ಬೆಂಗಳೂರು(ಡಿ.16): ಶತಮಾನದ ಇತಿಹಾಸವಿರುವ, ದೇಶದಲ್ಲೇ ಅತ್ಯಂತ ಗೌರವ, ಮನ್ನಣೆ ಗಳಿಸಿದ್ದ, ಉನ್ನತ ಪರಂಪರೆಗೆ ಮಾದರಿಯೆನಿಸಿದ್ದ ಕರ್ನಾಟಕ ವಿಧಾನಪರಿಷತ್ತು ತನ್ನ ಘನತೆಗೆ ಕಪ್ಪು ಮಸಿ ಬಳಿಯುವಂತಹ ಘಟನೆಗಳಿಗೆ ಸಾಕ್ಷಿಯಾಯಿತು. ಮಂಗಳವಾರ 20 ನಿಮಿಷದ ಕಲಾಪದಲ್ಲಿ ನಡೆದ ಈ ಅಮಂಗಳಕರ ಘಟನೆಗಳು, ‘ಬುದ್ಧಿಜೀವಿಗಳು ಹಾಗೂ ವಿಷಯ ತಜ್ಞರ ಮನೆಯಾಗಿದ್ದ ಮೇಲ್ಮನೆಯು ಕ್ರಮೇಣ ಪುಂಡರಂತಹ ವ್ಯಕ್ತಿತ್ವಗಳ ಆಟೋಟೋಪಕ್ಕೆ ಮೇಜುವಾನಿಯಾಗಿದೆ’ ಎಂಬ ಆರೋಪಗಳಿಗೆ ತಥ್ಯ ಒದಗಿಸಿದವು.

ಗ್ಲಾಸ್ ಪುಡಿ ಪುಡಿ, ಸಭಾಪತಿ ಪೀಠ ಧ್ವಂಸಕ್ಕೆ ಯತ್ನ; ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಹೊಡೆದಾಟ!

ಅಜೆಂಡಾದಲ್ಲೆ ಇರದಿದ್ದ ಸಭಾಪತಿಯವರ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ಮಾಡಿಸಿಬಿಡಬೇಕು ಎಂಬ ತಹತಹದಲ್ಲಿದ್ದ ಬಿಜೆಪಿ-ಜೆಡಿಎಸ್‌ ಸದಸ್ಯರು ಹಾಗೂ ಯಾವುದೇ ಕಾರಣಕ್ಕೂ ಇಂತಹ ಬೆಳವಣಿಗೆಗೆ ಆಸ್ಪದ ಅಸ್ಪದ ಕೊಡಬಾರದು ಎಂದು ಪಕ್ಷದಿಂದ ಫತ್ವಾ ಪಡೆದಿದ್ದವರಂತೆ ಸದನಕ್ಕೆ ಆಗಮಿಸಿದ್ದ ಕಾಂಗ್ರೆಸ್‌ ಸದಸ್ಯರು ಸದನದ ಗೌರವ ಮಣ್ಣುಪಾಲು ಮಾಡಿದರು.

ಕಲಾಪ ಆರಂಭವಾಗುತ್ತಿದ್ದಂತೆಯೇ ಬೀದಿ ಪುಂಡರಂತೆ ಪರಸ್ಪರ ನೂಕಾಟ, ಕೂಗಾಟ, ತಳ್ಳಾಟ, ಎಳೆದಾಟ ನಡೆಸಿದರು. ಸದನದ ಕರೆಗಂಟೆ ಮುಗಿಯುವ ಮುನ್ನವೇ ಓಡಿಹೋಗಿ ಸಭಾಪತಿ ಪೀಠದಲ್ಲಿ ಕುಳಿತ ಉಪ ಸಭಾಪತಿಯನ್ನು ದರದರನೇ ಎಳೆದುಹಾಕಲು ಕಾಂಗ್ರೆಸ್‌ ಸದಸ್ಯರು ಮುಂದಾದರೆ, ಇದನ್ನು ತಡೆದು ಉಪ ಸಭಾಪತಿ ಅವರನ್ನು ಖುರ್ಚಿಯಲ್ಲೇ ಕೂತಿರುವಂತೆ ನೋಡಿಕೊಳ್ಳಲು ಬಿಜೆಪಿ-ಜೆಡಿಎಸ್‌ ಸದಸ್ಯರು ಕುಸ್ತಿ ನಡೆಸಿದರು. ಸರ್ಕಾರದ ಕೋರಿಕೆ ಮೇರೆಗೆ ಮಂಗಳವಾರ ಕರೆಯಲಾಗಿದ್ದ ವಿಧಾನ ಪರಿಷತ್‌ನ ಒಂದು ದಿನದ ವಿಶೇಷ ಅಧಿವೇಶನ ವಿಧಾನಮಂಡಲದ ಇತಿಹಾಸದ ಪುಟಗಳಲ್ಲಿ ಕರಾಳ ಅಧ್ಯಾಯವಾಗಿ ದಾಖಲಾಯಿತು.

