾ ಅಂತ್ಯಕ್ಕೆ ವಿತರಿಸುವ ಯೋಚನೆ ಸರ್ಕಾರಕ್ಕಿದೆ.
ಸದ್ಯ ರಾಜ್ಯ ಸರ್ಕಾರ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಯತ್ತ ಹೆಚ್ಚಿನ ಗಮನಹರಿಸಿದೆ. ಆ ಎರಡು ಯೋಜನೆಗಳ ಫಲಾನುಭವಿಗಳಿಂದ ಅರ್ಜಿ ಸ್ವೀಕಾರ, ಅವುಗಳ ಪರಿಶೀಲನೆ ಸೇರಿ ಇನ್ನಿತರ ಕಾರ್ಯಗಳನ್ನು ಮಾಡಬೇಕಿದೆ. ಹೀಗಾಗಿ ಶಕ್ತಿ ಯೋಜನೆಯ ಸ್ಮಾರ್ಟ್‌ಕಾರ್ಡ್‌ ವಿತರಣೆ ಬಗ್ಗೆ ಇನ್ನೂ ಚಿಂತನೆ ನಡೆಸಿಲ್ಲ. ಅಲ್ಲದೆ, ಸಾರಿಗೆ ಇಲಾಖೆ ಹಾಗೂ ನಾಲ್ಕೂ ನಿಗಮಗಳು ಕೂಡ ಸ್ಮಾರ್ಟ್‌ಕಾರ್ಡ್‌ ವಿತರಣೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಆಗಸ್ಟ್‌ ಮಧ್ಯಭಾಗ ಅಥವಾ ಅಂತ್ಯದಲ್ಲಿ ಸ್ಮಾರ್ಟ್‌ಕಾರ್ಡ್‌ ವಿತರಣಾ ಕಾರ್ಯಕ್ಕೆ ಚಾಲನೆ ನೀಡುವ ಬಗ್ಗೆ ಚರ್ಚಿಸಲಾಗಿದೆ. ಇದನ್ನು ನೀಡಿದ ಬಳಿಕ ಎಲ್ಲ ಪ್ರಯಾಣಿಕರೂ ಆಧಾರ್‌ ಕಾರ್ಡ್‌ ಅಥವಾ ಇತರ ಗುರುತು ಚೀಟಿ ತೋರಿಸುವುದು ತಪ್ಪಲಿದೆ.