Egg Scheme : ಶಾಲಾ ಮಕ್ಕಳಿಗೆ ಮೊಟ್ಟೆ ಆದೇಶ ವಾಪಸ್ ಪಡೆಯದಿದ್ದಲ್ಲಿ ಹೋರಾಟ, ಸ್ವಾಮೀಜಿಗಳಿಂದ ಎಚ್ಚರಿಕೆ
* ಮೊಟ್ಟೆ ವಿರುದ್ಧ ಸಿಡಿದೆದ್ದ ಸ್ವಾಮೀಜಿಗಳು
* ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಆದೇಶ ವಾಪಸ್ ಪಡೆಯುವಂತೆ ಒತ್ತಾಯ
* ಆದೇಶ ವಾಪಸ್ ಪಡೆಯದಿದ್ದಲ್ಲಿ ಹೋರಾಟದ ಎಚ್ಚರಿಕೆ
ಧಾರವಾಡ, (ಡಿ.04): ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ(Malnutrition) ಬಳಲುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಸಿಯೂಟದ ಜೊತೆ ಮಕ್ಕಳಿಗೆ ಮೊಟ್ಟೆ (Egg) ಹಾಗೂ ಬಾಳೆಹಣ್ಣು(Banana) ನೀಡುವಂತೆ ಇತ್ತೀಚೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ,ಇದು ಪರ-ವಿರೋಧಕ್ಕೆ ಕಾರಣವಾಗಿದೆ.
ಹೌದು...ಶಾಲೆಯ್ಲಲಿ ಮೊಟ್ಟೆ ಕೊಡುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಕೆಲ ಸ್ವಾಮೀಜಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ(Basavaraj Bommai) ಒತ್ತಾಯಿಸಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಕೋಳಿ ಮೊಟ್ಟೆ ಕೊಡುವ ಆದೇಶವನ್ನು ವಾಪಸ್ ಪಡೆಯಲು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಲಿಂಗಾಯತ ಧಮ೯ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಚನ್ನಬಸವಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.
Malnutrition In Children: ರಾಜ್ಯದ 7 ಜಿಲ್ಲೆ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ
ಇದು ಭಾರೀ ಚೆರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೊಟ್ಟೆ ಬಗ್ಗೆ ಪರ-ವಿರೋಧ ವಾದಗಳು ಆಗುತ್ತಿವೆ. ಮೊಟ್ಟೆ ತಿನ್ನದವರು ಬಾಳೆಹಣ್ಣು ತಿನ್ನಬಹುದು ಎಂದು ಹೇಳುತ್ತಿದ್ರೆ, ಇನ್ನೂ ಕೆಲವರು ಮೊಟ್ಟೆ ಬದಲಿಗೆ ಮೊಳಕೆ ಕಾಳು ಕೊಡಲಿ ಎಂದು ಹೇಳುತ್ತಿದ್ದಾರೆ.
ಹೋರಾಟಕ್ಕೆ ಮಠಾಧೀಶರ ತೀರ್ಮಾನ
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಆದೇಶವನ್ನು ವಾಪಸ್ ಪಡೆಯದಿದ್ದಲ್ಲಿ ಹೋರಾಟ ನಡೆಸಲು ಮಠಾಧೀಶರ ಸಭೆಯಲ್ಲಿ ನಿರ್ಧರಿಸಲಾಗಿದೆ. ಧಾರವಾಡದಲ್ಲಿ ನಡೆದ ಮಠಾಧೀಶರ ಸಭೆಯಲ್ಲಿ ಆದೇಶ ವಾಪಸ್‌ಗೆ ಸರ್ಕಾರಕ್ಕೆ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಗಿದೆ.
ಇಂದು (ಡಿ.04) ಧಾರವಾಡದಲ್ಲಿ ಬಸವ ಧರ್ಮ ಪೀಠ ಅಡಿಯ ಆರು ಪೀಠಾಧಿಪತಿಗಳ ನೇತೃತ್ವದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠದಲ್ಲಿ ಸಭೆ ನಡೆಸಲಾಯಿತು. ಹದಿನೈದಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದರು. ಕೂಡಲ ಸಂಗಮ ಬಸವ ಧರ್ಮಪೀಠದ ಶ್ರೀ ಗಂಗಾದೇವಿ ಮಾತಾಜಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮೊಟ್ಟೆ ವಿತರಿಸುವ ಆದೇಶ ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಆಗ್ರಹಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಆದೇಶ ವಾಪಸ್ ಪಡೆಯದಿದ್ದಲ್ಲಿ ಮುಂದೆ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.
ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮಾಡುತ್ತಿರುವುದೇಕೆ?
ಶಿಕ್ಷಣ ಇಲಾಖೆ ಅಪೌಷ್ಟಿಕತೆ, ರಕ್ತಹೀನತೆ ಹೊಂದಿರುವ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಮುಂದಾಗಿದ್ದು, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿತ್ತು. 7 ಜಿಲ್ಲೆಗಳ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ ವಿತರಣೆಗೆ ಮಾಡಲಾಗುತ್ತಿದ್ದು ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ. ಆದರೆ ಇದಕ್ಕೆ ಹಲವು ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಗೆ ರಾಷ್ಟ್ರೀಯ ಲಿಂಗಾಯತ ಧರ್ಮ, ಮಹಾ ಸಭಾ ಬಸವ ಮಂಟಪದ ಜಗದ್ಗುರುಗಳು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಕೋಳಿ ಮೊಟ್ಟೆ ಸಂಪೂರ್ಣವಾಗಿ ಮಾಂಸಾಹಾರವಾಗಿದೆ. ಮೊಟ್ಟೆ ಕೊಡುವುದರಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಸರ್ವಸಮ್ಮತ ಆಹಾರವನ್ನು ನೀಡಬೇಕು. ಶಾಲೆಯಲ್ಲಿ ಮೊಟ್ಟೆ ಕೊಡುವುದರಿಂದ ಸಸ್ಯಹಾರಿ, ಮಾಂಸಹಾರಿ ಎಂಬ 2 ಗುಂಪು ರಚನೆಯಾಗತ್ತೆ. ಹೀಗಾಗಿ ಸರ್ಕಾರ ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಯಾದಗಿರಿ (Yadgir) ಜಿಲ್ಲೆಯಲ್ಲಿ ಶೇಕಡಾ 74, ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 72.4, ಬಳ್ಳಾರಿ(BellarY) ಜಿಲ್ಲೆಯಲ್ಲಿ ಶೇಕಡಾ 72.3, ಕೊಪ್ಪಳ(Koppal) ಜಿಲ್ಲೆಯಲ್ಲಿ ಶೇಕಡಾ 70.7, ರಾಯಚೂರು(Raichur) ಜಿಲ್ಲೆಯಲ್ಲಿ ಶೇಕಡಾ 70.6, ಬೀದರ್(Bidar) ಜಿಲ್ಲೆಯಲ್ಲಿ ಶೇಕಡಾ 69.1, ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 68 ಮಕ್ಕಳಿಗೆ ಅಪೌಷ್ಟಿಕತೆ ಸಮಸ್ಯೆ ಕಂಡುಬಂದಿದೆ.
ಏಳು ಜಿಲ್ಲೆಗಳ 14 ಲಕ್ಷಕ್ಕೂ ಹೆಚ್ಚು ಮಕ್ಕಳು ರಕ್ತಹೀನತೆಯಿಂದಲೂ ಬಳಲುತ್ತಿರುವ ಬಗ್ಗೆ ತಿಳಿದುಬಂದಿದೆ. ಅಪೌಷ್ಟಿಕತೆ ರಕ್ತಹೀನತೆ ಬಳಲುವಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ ನಿಂದ ಮೊಟ್ಟೆ ಬಾಳೆಹಣ್ಣು ವಿತರಿಸಲು ಸರ್ಕಾರದ ನಿರ್ಧಾರ ಕೈಗೊಳ್ಳಲಾಗಿದೆ.
6 ರಿಂದ 15ನೇ ವಯೋಮಾನವರೆಗಿನ ಒಟ್ಟು 14,44,322 ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದೊಂದಿಗೆ ಪ್ರತಿ ಮಾಹೆಗೆ 12 ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸಲು ಸುತ್ತೋಲೆ ಹೊರಡಿಸಿದ್ದು, ಒಂದು ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ವಿತರಿಸಲು ಕ್ರಮಕೈಗೊಳ್ಳುವಂತೆ ಸರ್ಕಾರ ತಿಳಿಸಿದೆ.