ಘಟನೆ ನಡೆದಿದ್ದು ಹೇಗೆ?:

ಸಂಪ್ರದಾಯದಂತೆ ಮುಖ್ಯ ಮಾರ್ಷಲ್‌ಗಳು ಬಂದು ಘೋಷಣೆ ಮಾಡಿದ ನಂತರವೇ ಸಭಾಪತಿ ಅಥವಾ ಉಪಸಭಾಪತಿಗಳು ಬಂದು ಪೀಠದಲ್ಲಿ ಆಸೀನರಾಗಿ ಕಲಾಪ ನಡೆಸಬೇಕು. ಆದರೆ 11.15ರ ಸಮಯದಲ್ಲಿ ಗಂಟೆ ಮೊಳಗುವ ಆಗುವ ಮುನ್ನವೇ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರು ಸಭಾಪತಿಗಳ ಪೀಠದಲ್ಲಿ ಆಸೀನರಾದರು.

ಇವತ್ತಿನ ಘಟನೆಗೆ ಬಿಜೆಪಿಯವರೇ ಕಾರಣ; ಕಾಂಗ್ರೆಸ್ ಎಂಎಲ್‌ಸಿ ನಾರಾಯಣ ಸ್ವಾಮಿ

ಧರ್ಮೇಗೌಡ ಅವರು ಪೀಠದಲ್ಲಿ ಆಸೀನರಾಗುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಎದ್ದು ಬಂದು ಪೀಠದ ಮುಂದೆ ಆಕ್ಷೇಪಿಸತೊಡಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ಸದಸ್ಯರು ಪೀಠದ ಮುಂದೆ ಧಾವಿಸಿದರು. ಈ ನಡುವೆ ಬಿಜೆಪಿಯ ಅರುಣ ಶಹಾಪುರ, ವೈ.ಎ. ನಾರಾಯಣಸ್ವಾಮಿ, ಪ್ರಾಣೇಶ್‌ ಅವರು ಸಭಾಪತಿಗಳು ತಮ್ಮ ಕಚೇರಿಯಿಂದ ಸದನಕ್ಕೆ ಆಗಮಿಸುವ ಬಾಗಿಲು ಮುಚ್ಚಿ ಚೀಲಕ ಹಾಕಿದರು. ಇದನ್ನು ನೋಡಿದ ಕಾಂಗ್ರೆಸ್ಸಿನ ನಜೀರ್‌ ಅಹಮದ್‌ ಮತ್ತಿತರರು ಧಾವಿಸಿ, ಬಾಗಿಲನ್ನು ಒದ್ದು ತೆಗೆದರು. ಈ ಮಧ್ಯ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರು ಪೀಠವನ್ನು ಸುತ್ತವರೆದು ನಿಂತುಕೊಂಡರು.

