Asianet Suvarna News Asianet Suvarna News

ಮಂಡ್ಯ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಭರ್ಜರಿ ಲಾಬಿ: ಸಾಹಿತ್ಯೇತರ ಸಾಧಕರ ಪರಿಗಣಿಸಲು ಕೂಗು

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಪಟ್ಟಕ್ಕೆ ಕನ್ನಡ ಪುಸ್ತಕ ಬರೆಯುವ ಮಠಾಧೀಶರು, ಸಿನಿಮಾ ಸಾಹಿತಿಗಳು ಸೇರಿದಂತೆ ಕನ್ನಡದ ಅಭಿವೃದ್ಧಿಯಲ್ಲಿ ಕೈ ಜೋಡಿಸಿರುವ ಇತರೆ ಕ್ಷೇತ್ರಗಳ ಸಾಧಕರನ್ನು ಪರಿಗಣಿಸಬೇಕೆಂಬ ಕೂಗು ಜೋರಾಗಿ ಕೇಳಿಬಂದಿದೆ. 
 

Massive lobby for Mandya Sahitya Sammelana chairmanship Call for consideration of non literary achievers gvd
Author
First Published Aug 30, 2024, 6:29 AM IST | Last Updated Aug 30, 2024, 6:29 AM IST

ಸಂಪತ್ ತರೀಕೆರೆ

ಬೆಂಗಳೂರು (ಆ.30): ಸಕ್ಕರೆ ನಾಡು ಮಂಡ್ಯದಲ್ಲಿ ಡಿ.20ರಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಪಟ್ಟಕ್ಕೆ ಕನ್ನಡ ಪುಸ್ತಕ ಬರೆಯುವ ಮಠಾಧೀಶರು, ಸಿನಿಮಾ ಸಾಹಿತಿಗಳು ಸೇರಿದಂತೆ ಕನ್ನಡದ ಅಭಿವೃದ್ಧಿಯಲ್ಲಿ ಕೈ ಜೋಡಿಸಿರುವ ಇತರೆ ಕ್ಷೇತ್ರಗಳ ಸಾಧಕರನ್ನು ಪರಿಗಣಿಸಬೇಕೆಂಬ ಕೂಗು ಜೋರಾಗಿ ಕೇಳಿಬಂದಿದೆ. ಈವರೆಗೂ ಕತೆ, ಕಾವ್ಯ, ಕಾದಂಬರಿ, ನಾಟಕ ಪ್ರಕಾರಗಳಲ್ಲಿ ಸಾಧನೆ ಮಾಡಿದ ಸಾಹಿತ್ಯ ಸಾಧಕರನ್ನು ಮಾತ್ರ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತಿತ್ತು. 

ಆದರೆ, ಇದೇ ಮೊದಲ ಬಾರಿಗೆ ಕ್ರೀಡೆ, ಸಂಗೀತ, ಮಾಧ್ಯಮ, ನೃತ್ಯ, ಯಕ್ಷಗಾನ, ಸಿನಿಮಾ ಸಾಹಿತ್ಯ ಕ್ಷೇತ್ರದ ಸಾಧಕರನ್ನೂ ಕೂಡ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಅಭಿಪ್ರಾಯ, ಸಲಹೆಗಳ ಜೊತೆಗೆ ತೀವ್ರ ಲಾಬಿ ಸಹ ಆರಂಭವಾಗಿದೆ ಎನ್ನಲಾಗಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಕೃತಿಗಳನ್ನು ಪ್ರಕಟಿಸುವ ಮೂಲಕ, ನಾಟಕಗಳ ಮೂಲಕ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ದೇಶದೆಲ್ಲೆಡೆ ಪಸರಿಸುವಂತೆ ಮಾಡಿರುವ ಸಾಣೇಹಳ್ಳಿ ಸ್ವಾಮೀಜಿ, ಭಾಲ್ಕಿ ಹಿರೇಮಠದ ಮುಖ್ಯಸ್ಥ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ನಿಡುಮಾಮಿಡಿ ಪೀಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸೇರಿದಂತೆ ಯಾರಾದರೊಬ್ಬರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕೆಂದು ಅಭಿಮಾನಿಗಳು, ಭಕ್ತಾದಿಗಳು, ಬೆಂಬಲಿಗರಿಂದ ಒತ್ತಾಯಗಳು ಕೇಳಿಬರುತ್ತಿವೆ.

ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ: ಯೋಗೇಶ್ವರ್‌ ಹೇಳಿಕೆಗೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ

