ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ: ಯೋಗೇಶ್ವರ್ ಹೇಳಿಕೆಗೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ
ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯ ಟಿಕೆಟ್ ಸಿಗದಿದ್ದರೆ ಬಂಡಾಯವಾಗಿ ಅಥವಾ ಬೇರೆ ಪಕ್ಷ ಸೇರಿ ಸ್ಪರ್ಧೆ ಮಾಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಗ್ಗೆ ಬಿಜೆಪಿ ನಾಯಕರ ಎದುರೇ ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ನವದೆಹಲಿ (ಆ.30): ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯ ಟಿಕೆಟ್ ಸಿಗದಿದ್ದರೆ ಬಂಡಾಯವಾಗಿ ಅಥವಾ ಬೇರೆ ಪಕ್ಷ ಸೇರಿ ಸ್ಪರ್ಧೆ ಮಾಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಗ್ಗೆ ಬಿಜೆಪಿ ನಾಯಕರ ಎದುರೇ ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಚನ್ನಪಟ್ಟಣ ಉಪಚುನಾವಣೆಯ ಮೈತ್ರಿ ಅಭ್ಯರ್ಥಿಯ ಆಯ್ಕೆ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ದೆಹಲಿಯ ನಿವಾಸದಲ್ಲಿ ಗುರುವಾರವೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸಭೆ ನಡೆಯಿತು.
ಈ ವೇಳೆ ಅತೃಪ್ತಿ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರನ್ನು ಸಚಿವರಾದ ಜೋಶಿ ಹಾಗೂ ಸೋಮಣ್ಣ ಅವರು ಸಮಾಧಾನಪಡಿಸಿದರು. ಈ ವಿಷಯವನ್ನು ಸರಿಪಡಿಸುವ ಭರವಸೆಯನ್ನು ನೀಡಿದರು ಎಂದು ಮೂಲಗಳು ತಿಳಿಸಿವೆ. ರಾತ್ರಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ವಿ. ಸೋಮಣ್ಣ, ಸಂಸದ ಬೊಮ್ಮಾಯಿ, ಅಶ್ವತ್ಥ ನಾರಾಯಣ, ಎಂಎಲ್‌ಸಿ ಸಿ.ಟಿ.ರವಿ ಹಾಗೂ ಅರವಿಂದ ಬೆಲ್ಲದ್ ಪಾಲ್ಗೊಂಡಿದ್ದರು.
ಎಚ್‌ಡಿಕೆ ಸೇರಿದಂತೆ ಪ್ರತಿಪಕ್ಷ ನಾಯಕರ ಪ್ರಾಸಿಕ್ಯೂಷನ್‌ಗಾಗಿ ಆ.31ಕ್ಕೆ ಸಿಎಂ, ಡಿಸಿಎಂ ರಾಜಭವನ ಯಾತ್ರೆ!
ಸಭೆಯಲ್ಲಿ ಸಿ.ಪಿ.ಯೋಗೇಶ್ವರ್ ಗೆ ಟಿಕೆಟ್ ನೀಡುವ ಸಂಬಂಧ ಚರ್ಚೆ ನಡೆಯಿತು. ಈ ವೇಳೆ, ಕುಮಾರಸ್ವಾಮಿಯವರು ಯೋಗೇಶ್ವರ್ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ಅಂತಿಮವಾಗಿ, ಈ ಬಗ್ಗೆ ಹೈಕಮಾಂಡ್ ತೀರ್ಮಾನಕ್ಕೆ ಬಿಡಲು, ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸಲು ತೀರ್ಮಾನಿಸಲಾಯಿತು.
ಶುಕ್ರವಾರ ಬಿಜೆಪಿ ನಾಯಕರು ಸಂತೋಷ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ನಡ್ಡಾ ಭೇಟಿಗೂ ಅವಕಾಶ ಕೇಳಲಾಗಿದೆ.ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ , ಬಿಜೆಪಿ-ಜೆಡಿಎಸ್ ಒಟ್ಟಿಗೆ ಹೋದರೆ ಇಬ್ಬರಿಗೂ ಲಾಭ. ಹೀಗಾಗಿ, ಉಪ ಚುನಾವಣೆಯಲ್ಲೂ ಒಟ್ಟಿಗೆ ಹೋಗುವ ಬಗ್ಗೆ ಚರ್ಚೆ ನಡೆಸಲಾಗಿದೆ. ಟಿಕೆಟ್ ನೀಡುವ ಬಗ್ಗೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನಿಸುತ್ತದೆ. ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವುದೇ ನಮ್ಮ ಉದ್ದೇಶ ಎಂದರು.
ನಿಮ್ಮ ರಾಜಕೀಯ ಜೀವನದ ಕಪ್ಪುಚುಕ್ಕೆಯನ್ನು ವೈಟ್ನರ್ ಅಳಿಸೀತಾ?: ಕೇಂದ್ರ ಸಚಿವ ಎಚ್‌ಡಿಕೆ
ಬೆಳಗ್ಗೆಯೂ ಸಭೆ: ಈ ಮಧ್ಯೆ, ಗುರುವಾರ ಬೆಳಗ್ಗೆ ಜೋಶಿಯವರ ನಿವಾಸದಲ್ಲಿ ಬೆಳಗ್ಗೆ ಉಪಾಹಾರ ಸಭೆ ನಡೆಯಿತು. ಅದರಲ್ಲಿ ಯೋಗೇಶ್ವರ್ ಭಾಗಿಯಾಗಿದ್ದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ. ಜೆಡಿಎಸ್ ನಿಂದ ಟಿಕೆಟ್ ಕೊಟ್ಟರೂ ಸ್ಪರ್ಧೆ, ಬಿಜೆಪಿಯಿಂದ ನೀಡಿದರೂ ಸೈ. ಟಿಕೆಟ್ ಕೊಡದಿದ್ದರೆ ಬಿಎಸ್‌ಪಿ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲೂ ರೆಡಿ ಎಂದು ಯೋಗೇಶ್ವರ್ ಸಭೆಯಲ್ಲಿ ಮಾಹಿತಿ ಹಂಚಿಕೊಂಡರು ಎನ್ನಲಾಗಿದೆ.