ಆಗ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ ಏಕಾಏಕಿ ಉಪಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರ ಕೈ ಹಿಡಿದು ಎಳೆಯತೊಡಗಿದರೆ, ಶ್ರೀನಿವಾಸ ಮಾನೆ ಮತ್ತಿತರರು ಇದಕ್ಕೆ ಸಾಥ್‌ ನೀಡಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಧರ್ಮೆಗೌಡ ಅವರನ್ನು ಹಿಡಿದುಕೊಂಡರು. ಆದರೆ ಕಾಂಗ್ರೆಸ್‌ ಸದಸ್ಯರು ಬಲವಂತವಾಗಿ ಉಪಸಭಾಪತಿ ಧರ್ಮೇಗೌಡ ಅವರನ್ನು ಪೀಠದಿಂದ ಕೆಳಗೆ ಎಳೆದುಕೊಂಡು ಬಂದರು. ಈ ಹಂತದಲ್ಲಿ ಉಭಯ ಪಕ್ಷಗಳ ಸದಸ್ಯರ ನಡುವೆ ತಳ್ಳಾಟ, ನೂಕಾಟ ನಡೆದು ಸದಸ್ಯರೊಬ್ಬರು ಕೆಳಕ್ಕೆ ಬಿದ್ದ ಪ್ರಸಂಗ ನಡೆಯಿತು.

ಇದಾದ ನಂತರ ಎಂ. ನಾರಾಯಣಸ್ವಾಮಿ ಮತ್ತಿತರರ ಕಾಂಗ್ರೆಸ್‌ ಸದಸ್ಯರು ಪೀಠದ ಮುಂದೆ ಹೋಗಿ ತಮ್ಮ ಪಕ್ಷದ ಸದಸ್ಯ ಚಂದ್ರಶೇಖರ್‌ ಪಾಟೀಲ್‌ ಅವರನ್ನು ಸಭಾಪತಿ ಪೀಠದಲ್ಲಿ ಕುಳ್ಳಿರಿಸಿದರು. ಈ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ಮಾತಿನ ಚಕಮಕಿ, ವಾಗ್ವಾದ ಜೋರಾಗಿ ನಡೆಯಿತು. ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿಅವರು ಸದಸ್ಯರನ್ನು ಸಮಾಧಾನಪಡಿಸಲು ಮಾಡಲು ಮುಂದಾದರೂ ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಬಿಜೆಪಿಯ ತೇಜಸ್ವಿನಿಗೌಡ, ಭಾರತೀ ಶೆಟ್ಟಿಅವರು ಚಂದ್ರಶೇಖರ್‌ ಪಾಟೀಲ್‌ ಅವರನ್ನು ಪೀಠದಲ್ಲಿ ಕುಳ್ಳಿರಿಸಿರುವುದು ಸರಿಯಲ್ಲ ಎಂದು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಕಾಂಗ್ರೆಸ್‌್ಸ ಸದಸ್ಯರು ಇರಲಿಲ್ಲ. ಈ ನಡುವೆ ಪ್ರತಿಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ ಅವರು ಪೀಠದ ಮುಂದಿದ್ದ ಗಾಜಿನ ಪೀಠವನ್ನು ಮುರಿದು ಹಾಕಿದರು.

'ಗಲಾಟೆಗೆ ಕಾಂಗ್ರೆಸ್ಸಿಗರು ಸಿದ್ಧರಾಗಿ ಬಂದಿದ್ದರು, ಇತಿಹಾಸದಲ್ಲಿ ನಡೆಯಬಾರದ ಘಟನೆಗೆ ಕಾರಣರಾದ್ರು'