ಇನ್ನು ನ್ಯಾಯಾಂಗ ಕ್ಷೇತ್ರದಿಂದ ಕನ್ನಡದಲ್ಲಿ ತೀರ್ಪು ನೀಡುವ ಮೂಲಕ ಮಾತೃಭಾಷೆಗೆ ಗೌರವ ತಂದುಕೊಟ್ಟ ವಿಶ್ರಾಂತ ನ್ಯಾ.ನಾಗಮೋಹನ್‌ದಾಸ್, ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾ.ಶಿವರಾಜಪಾಟೀಲ್, ಗೋಪಾಲಗೌಡ ಅವರನ್ನು ಕೂಡ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕೆಂಬ ಬೇಡಿಕೆಯಿದೆ ಎನ್ನಲಾಗಿದೆ. ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ಕಥೆ, ಚಿತ್ರಕತೆ, ಸಂಗೀತ, ಸಂಭಾಷಣೆ ಬರೆಯುತ್ತಿರುವ ಚಿತ್ರ ಸಾಹಿತಿಗಳಾದ ಹಂಸಲೇಖರನ್ನು ಸರ್ವಾಧ್ಯಕ್ಷರ ಪಟ್ಟಕ್ಕೆ ಆಯ್ಕೆ ಮಾಡಬೇಕೆಂದು ಹಲವರು ಒತ್ತಾಯಿಸಿದ್ದಾರೆ. ಕನ್ನಡ ನಾಡು ಕೇವಲ ಸಾಹಿತಿಗಳಿಂದ ಮಾತ್ರ ಅಭಿವೃದ್ಧಿಯಾಗಿಲ್ಲ.ಕನ್ನಡಪರ ಹೋರಾಟಗಾರರಿಂದಲೇ ಇಂದು ಕನ್ನಡ ನಾಡಿನಲ್ಲಿ ಹೊರರಾಜ್ಯಗಳ ವಲಸಿಗರ ದಬ್ಬಾಳಿಕೆ ಕಡಿವಾಣ ಬಿದ್ದಿದೆ. ಆದ್ದರಿಂದ ಕನ್ನಡ ನಾಡು, ನುಡಿ, ನೆಲ, ಜಲಕ್ಕಾಗಿ ಹೋರಾಡುತ್ತಲೇ ಜೀವನ ಸವೆಸಿರುವ ಹಲವು ಹೋರಾಟಗಾರರು ಕೂಡ ಸಮ್ಮೇಳ ನಾಧ್ಯಕ್ಷ ಸ್ಥಾನವನ್ನು ನಮಗೇಕೆ ಕೊಡಬಾರದು ಎಂದು ಅಧಿಕಾರಯುತವಾಗಿಯೇ ಕೇಳಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಿಳೆಯರ ಆದ್ಯತೆ ಆಗ್ರಹ: ಪ್ರತಿ ಸಮ್ಮೇಳನದಲ್ಲಿಯೂ ಪುರುಷರನ್ನೇ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾ ಗುತ್ತಿದೆ. ಲೇಖಕಿಯರು, ಕವಯತ್ರಿಗಳನ್ನು ನಿರ್ಲಕ್ಷಿಸ ಲಾಗುತ್ತಿದೆ ಎಂಬ ಆರೋಪಗಳು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇವೆ. ಇಲ್ಲಿಯವರೆಗೆ ಜರುಗಿದ 86 ಸಾಹಿತ್ಯ ಸಮ್ಮೇಳನಗಳಲ್ಲಿ ಕೇವಲ ನಾಲ್ಕು ಜನ ಮಹಿಳಾ ಸಾಹಿತಿಗಳನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸ ಲಾಗಿದೆ. ಉಳಿದಂತೆ 82 ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರು ಪುರುಷರೇ ಆಗಿದ್ದಾರೆ. ಹೀಗಾಗಿ ಈ ಬಾರಿ ಮಹಿಳಾ ಸಾಹಿತಿಗಳನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಬೇಡಿಕೆ ಮತ್ತೆ ಗರಿಗೆದರಿದೆ.

ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ನಡೆಯಲಿದೆ. ಕನ್ನಡದ ಅಭಿವೃದ್ಧಿಗಾಗಿ ಕೆಲಸ ಮಾಡಿರುವ ಬೇರೆ ಕ್ಷೇತ್ರದ ಸಾಧಕರನ್ನು ಪರಿಗಣಿಸಬೇಕೆಂಬ ಸಲಹೆಗಳು, ವ್ಯಕ್ತವಾಗುತ್ತಿವೆ. ಎಲ್ಲವನ್ನೂ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ.
• ಡಾ.ಮಹೇಶ್ ಜೋಶಿ ಅಧ್ಯಕ್ಷ, ಕಸಾಪ

ಬಿಜೆಪಿಗರು, ಆರೆಸ್ಸೆಸ್‌ ವಿರುದ್ಧ ರಾಜ್ಯ ಸರ್ಕಾರ ಕೆಐಎಡಿಬಿ ಭೂ ಪ್ರತ್ಯಸ್ತ್ರ: ಸಚಿವ ಎಂ.ಬಿ.ಪಾಟೀಲ್‌

ಕನ್ನಡ ಸಾಹಿತ್ಯ ಕ್ಷೇತ್ರವನ್ನು ಹೊರತುಪಡಿಸಿ ಬೇರೆ ಕ್ಷೇತ್ರದವರು ವಾರ್ಷಿಕ ಸಮ್ಮೇಳನ ಮಾಡಿ, ಆಯಾ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿಕೊಳ್ಳಲಿ. ಅದನ್ನು ಬಿಟ್ಟು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನೀಡುವುದು ಸರಿಯಲ್ಲ.
• ಬಂಜಗೆರೆ ಜಯಪ್ರಕಾಶ್, ಹಿರಿಯ ಸಾಹಿತಿ

Latest Videos
Follow Us:
Download App:
  • android
  • ios