ಇಷ್ಟಾದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ವಾಗ್ವಾದಗಳು ತಾರಕಕ್ಕೇರಿತು. ಇದರ ನಡುವೆ ಸಭಾಪತಿ ಪ್ರತಾಪಚಂದ್ರಶೆಟ್ಟಿಅವರು ಮಾರ್ಷಲ್‌ಗಳ ರಕ್ಷಣೆ ನಡುವೆ ಸದನಕ್ಕೆ ಆಗಮಿಸಿದರು. ಗಲಾಟೆ, ಗದ್ದಲಗಳ ಮಧ್ಯ ಪೀಠದಲ್ಲಿ ಸಹ ಕುಳಿತುಕೊಳ್ಳದೇ ಸದನವನ್ನು ಅನಿರ್ದಿಷ್ಟವಾಗಿ ಮುಂದೂಡುವುದಾಗಿ ಘೋಷಿಸಿ ಅಲ್ಲಿಂದ ತೆರಳಿದರು. ಇಷ್ಟಾದ ಮೇಲೂ ಕಾಂಗ್ರೆಸ್‌ ಸದಸ್ಯರು ಪೀಠದ ಸುತ್ತಲೂ ನಿಂತುಕೊಂಡರು.ಒಂದು ಹಂತದಲ್ಲಿ ಎಂ. ನಾರಾಯಣಸ್ವಾಮಿ ಅವರು ಪೀಠದಲ್ಲಿ ಆಸೀನರಾಗಿಬಿಟ್ಟರು.

ಸದನವನ್ನು ಮುಂದೂಡಿದ ಮೇಲೂ ಸಹ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರು ಸದನದಲ್ಲೇ ಇದ್ದು ವಾಗ್ವಾದ ಮುಂದುವರೆಸಿದರು.

ಹಿರಿಯರು ಮೂಕಪ್ರೇಕ್ಷಕ!

ಇಡೀ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ಉಂಟಾದಾಗ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರತಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌ ಅವರು ಸದಸ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದರಾದರೂ ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಅನಿವಾರ್ಯವಾಗಿ, ಕಾಂಗ್ರೆಸ್ಸಿನ ಕೆ.ಸಿ. ಕೊಂಡಯ್ಯ, ಬಿಜೆಪಿಯ ಎಚ್‌. ವಿಶ್ವನಾಥ್‌ ಮುಂತಾದವರು ಮೌನವಾಗಿ ತಮ್ಮ ಆಸನದಲ್ಲಿ ನೋಡುತ್ತಾ ಕುಳಿತು ಬಿಟ್ಟರು.

ಮಾರ್ಷಲ್‌ಗಳಿಂದ ರಕ್ಷಣೆ ಇಲ್ಲ

ಪೀಠದಲ್ಲಿ ಆಸೀನರಾಗಿದ್ದ ಉಪಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರನ್ನು ಕಾಂಗ್ರೆಸ್‌ ಸದಸ್ಯರು ಎಳೆಯತೊಡಗಿದಾಗ ಮಾರ್ಷಲ್‌ಗಳು ಅವರ ರಕ್ಷಣೆಗೆ ಹೋಗಲಿಲ್ಲ. ಆಗ ಬಿಜೆಪಿಯ ಕೆಲವು ಸದಸ್ಯರು ಮಾರ್ಷಲ್‌ಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಒಂದು ಸಂದರ್ಭದಲ್ಲಿ ಕಾಂಗ್ರೆಸ್‌ನ ನಸೀರ್‌ ಅಹಮದ್‌ ಅವರು ಮಾರ್ಷಲ್‌ಗಳ ಮೇಲೆ ಹರಿಹಾಯ್ದರಲ್ಲದೇ ಅವರನ್ನೇ ದೂಡಿದರು.

ಕೇವಲ 20 ನಿಮಿಷದಲ್ಲಿ ಅಂತ್ಯ

ಉಪಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರು ಪೀಠದಲ್ಲಿ ಆಸೀನರಾದ 11.15 ಗಂಟೆಯಿಂದ ಆರಂಭವಾದ ಗಲಾಟೆ, ಗದ್ದಲ, ತಳ್ಳಾಟ, ನೂಕಾಟದ ಘಟನೆಗಳು ತಾರಕ್ಕೇರಿ ಸಭಾಪತಿ ಪ್ರತಾಪಚಂದ್ರಶೆಟ್ಟಿಅವರು ಸದನವನ್ನು ಅನಿರ್ದಿಷ್ಟವಾಗಿ ಮುಂದೂಡುವಂತೆ ಘೋಷಿಸಿದಾಗ ಸಮಯ 11.35 ಆಗಿತ್ತು.